)
ಸಚಿವ ಸ್ಥಾನದಿಂದ ಕಿಕ್ ಔಟ್ ಆಗಿದ್ದ ಸಹಕಾರ ಖಾತೆಯ ಕೆ.ಎನ್.ರಾಜಣ್ಣಗೆ ಮತ್ತೊಂದು ಸ್ಥಾನ ಒಲಿದು ಬಂದಿದೆ. ಇದು ಅವರ ಅಪಾರ ಅಭಿಮಾನಿಗಳಲ್ಲಿ ತುಸು ಸಮಾಧಾನ ತರುವಂತೆ ಮಾಡಿದೆ. ಮತ್ತೊಮ್ಮೆ ಸಚಿವನಾಗುವೆ ಅಂತಾ ಘೋಷಣೆ ಮಾಡಿಕೊಂಡಿರುವ ಕೆ.ಎನ್. ರಾಜಣ್ಣಗೆ ಮೊದಲ ಜಯ ಸಿಕ್ಕಂತಾಗಿದೆ.
ಒಂದಲ್ಲ ಎರಡಲ್ಲ ಬರೋಬರಿ ಏಳನೇ ಬಾರಿಗೆ ಗೆಲ್ಲುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರ ಅಂತಾ ತಮ್ಮನ್ನ ತಾವು ಬಿಂಸಿಕೊಂಡಿದ್ದಾರೆ ಮಾಜಿ ಸಚಿವ ಕೆ.ಎನ್.ರಾಜಣ್ಣ. ಇದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಚುನಾವಣೆ. ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. 14 ನಿರ್ದೇಶಕರ ಚುನಾವಣೆಗೆ 10 ತಾಲೂಕಿನಿಂದಲೂ ನಾಮಪತ್ರ ಸಲ್ಲಿಸಲಾಗಿತ್ತು. ಆ ಪೈಕಿ ರಾಜಣ್ಣ ಸೇರಿ 8 ಮಂದಿ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 6 ನಿರ್ದೇಶಕ ಸ್ಥಾನಗಳಿಗೆ ಕಳೆದ ಆಗಸ್ಟ್ 24 ರಂದು ಚುನಾವಣೆ ನಡೆದು, ಅಂದೇ ಫಲಿತಾಂಶ ಹೊರಬಿದ್ದಿತ್ತು. ವಿಶೇಷ ಎಂದರೆ ಅಲ್ಲೂ ಕೂಡ ಕೆ.ಎನ್.ಆರ್ ಬೆಂಬಲಿಗರು ಗೆದ್ದು ಬೀಗಿದ್ದರು. ಇಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ರಾಜಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಪರಿಣಾಮ ಅವರೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಇದನ್ನೂ ಓದಿ : ಸೆಪ್ಟಂಬರ್ 5 ರಂದು ಶಾಲೆಗಳಿಗೆ ರಜೆ ಘೋಷಣೆ
ಡಿಸಿಸಿ ಬ್ಯಾಂಕ್ ಚುನಾವಣೆ ಹೊತ್ತಲ್ಲೇ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟವನ್ನೂ ಕಳೆದುಕೊಳ್ಳುತ್ತಾರಾ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಸಚಿವ ಸ್ಥಾನ ಹೋದ ಮೇಲೂ ಸತತ ಏಳನೇ ಬಾರಿಯೂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮೂಲಕ ರಾಜಣ್ಣ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.
ಇನ್ನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕುಣಿಗಲ್ ಶಾಸಕ ರಂಗನಾಥ್, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಮಾಜಿ ಸಚಿವ ಮಾಧುಸ್ವಾಮಿ ಬೆಂಬಲಿಗರನ್ನ ಡಿಸಿಸಿ ಬ್ಯಾಂಕ್ ಅಖಾಡಕ್ಕೆ ಇಳಿಸಿ ಕೆ.ಎನ್.ಆರ್ ಗೆ ಸೋಲುಣಿಸಲು ತಂತ್ರಗಾರಿಕೆ ಹೆಣೆಯಲಾಗಿತ್ತು. ಆದರೆ ಜಿಲ್ಲೆಯ 10 ತಾಲೂಕುಗಳಲ್ಲಿಯೂ ರಾಜಣ್ಣ ಬೆಂಬಲಿಗರ ತಂಡವೇ ಗೆದ್ದು ಬೀಗಿದೆ. ಮತ್ತೊಮ್ಮೆ ರಾಜಣ್ಣ ಅವರೇ ಡಿಸಿಸಿ ಬ್ಯಾಂಕ್ ಪಟ್ಟ ಅಲಂಕರಿಸುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ರಾಜಣ್ಣಗೆ ಬೃಹತ್ ಹಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.
ಇದನ್ನೂ ಓದಿ : ಆಸ್ತಿಗಾಗಿ ತಂದೆಗೆ ಮಗನಿಂದ ಬ್ಲಾಕ್ ಮೇಲ್