Fertilizer supply to farmers: ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿ ಕೊಂದ ಹಿನ್ನೆಲೆಯುಳ್ಳ ನೀವು ಈಗ ರೈತಪರ ಎಂದು ಬಿಂಬಿಸಿಕೊಳ್ಳುವ ಭರದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಯಾರ ವಿರುದ್ಧ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರೈತರಿಗೆ ರಸಗೊಬ್ಬರ ಪೂರೈಕೆ ವಿಚಾರವಾಗಿ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ʼದೇಶದಲ್ಲಿ ಗೊಬ್ಬರ ವಿತರಣೆ ಮತ್ತು ಪೂರೈಕೆಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಆ ಇಲಾಖೆ, ಗೊಬ್ಬರದ ಕಾರ್ಖಾನೆ ರಾಜ್ಯ ಸರ್ಕಾರದ ಬಳಿ ಇಲ್ಲ. ಕೇಂದ್ರ ಕೊಡುವುದನ್ನು ಸಮರ್ಪಕವಾಗಿ ಹಂಚಿಕೆ ಮಾಡುವುದಷ್ಟೇ ರಾಜ್ಯ ಸರ್ಕಾರದ ಕೆಲಸʼ ಎಂದು ಹೇಳಿದೆ.
ಕೇಂದ್ರ ಸರ್ಕಾರ 2025ನೇ ಖಾರಿಫ್‌ಗೆ ಕರ್ನಾಟಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾವನ್ನು ಹಂಚಿಕೆ ಮಾಡಿದೆ. ಆದರೆ ಇಲ್ಲಿಯವರೆಗೆ ಸರಬರಾಜು ಮಾಡಿರುವುದು ಕೇವಲ 5,16,959 ಮೆಟ್ರಿಕ್ ಟನ್ ಮಾತ್ರ. ರಾಜ್ಯದಲ್ಲಿ ಏಪ್ರಿಲ್‌ನಿಂದ ಜುಲೈವರೆಗೆ 6,80,655 ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆ ಇದ್ದು, ರಾಜ್ಯದ ಮುಖ್ಯಮಂತ್ರಿಗಳು ರೈತರರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲು ಅವಶ್ಯಕತೆ ಇರುವ 1,65,541 ಮೆಟ್ರಿಕ್ ಟನ್ ಯೂರಿಯಾವನ್ನು ಬಿಡುಗಡೆ ಮಾಡಲು ಕೇಂದ್ರ ಸಚಿವರಿಗೆ ಎರಡು ಬಾರಿ ಪತ್ರವನ್ನೂ ಬರೆದಿದ್ದಾರೆ. ಕೇಂದ್ರ ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಇಲಾಖೆ ವತಿಯಿಂದಲೂ ಏಪ್ರಿಲ್‌ನಿಂದ ಇಲ್ಲಿಯವರೆಗೆ ಆರು ಬಾರಿ ಪತ್ರಗಳನ್ನು ಬರೆದು ಹಂಚಿಕೆಗೆ ಅನುಗುಣವಾಗಿ ಅವಶ್ಯವಿರುವ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಲಾಗಿದೆʼ ಎಂದು ಹೇಳಿದೆ.
