ಬೆಂಗಳೂರು: ರಾಜಕಾರಣ ನಿಂತ ನೀರಲ್ಲ, ಮೇಲೆ ಇದ್ದೋರು ಕೆಳಗೆ ಬರಬೇಕು, ಕೆಳಗೆ ಇದ್ದೋರು ಮೇಲೆ ಬರಬೇಕು. ಜನರು ಮನಸ್ಸು ಮಾಡಿದರೆ ಕುರ್ಚಿ ಮೇಲೂ ಕೂರಿಸ್ತಾರೆ, ಕುರ್ಚಿಯಿಂದನೂ ಇಳಿಸ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರ(ಅ.7) ಬೆಂಗಳೂರಿನ ಓಕಳೀಪುರಂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಹಿಂದೆ ದಿನೇಶ್ ಗುಂಡೂರಾವ್ ಅವರನ್ನು ಸೋಲಿಸಲು ಬಂದಿದ್ದೆ. ನಾನು ಆಗ ಜನತಾದಳದಲ್ಲಿದ್ದೆ, ಗೋವಿಂದರಾಜ್ ಅಂದು ನಮ್ಮ ಅಭ್ಯರ್ಥಿಯಾಗಿದ್ದರು. ಜನರು ಮನಸ್ಸು ಮಾಡಿದರೆ ಕುರ್ಚಿ ಮೇಲೂ ಕೂರಿಸ್ತಾರೆ, ಕುರ್ಚಿಯಿಂದನೂ ಇಳಿಸ್ತಾರೆ. ದಿನೇಶ್ ಗುಂಡೂರಾವ್ ನನ್ನ ಸಂಪುಟದಲ್ಲಿ ಮಂತ್ರಿ ಆಗಿದ್ದರು. ಮಂತ್ರಿ ಸಾಕು ಪಕ್ಷದ ಕೆಲಸ ಮಾಡಿ ಎಂದು ಹೇಳಿದಾಗ, ಅವರು ಬೇಡ ನಾನು ಮಂತ್ರಿ ಆಗಿರ್ತೇನೆ ಎಂದು ಹೇಳಲಿಲ್ಲ. ಆಯ್ತು ಎಂದು ಕಾರ್ಯಾಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದರು. ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.


ರಾಜಕಾರಣ ನಿಂತ ನೀರಲ್ಲ, ಮೇಲೆ ಇದ್ದೋರು ಕೆಳಗೆ ಬರಬೇಕು, ಕೆಳಗೆ ಇದ್ದೋರು ಮೇಲೆ ಬರಬೇಕು ಉತ್ತಮ ಕಾರ್ಯಕ್ರಮಗಳನ್ನ ನೀಡಿದಾಗಲೂ ಜನ ನಮಗೆ ಮತ್ತೊಮ್ಮೆ ಅವಕಾಶ ಕೊಡಲಿಲ್ಲ. ಜನ ಜಾತಿ, ಧರ್ಮ ನೋಡಿ ಮತ ಹಾಕಿದರು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.


ಕಾಂಗ್ರೆಸ್ನವರು ಹಿಂದೂ ವಿರೋಧಿಗಳು ಅಂತಾ ಹೇಳಿದ್ದರಂತೆ:
ನಿಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಬೇಕಾ? ನಿಮ್ಮ ದನಕರುಗಳು ಸುರಕ್ಷಿತವಾಗಿ ಕೊಟ್ಟಿಗೆಗೆ ಬರಬೇಕಾ? ಸುರಕ್ಷಿತವಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಬೇಕಾ?  ಎಂದೆಲ್ಲ ಹೇಳಿ ಬಿಜೆಪಿಯವರು ಮತ ಕೇಳಿದ್ದರು. ಹೀಗೆಂದು ಮಂಗಳೂರಿಗೆ ಹೋದಾಗ ಅಲ್ಲಿಯ ಜನರೇ ಹೇಳಿದ್ದರು. ನಾನೇನು ಪೂಜೆಯ ವಿರೋಧಿಯಲ್ಲ.  ನನ್ನ ಹೆಂಡತಿ ಪ್ರತಿ ದಿನವೂ ಪೂಜೆ ಮಾಡ್ತಾರೆ.‌ ನಾನು ಹೇಗೆ ಹಿಂದು ವಿರೋಧಿ? ಎಂದು ಪ್ರಶ್ನಿಸಿದ ಅವರು, ನಾನು ಎಲ್ಲ‌ ಧರ್ಮದವರನ್ನು ಪ್ರೀತಿಸುತ್ತೇನೆ. ಜೀವರಕ್ಷಣೆಗಾಗಿ ವ್ಯಕ್ತಿಗೆ ನೀಡುವ ರಕ್ತದ ಮೇಲೆ ಜಾತಿ ಹೆಸರು ಬರೆದಿರುವುದಿಲ್ಲ. ಆಗ ರೋಗಿಯ ಜೀವ ಅಮೂಲ್ಯ, ಜಾತಿ ಮುಖ್ಯವಾಗುವುದಿಲ್ಲ. ಇದನ್ನು ಹೇಳಿದ ನನ್ನನ್ನು ಹಿಂದೂ ವಿರೋಧಿ ಎಂದರು. ಇಂತಹ ಅಪಪ್ರಚಾರಗಳಿಂದಲೇ ಚುನಾವಣೆಯಲ್ಲಿ ನಮಗೆ ಸೋಲಾಯಿತು. ಆದರೆ ಇದು ಲೋಕಸಭಾ ಚುನಾವಣೆಯಲ್ಲಿ ಆಗಬಾರದು ಎಂದು ಮನವಿ ಮಾಡಿದರು. ನಾನು ಯಾವ ಧರ್ಮದ ವಿರೋಧಿಯೂ ಅಲ್ಲ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಗೌರವದಿಂದ ಕಾಣುವ ಎಲ್ಲ ಧರ್ಮವನ್ನು ನಾನು ಗೌರವಿಸುತ್ತೇನೆ ಎಂದು ಅವರು ಹೇಳಿದರು.


