ಇಂದು ಬಸ್ ನೌಕರರ ಪ್ರತಿಭಟನೆ; ಸಾರಿಗೆ ವ್ಯತ್ಯಯ ಸಾಧ್ಯತೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಒಕ್ಕೂಟ ಕರೆ ಕೊಟ್ಟಿರುವ ಮುಷ್ಕರಕ್ಕೆ ಸಾರಿಗೆ ಒಕ್ಕೂಟಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

Written by - Yashaswini V | Last Updated : Feb 20, 2020, 07:54 AM IST
ಇಂದು ಬಸ್ ನೌಕರರ ಪ್ರತಿಭಟನೆ; ಸಾರಿಗೆ ವ್ಯತ್ಯಯ ಸಾಧ್ಯತೆ title=

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಹಾಗೂ ಬಿಎಂಟಿಸಿ ಸಿಬ್ಬಂದಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲು ಮುಂದಾಗಿದ್ದು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.  ಬೆಂಗಳೂರು ಮಹಾನಗರ ಸಾರಿಗೆ ನಿಗಮ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ರಸ್ತೆ ಸಾರಿಗೆ ರಸ್ತೆ ನಿಗಮ ಮತ್ತು ವಾಯುವ್ಯ ರಸ್ತೆ ಸಾರಿಗೆ ನಿಗಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿವೆ.

ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ಗಳು ರಸ್ತೆಗಿಳಿಯುವುದೇ ಅನುಮಾನವಾಗಿದ್ದು, ಸಾರ್ವಜನಿಕರು ಹೊರ ಹೋಗುವ ಮೊದಲು ಒಮ್ಮೆ ಯೋಚಿಸಿ, ಕಚೇರಿಗೆ ಹೊರಡುವವರು ಸ್ವಲ್ಪ ಮುಂಚಿತವಾಗಿ ಹೊರಡುವುದು ಒಳ್ಳೆಯದು.

ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣ?
ಇಂದು ನಡೆಯಲಿರುವ ಮುಷ್ಕರದಲ್ಲಿ ಸಾರಿಗೆ ನಿಗಮಗಳ ಕಾರ್ಮಿಕರು ಹಾಗೂ ಇತರ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಹಾಗೂ ತಮ್ಮ ಹಲವು ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ನಾಲ್ಕು ಸಾರಿಗೆ ಸಂಸ್ಥೆಗಳ ಪ್ರತಿಭಟನಾ ನಿರತ ಚಾಲಕರು ಮತ್ತು ಕಂಡಕ್ಟರ್‌ಗಳು ತಮ್ಮ ಬೇಡಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಿಂದ ಫ್ರೀಡಂ ಪಾರ್ಕ್‌ಗೆ ತೆರಳಲಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದು, ಹಿರಿಯ ಕಾರ್ಯಕರ್ತ ಮತ್ತು ಬರಹಗಾರ ಪಾಟೀಲ್ ಪುಟ್ಟಪ್ಪ ಅವರು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಪಾಟೀಲ್ ಪುಟ್ಟಪ್ಪ, ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಕೂಡ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ನೌಕರರ ಒತ್ತಾಯಕ್ಕೆ ಮಣಿಯದೇ ಇದ್ದ ಕಾರಣ ಮತ್ತೆ ಬಿಎಂಟಿಸಿ ನೌಕರರು ಉಪವಾಸ ಸತ್ಯಾಗ್ರಹ ಮಾಡುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ಏರಲು ಮುಂದಾಗಿದ್ದಾರೆ.

ಸಾರಿಗೆ ಸಂಸ್ಥೆಗಳ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ, ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ) ಕಾರ್ಮಿಕರು 52 ದಿನಗಳ ಬೃಹತ್ ಪ್ರತಿಭಟನೆ ನಡೆಸಿದ ನಂತರ ಅದು ವೇಗವನ್ನು ಪಡೆಯಿತು.

Trending News