ಇದನ್ನೂ ಓದಿ: ಈ ದಿನದಂದು ಬರಲಿದೆ ಗೃಹಲಕ್ಷ್ಮಿ ಯೋಜನೆಯ 4000 ರೂ. ಪೆಂಡಿಂಗ್ ಹಣ! ಡೇಟ್ ನೋಡಿಕೊಂಡು ಖಾತೆ ಚೆಕ್ ಮಾಡಿ
ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲದೇ ಕೇಂದ್ರದ ಅಸಮರ್ಪಕ ಪೂರೈಕೆಯಿಂದ ಮಹಾರಾಷ್ಟ್ರ, ಗುಜರಾತ್, ಹರ್ಯಾಣ ಮತ್ತು ಬಿಹಾರ್ ಸೇರಿದಂತೆ ಹಲವು ರಾಜ್ಯಗಳಲ್ಲೂ ಗೊಬ್ಬರದ ಸಮಸ್ಯೆ ಎದುರಾಗಿದೆ. ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸುವುದಾದರೆ ಕೇಂದ್ರ ಕೃಷಿ ಸಚಿವರು, ರಾಸಾಯನಿಕ ಗೊಬ್ಬರ ಖಾತೆ ಸಚಿವರು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ರೈತರಿಗೆ ನ್ಯಾಯ ಕೊಡಿಸಲಿ. ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ರಾಜ್ಯದಲ್ಲಿ ರಸಗೊಬ್ಬರದ ಬೇಡಿಕೆಯನ್ನು ಪೂರೈಸುತ್ತಿದ್ದು, ಮಳೆ ಹೆಚ್ಚಾಗಿರುವ ಕಾರಣ ಕೃಷಿ ಚಟುವಟಿಕೆಯೂ ಹೆಚ್ಚಾಗಿದೆ ಜೊತೆಗೆ ಹೆಚ್ಚಿನ ರಸಗೊಬ್ಬರ ಬಳಸುವ ಬೆಳೆಯಾದ ಮೆಕ್ಕೆಜೋಳದ ವಿಸ್ತೀರ್ಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಮಾರು 2 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಾಗಿದ್ದು, ಇದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿ ಕೊಂದ ಹಿನ್ನೆಲೆಯುಳ್ಳ ನೀವು ಈಗ ರೈತಪರ ಎಂದು ಬಿಂಬಿಸಿಕೊಳ್ಳುವ ಭರದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಯಾರ ವಿರುದ್ಧ @BJP4Karnataka?
ದೇಶದಲ್ಲಿ ಗೊಬ್ಬರ ವಿತರಣೆ ಮತ್ತು ಪೂರೈಕೆಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಆ ಇಲಾಖೆ, ಗೊಬ್ಬರದ ಕಾರ್ಖಾನೆ ರಾಜ್ಯ ಸರ್ಕಾರದ ಬಳಿ…
— Karnataka Congress (@INCKarnataka) July 29, 2025
ಕೇಂದ್ರದಿಂದ ಪೂರೈಕೆ ಕಡಿಮೆಯಾದರೂ ರಾಜ್ಯದಲ್ಲಿ 3,46,499 ಮೆಟ್ರಿಕ್ ಟನ್ ಹಳೆ ಯೂರಿಯಾ ದಾಸ್ತಾನು ಉಳಿಕೆ ಇದ್ದು, ಕೇಂದ್ರದಿಂದ ಸರಬರಾಜಾದ ಯೂರಿಯಾ ಸೇರಿದಂತೆ 8,73,315 ಮೆಟ್ರಿಕ್ ಟನ್ ಒಟ್ಟು ಲಭ್ಯತೆ ಇದ್ದ ಯೂರಿಯಾದಲ್ಲಿ 7,08,859 ಮೆಟ್ರಿಕ್ ಟನ್ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ಈಗಾಗಲೇ ವಿತರಿಸಲಾಗಿದೆ. ರಾಜ್ಯ ಸರ್ಕಾರ ಗೊಬ್ಬರ ಹಂಚಿಕೆಯಲ್ಲಿ ತಾರತಮ್ಯ ಮಾಡಿದರೆ ಪ್ರಶ್ನಿಸಲಿ. ಸರ್ಕಾರ, ಕೃಷಿ ಇಲಾಖೆಯಿಂದ ಯಾವ ಯಾವ ಸೊಸೈಟಿಗಳಿಗೆ ಎಷ್ಟು ಹಂಚಲಾಗಿದೆ? ಯಾವ ಜಿಲ್ಲೆಯಲ್ಲಿ ಎಷ್ಟು ದಾಸ್ತಾನಿದೆ ಎಂಬುದನ್ನು ಪರಿಶೀಲನೆ ನಡೆಸಿ ವಾಸ್ತವ ಮಾತನಾಡಲಿ. ಬಿಜೆಪಿ ನಾಯಕರು ರಾಜ್ಯದ ಜನತೆಯನ್ನು, ರೈತರನ್ನು ಜನಪರ, ರೈತಪರ ಕಾಂಗ್ರೆಸ್ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕುತಂತ್ರ ನಿಲ್ಲಿಸಲಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರ ರೈತರಿಗೆ ಸಮರ್ಪಕವಾಗಿ ಯೂರಿಯಾ ಪೂರೈಸಲಿ: ಪ್ರತಿಯೊಬ್ಬ ರೈತನಿಗೂ ಗೊಬ್ಬರ ಸಿಗುವವರೆಗೂ ಬಿಜೆಪಿ ಹೋರಾಟ ಮಾಡಲಿದೆ!!









