ಹಾಡಿನಿಂದ ಅಮರರಾದ ಗಾನಗಂಧರ್ವ ಎಸ್‌‍ಪಿಬಿ ನಿಧನಕ್ಕೆ ಹಲವು ರಾಜಕೀಯ ಗಣ್ಯರ ಸಂತಾಪ

ನಿನ್ನ ನೀನು ಮರೆತರೇನು ಸುಖವಿದೆ ?... ತನ್ನತನವ ತೊರೆದರೇನು ಸೊಗಸಿದೆ?... ಎಂದು ಅತ್ಯಂತ ಸೊಗಸಾಗಿ ಬದುಕಿನ ಅರ್ಥ ಸ್ಫುರಿಸುವಂತೆ ಹಾಡಿದ  ಎಸ್‌‍ಪಿಬಿ ಅವರು ನಿಜಕ್ಕೂ  ಅಮರರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ 

Updated: Sep 25, 2020 , 03:42 PM IST
ಹಾಡಿನಿಂದ ಅಮರರಾದ ಗಾನಗಂಧರ್ವ ಎಸ್‌‍ಪಿಬಿ ನಿಧನಕ್ಕೆ ಹಲವು ರಾಜಕೀಯ ಗಣ್ಯರ ಸಂತಾಪ

ಬೆಂಗಳೂರು: ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರು ಇಂದು ಅಸ್ತಂಗತರಾಗುವುದರೊಂದಿಗೆ ಚಲನಚಿತ್ರ ಸಂಗೀತದ ಒಂದು ಯುಗವೇ ಅಂತ್ಯವಾಯಿತು ಎಂದು ಹೇಳಲು ನನಗೆ ತೀವ್ರ ದುಃಖವಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ.

ಎಸ್‌‍ಪಿಬಿ (SPB) ಈಗ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರ ಮಾಧುರ್ಯ ಸಿರಿಕಂಠದ ಗೀತ, ಸಂಗೀತಗಳಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರಿಗೆ ಸಂಗೀತವೇ ಸರ್ವಸ್ವವಾಗಿತ್ತು ಎಂದು ಹೇಳಿದ್ದಾರೆ.

ಜೀವನಯಾನ ಮುಗಿಸಿದ ಗಾನಗಾರುಡಿಗ: ಖ್ಯಾತ ಗಾಯಕ 'ಎಸ್ ಪಿ ಬಾಲಸುಬ್ರಹ್ಮಣ್ಯಂ' ಇನ್ನಿಲ್ಲ

ನಿನ್ನ ನೀನು ಮರೆತರೇನು ಸುಖವಿದೆ ?... ತನ್ನತನವ ತೊರೆದರೇನು ಸೊಗಸಿದೆ?... ಎಂದು ಅತ್ಯಂತ ಸೊಗಸಾಗಿ ಬದುಕಿನ ಅರ್ಥ ಸ್ಫುರಿಸುವಂತೆ ಹಾಡಿದ  ಎಸ್‌‍ಪಿಬಿ ಅವರು ನಿಜಕ್ಕೂ  ಅಮರರಾಗಿದ್ದಾರೆ ಎಂದಿದ್ದಾರೆ.

ಗಾನ ಗಂದರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರಂಭದ ದಿನಗಳು...

ಎಸ್‌‍ಪಿಬಿ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದರೆ ಅವರ ಸೃಜನಶೀಲತೆಯ ಅಂತಃಸತ್ವ ಎಷ್ಟೊಂದು ಸಮರ್ಥವಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆದರೆ ಅವರ ಮೊದಲ ಪ್ರೀತಿ ಮತ್ತು ಒಲವು ಕನ್ನಡದ ಬಗ್ಗೆ ಇತ್ತು ಎಂಬುದು ಹೆಮ್ಮೆಯ ಸಂಗತಿ. ಅನೇಕ ಗೌರವ ಡಾಕ್ಟರೇಟ್ ಗಳಿಂದ ಹಿಡಿದು ಪದ್ಮ ಪ್ರಶಸ್ತಿವರೆಗೆ ಅನೇಕ ಪುರಸ್ಕಾರಗಳು ಅವರ ಪ್ರತಿಭೆಗೆ ಸಂದಿದ್ದವು ಎಂದು ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ. 