ಜಾತಿ ವಿರೋಧಿ ಎನ್ನುವವರಿಗೆ ವೇದಿಕೆಯಲ್ಲೇ ಪಾಠ ಮಾಡಿದ ಮಾಜಿ ಸಿಎಂ:
ಟಿಪ್ಪುವನ್ನು ಯಾಕೆ ವಿರೋಧ ಮಾಡ್ತೀರಾ ? ಯಾಕೆ ಅವನು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲವೇ ? ನಾಡು ನುಡಿಗಾಗಿ ತನ್ನ ಮಕ್ಕಳನ್ನೇ ಒತ್ತೆ ಇಡಲಿಲ್ಲವೇ ? ಬೇರೆ ಯಾರಾದರೂ ಆಗಿದ್ದರೆ ಹೀಗೆ ಮಾಡ್ತಿದ್ರಾ? ಇತಿಹಾಸ ತಿರುಚುವ ಕೆಲಸವಾಗಿದೆ. ಸುಮ್ಮನೆ ಹಿಂದೂ ವಿರೋಧಿ ಅಂತಾ ಹಣೆ ಪಟ್ಟಿ ಕಟ್ಟಿಬಿಡೋದು ಎಂದು ಸಂತೋಷ ಗುರೂಜಿಗೆ ವೇದಿಕೆಯಲ್ಲೇ ಪಾಠ ಮಾಡಿದ ಮಾಜಿ ಸಿಎಂ, ಶೃಂಗೇರಿ ಮಠಕ್ಕೆ ಟಿಪ್ಪು ಕೊಡುಗೆ ಇಲ್ಲವೇ? ಪೂರ್ಣಯ್ಯರನ್ನು ಟಿಪ್ಪು ಏಕೆ ದಿವಾನರನ್ನಾಗಿ ಮಾಡಿದ್ದು? ಶ್ರೀರಂಗಪಟ್ಟಣಕ್ಕೆ ಟಿಪ್ಪು ಕೊಡುಗೆ ಇಲ್ಲವೇ? ಹೆಚ್ಚು ಹಿಂದುಗಳಿಗೆ ಅವನ ಆಸ್ಥಾನದಲ್ಲಿ ಸ್ಥಾನ ನೀಡಿರಲಿಲ್ಲವೇ? ಹಿಂದು, ಜಾತಿ, ಧರ್ಮದ ಹೆರಸಲ್ಲಿ ನಮ್ಮನ್ನ ಸೋಲಿಸಲಾಯಿತು. ಇದು ಅಫೀಮ್ ಇದ್ದಂಗೆ ಎಂದು ತಿಳಿಸಿದ ಸಿದ್ದರಾಮಯ್ಯ, ನನ್ನ ದೇವರ ವಿರೋಧಿ ಅಂತಾರೆ. ಶ್ರೀಕೃಷ್ಣ ,ಕಿತ್ತೂರು ಚೆನ್ನಮ್ಮ ,ಭಗೀರಥ, ನಾರಾಯಣಗುರು,ಟಿಪ್ಪು, ವಿಶ್ವಕರ್ಮ, ದೇವರದಾಸಿಮಯ್ಯ ಸೇರಿ ಹಲ ಮಹನೀಯರ ಜಯಂತಿ ಆಚರಣೆ ಆರಂಭಿಸಿದ್ದು ನಾನು. ಇದರ ನಂತರವೂ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ವಿಧಾನಸಭೆ ಚುನಾವಣೆಗೆ ಮುನ್ನ ಅಪಪ್ರಚಾರ ಮಾಡಿದರು ಎಂದರು.