ಹೀಗೆ ಸರಸ್ವತಿಯ ಪುತ್ರರಾಗಿದ್ದ ಎಸ್‌‍ಪಿಬಿ ಅವರ ಪ್ರತಿಭೆಗೆ ಅವರೇ ಸಾಟಿ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ. ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಾಂತ್ವನಗಳು ಎಂದಿದ್ದಾರೆ.

ಕೊರೋನ ಮಹಾಮಾರಿಯಿಂದಾಗಿ ನಮ್ಮ ನಾಡು ಇತ್ತೀಚೆಗೆ ಹಲವು ಗಣ್ಯರನ್ನು ಕಳೆದುಕೊಂಡು ಆತಂಕದಲ್ಲಿದೆ. ಇವರ ಅಗಲಿಕೆಯನ್ನು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ದೇವರು ಕೊರೋನಾ ಪಿಡುಗಿಗೆ ಮುಕ್ತಿ ನೀಡಿ ನಾಡಿನ ಜನರಲ್ಲಿ ಸುಖಶಾಂತಿ ಸಮಾಧಾನ ನೆಲೆಸುವಂತೆ ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಜ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಹಲವು ಭಾಷೆಗಳ ಚಿತ್ರಗಳಲ್ಲಿ ಹಾಡಿ, ದಶಕಗಳ ಕಾಲ ನಮ್ಮೆಲ್ಲರನ್ನು ರಂಜಿಸಿದ್ದ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಿಬಾರದ ನಷ್ಟ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರೂ ಆದ ಸಿದ್ದರಾಮಯ್ಯ (Siddaramaiah) ದುಃಖ ವ್ಯಕ್ತಪಡಿಸಿದ್ದಾರೆ.

ಖ್ಯಾತ ಬಹುಭಾಷಾ ಗಾಯಕ ಹಾಗೂ ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ (S.P. Balasubramanyam) ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತೀವ್ರ ಸಂತಾಪ ಸೂಚಿಸಿದ್ದಾರೆ. 

'ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಮನಸ್ಸಿಗೆ  ಬೇಸರವಾಗಿದೆ. ಕಳೆದ ಮೂರು ದಿನಗಳಿಂದ ಒಂದಾದ ಮೇಲೊಂದರಂತೆ ಕೆಟ್ಟ ಸುದ್ದಿಗಳೇ ಬರುತ್ತಿರುವುದು ನೋವಿನ ವಿಚಾರ. ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು' ಎಂದಿದ್ದಾರೆ.

ಲಕ್ಷಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ಯಮ ನಿಷ್ಕರುಣಿ. ಹೀಗಾಗಿ ನಮ್ಮ ಪ್ರಾರ್ಥನೆ ಫಲಿಸಲಿಲ್ಲ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಾಲಸುಬ್ರಹ್ಮಣ್ಯಂ ತಮ್ಮ ಕಂಠ ಸಿರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅವರ ಸಾಧನೆಗೆ ಪದ್ಮ ಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ 6 ಬಾರಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.

ತಮ್ಮ ಸರಳತೆ, ವಿನಯತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದ ಎಸ್‌‍ಪಿಬಿ ಅವರ ನಿಧನದಿಂದ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದು ಅದ್ಭುತ ಯುಗವೇ ಅಂತ್ಯವಾದಂತಾಗಿದೆ. ಅವರ ಮುಗಿಲೆತ್ತರದ ಸಾಧನೆ ಹಾಗೂ ಹಾಡುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಾಲಸುಬ್ರಹ್ಮಣ್ಯಂ ಗಾನಸುಧೆಯ ಮೋಡಿಗೆ ಒಳಗಾದವರಲ್ಲಿ ನಾನೂ ಒಬ್ಬ - ಹೆಚ್.ಡಿ. ಕುಮಾರಸ್ವಾಮಿ 
ಕೊರೋನಾ ಸೋಂಕಿನಿಂದ ಎಸ್‌‍ಪಿಬಿ ಅವರು ಚೇತರಿಸಿಕೊಳ್ಳಲಾಗದೆ ಜೀವ ತೆತ್ತಿದ್ದು ಅತ್ಯಂತ ದುರ್ದೈವದ ಸಂಗತಿ. ಬಾಲಸುಬ್ರಹ್ಮಣ್ಯಂ ಗಾನಸುಧೆಯ ಮೋಡಿಗೆ ಒಳಗಾದವರಲ್ಲಿ ನಾನೂ ಒಬ್ಬ. ಮರುಜನ್ಮ ಎಂಬುದಿದ್ದರೆ ಕನ್ನಡನಾಡಿನಲ್ಲಿ ಹುಟ್ಟಲು ಬಯಸುತ್ತೇನೆ ಎಂಬ ಎಸ್ಪಿಬಿಯವರ ಮಾತು ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ.

ಎಸ್‌‍ಪಿಬಿ ಅವರ ನಿಧನದಿಂದ ಸಂಗೀತ ಲೋಕದಲ್ಲಿ ಶೂನ್ಯ ಸೃಷ್ಟಿಯಾಗಿದೆ. ತಮ್ಮ ಮಧುರ ಕಂಠದಿಂದ ಸಂಗೀತ ಪ್ರೇಮಿಗಳ ಮನಸೂರೆಗೊಂಡಿದ್ದ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ಭಗವಂತ ಕರುಣಿಸಲಿ.

ಸುಪ್ರಸಿದ್ಧ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವುಂಟಾಗಿದೆ. ಕನ್ನಡ ಸೇರಿದಂತೆ 16ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 40 ಸಾವಿರ ಹಾಡುಗಳನ್ನು ಹಾಡಿದ್ದ ಎಸ್ಪಿಬಿ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಅನುಕರಣೀಯ  ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ (HD Kumarswamy) ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ದೇಶ ಕಂಡ ಖ್ಯಾತ  ಗಾಯಕ ಬಾಲಸುಬ್ರಹ್ಮಣ್ಯಂ ಅವರ ನಿಧನ  ಸುದ್ದಿ ಕೇಳಿ ಮನಸ್ಸಿಗೆ ಅತೀವ  ಬೇಸರವಾಗಿದೆ- ಡಿಸಿಎಂ ಗೋವಿಂದ ಕಾರಜೋಳ ಸಂತಾಪ 
ಖ್ಯಾತ ಬಹುಭಾಷಾ ಗಾಯಕ ಹಾಗೂ ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ (Govind M Karajola) ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. 

'ಈ ದೇಶ ಕಂಡ ಖ್ಯಾತ  ಗಾಯಕ ಬಾಲಸುಬ್ರಹ್ಮಣ್ಯಂ ಅವರ ನಿಧನ  ಸುದ್ದಿ ಕೇಳಿ ಮನಸ್ಸಿಗೆ ಅತೀವ  ಬೇಸರವಾಗಿದೆ. ಕಳೆದ ಮೂರು ದಿನಗಳಿಂದ ಒಂದಾದ ಮೇಲೊಂದರಂತೆ ಕೆಟ್ಟ ಸುದ್ದಿಗಳೇ ಬರುತ್ತಿರುವುದು ನೋವಿನ ವಿಚಾರ. ಲಕ್ಷಾಂತರ ಅಭಿಮಾನಿಗಳು ಎಸ್ ಪಿ ಬಿ ಅವರ ಆರೋಗ್ಯ  ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು‌. ನಮ್ಮ ಪ್ರಾರ್ಥನೆ ಫಲಿಸಲಿಲ್ಲ' ಎಂದಿದ್ದಾರೆ.

ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಾಲಸುಬ್ರಹ್ಮಣ್ಯಂ ತಮ್ಮ ಕಂಠ ಸಿರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅವರ ಸಾಧನೆಗೆ ಪದ್ಮ ಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ 6 ಬಾರಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ ಎಂದು ಗೋವಿಂದ ಕಾರಜೋಳ ಸ್ಮರಿಸಿಕೊಂಡಿದ್ದಾರೆ.

ತಮ್ಮ ಸರಳತೆ, ವಿನಯತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದ ಎಸ್ ಪಿಬಿ ಅವರ ನಿಧನದಿಂದ ಸಿನಿಮಾ ಸಂಗೀತ ಕ್ಷೇತ್ರದಲ್ಲಿ  ತುಂಬಲಾರದ ನಷ್ಟ ವುಂಟಾಗಿದೆ. ಅವರ ಮುಗಿಲೆತ್ತರದ ಸಾಧನೆ ಹಾಗೂ ಹಾಡುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಡಿಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಕಂಬನಿ :-
ಅಮರ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನ ದೊಡ್ಡ ಶಾಕ್ ನೀಡಿದೆ. ಕನ್ನಡವೂ ಸೇರಿ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿ 17 ಭಾಷೆಗಳಲ್ಲಿ ಹಾಡಿ ಅಸಂಖ್ಯಾತ  ಅಭಿಮಾನಿಗಳನ್ನು ಹೊಂದಿದ್ದ ಸರ್ವಶ್ರೇಷ್ಟ ಗಾಯಕರಾಗಿದ್ದರು ಅವರು. ಕನ್ನಡದಲ್ಲಿ ಅವರು ಹಾಡಿರುವ ಹಾಡುಗಳೆಲ್ಲವೂ ಅಮೃತವೇ. ಬಂಧನ, ಅಮೃತವರ್ಷಿಣಿ, ಗಾನಯೋಗಿ ಪಂಚಾಕ್ಷರಿ ಗವಾಯಿ ಸೇರಿದಂತೆ ಅನೇಕ ಚಿತ್ರಗಳ ಹಾಡುಗಳು ಅಜರಾಮರವಾಗಿ ಉಳಿಯುತ್ತವೆ. ಬಾಲ್ಯದಿಂದಲೂ ನಾನು ಅವರ ಹಾಡುಗಳನ್ನು ಕೇಳಿಕೊಂಡೇ ಬೆಳೆದಿದ್ದೇನೆ ಎಂಬ ತೃಪ್ತಿ ನನ್ನದು. ಮುಖ್ಯವಾಗಿ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ʼಉಮಂಡುಗು ಮಂಡಗು” ಗೀತೆಗೆ ರಾಷ್ಟ್ರಪ್ರಶಸ್ತಿಯೂ ಬಂದಿತ್ತು ಎಂಬುದು ನಮ್ಮೆಲ್ಲರ ಹೆಮ್ಮೆ. ಕನ್ನಡವನ್ನು ಜೇನಿನಷ್ಟು ಸಿಹಿಯಾಗಿ,  ಹಾಲಿನಷ್ಟು ಹಿತವಾಗಿ ಮಾತನಾಡುತ್ತಿದ್ದರು.

ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ಅವರ ಅಭಿಮಾನಿ ಬಳಗಕ್ಕೂ, ಎಸ್ಪಿಬಿ ಅವರ ಕುಟುಂಬಕ್ಕೆ ಸಿಗಲಿ. ಈ ಅಗಲಿಕೆಯನ್ನು ಎದುರಿಸುವ ಮಾನಸಿಕ ಧೈರ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ (Dr CN Ashwathnarayan) ಕಂಬನಿ ಮಿಡಿದಿದ್ದಾರೆ.

Tags: