)
KSRTC Bus Strike LIVE: ಜನರಿಗೆ ತೊಂದರೆಯಾಗದಿರಲಿ: ಹೈಕೋರ್ಟ್
"ಜನಸಾಮಾನ್ಯರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು" ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಸಾರಿಗೆ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಿ ಹೇಳಿದೆ. ಮುಷ್ಕರ ಮುಂದುವರಿದರೆ, ಎಸ್ಮಾ ಕಾಯ್ದೆಯಡಿ ಕಾನೂನು ಕ್ರಮದ ಜೊತೆಗೆ ಬಂಧನದ ಎಚ್ಚರಿಕೆಯನ್ನೂ ನೀಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
KSRTC Bus Strike LIVE: ಒಕ್ಕೂಟದ ವಕೀಲರಿಂದ ತಕ್ಷಣ ಮುಷ್ಕರ ಮೊಟಕುಗೊಳಿಸುವ ಭರವಸೆ
ಹೈಕೋರ್ಟ್‌ನ ತರಾಟೆಗೆ ತಬ್ಬಿಬ್ಬಾದ ಜಂಟೆ ಕ್ರಿಯಾ ಸಮಿತಿಯ ಪರ ವಕೀಲರು, ಆಗಸ್ಟ್ 6ರಂದು (ನಾಳೆ) ಮುಷ್ಕರ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ. ಎರಡು ದಿನಗಳ ಕಾಲಾವಕಾಶ ಕೋರಿರುವ ವಕೀಲರು, ಜನರಿಗೆ ತೊಂದರೆಯಾಗದಂತೆ ಮುಷ್ಕರವನ್ನು ತಕ್ಷಣವೇ ಮೊಟಕುಗೊಳಿಸುವ ಭರವಸೆ ನೀಡಿದ್ದಾರೆ.
KSRTC Bus Strike LIVE: ಎಸ್ಮಾ ಜಾರಿ, ಕಾನೂನುಬಾಹಿರ ಕ್ರಮ ಎಂದ ಹೈಕೋರ್ಟ್
ಕರ್ನಾಟಕ ಸರ್ಕಾರವು ಈಗಾಗಲೇ ಎಸ್ಸೆನ್ಷಿಯಲ್ ಸರ್ವೀಸಸ್ ಮೇಂಟೆನೆನ್ಸ್ ಆಕ್ಟ್ (ಎಸ್ಮಾ) ಜಾರಿಗೊಳಿಸಿದ್ದು, ಡಿಸೆಂಬರ್ 31, 2025ರವರೆಗೆ ಯಾವುದೇ ಮುಷ್ಕರ ನಡೆಸುವುದನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ, ಮುಷ್ಕರ ನಿರ್ಧಾರವನ್ನು ಕಾನೂನುಬಾಹಿರ ಕ್ರಮ ಎಂದು ಬಣ್ಣಿಸಿರುವ ಹೈಕೋರ್ಟ್, ಒಕ್ಕೂಟದ ಪರ ವಕೀಲರಿಗೆ ಖಡಕ್ ಎಚ್ಚರಿಕೆ ನೀಡಿದೆ. ಮುಷ್ಕರ ಮುಂದುವರಿದರೆ ಎಸ್ಮಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದೆ.
KSRTC Bus Strike LIVE: ವೇತನ ಹೆಚ್ಚಳ ಒತ್ತಾಯಿಸಿ ಸಾರಿಗೆ ನೌಕರರ ಮುಷ್ಕರ ಘೋಷಣೆ ಹಿನ್ನೆಲೆ
ಮುಷ್ಕರ ರದ್ದು ಕೋರಿ ಸಲ್ಲಿಸಿದ್ದ PIL ಅರ್ಜಿ
ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ನಡೆಯಲಿರುವ ವಿಚಾರಣೆ.
ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ ಪೀಠ. ಮುಷ್ಕರ ಮುಂದುವರಿಸಿದರೆ ಎಸ್ಮಾ ಅಡಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ.
ಮುಷ್ಕರಕ್ಕೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ಎರಡು ದಿನ ವಿಸ್ತರಿಸಿದ ನ್ಯಾಯಾಲಯ. ಆಗಸ್ಟ್ ೭ಕ್ಕೆ ವಿಚಾರಣೆ ಮುಂದೂಡಿಕೆ.
KSRTC Bus Strike LIVE : ರಾಜ್ಯ ಸಾರಿಗೆ ನೌಕರರ ಮುಷ್ಕರಕ್ಕೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಕೇಂದ್ರ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಎಂಟ್ರಿಯಾಗಿದ್ದು, ಹಲವಾರು ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿದ್ದಾರೆ.
KSRTC Bus Strike Updates : ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಚಾಮರಾಜನಗರ ಡಿವಿಷನ್‌ನಲ್ಲಿ ಬಸ್ ಸಂಚಾರ ಭಾಗಶಃ ವ್ಯತ್ಯಯಗೊಂಡಿದೆ. ಈ ಕುರಿತು ಮಾತನಾಡಿದ KSRTC ಡಿಸಿ ಅಶೋಕ್ ಕುಮಾರ್.. ʼಇಂದು ಕಾರ್ಯಾಚರಣೆ ನಡೆಸಬೇಕಾದ 39 ಬಸ್‌ಗಳಲ್ಲಿ ಕೇವಲ 13 ಬಸ್‌ಗಳು ಮಾತ್ರ ಡಿಪೋದಿಂದ ಹೊರಟಿವೆ. ನೌಕರರ ಬರುವಿಕೆಗೆ ಕಾಯಲಾಗುತ್ತಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಅವರನ್ನು ಮನವೊಲಿಸಲಾಗುತ್ತಿದೆ. ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ 149 ಬಸ್‌ಗಳ ನೌಕರರು ಕಾರ್ಯದಲ್ಲಿದ್ದಾರೆ. ಒಟ್ಟು 429 ಬಸ್‌ಗಳಿದ್ದರೂ, ಯಾವುದೂ ಸಂಚರಿಸುತ್ತಿಲ್ಲ.. ಪೋಲಿಸ್ ಇಲಾಖೆ ಸಹಕರಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆʼ ಎಂದು ತಿಳಿಸಿದ್ದಾರೆ..
KSRTC Bus Strike Live Updates : ಸಾರಿಗೆ ನೌಕರರ ಮುಷ್ಕರದ ಪರಿಣಾಮ ಗಣಿನಾಡು ಬಳ್ಳಾರಿಯಲ್ಲಿಯೂ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಬಳ್ಳಾರಿಯಿಂದ ಹಳ್ಳಿಗಳಿಗೂ ನಗರಕ್ಕೂ ಪ್ರಯಾಣಿಸಬೇಕಾದ ಜನರು ಬಸ್‌ಗಳ ಕೊರತೆಯಿಂದ ಪರದಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸ್ ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.
KSRTC Bus Strike Live updates : ಸಾರಿಗೆ ನೌಕರರ ಮುಷ್ಕರದ ಪರಿಣಾಮವಾಗಿ ಸರ್ಕಾರ ಖಾಸಗೀ ಬಸ್‌ಗಳ ಮೊರೆ ಹೋಗಿದ್ದು, ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹಾಸನ, ಮಂಗಳೂರು, ಚಿಕ್ಕಬಳ್ಳಾಪುರ ಮಾರ್ಗಗಳಲ್ಲಿ ಖಾಸಗೀ ಬಸ್‌ಗಳು ಸಂಚರಿಸಲು ಪ್ರಾರಂಭಿಸಿವೆ. ಚಿಕ್ಕಬಳ್ಳಾಪುರಕ್ಕೆ 6, ಹಾಸನಕ್ಕೆ 4 ಮತ್ತು ಮಂಗಳೂರಿಗೆ 2 ಬಸ್‌ಗಳು ಆಗಮಿಸಿದ್ದು, ಸಮಯ ಜತೆಯಾಗಿ ಇತರೆ ಮಾರ್ಗಗಳಿಗೂ ಖಾಸಗೀ ಬಸ್‌ಗಳನ್ನೇ ನಿಯೋಜಿಸಲಾಗಿದೆ. KSRTC ಬಸ್‌ಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಲಾಂಗ್ ರೂಟ್‌ಗಳಲ್ಲಿ ಸಾರಿಗೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. KSRTC ಸಿಬ್ಬಂದಿಯಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Ramalinga Reddy on KSRTC Bus Strike : ಸಾರಿಗೆ ನೌಕರರ ಮುಷ್ಕರದ ಕುರಿತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ʼಜನರಿಗೆ ಅನಾನುಕೂಲವಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಕೋರ್ಟ್ ಗಿಂತ ದೊಡ್ಡವರು ಯಾರೂ ಇಲ್ಲ, ಸರ್ಕಾರ ಕೋರ್ಟ್ ಆದೇಶಕ್ಕೆ ಬದ್ದವಾಗಿದೆ, ಸಂಘಟನೆಗಳೂ ಬದ್ದವಾಗಬೇಕು..ʼ ಎಂದಿದ್ದಾರೆ..
Karnataka Bus Strike : ಸಾರಿಗೆ ನೌಕರರ ಪ್ರತಿಭಟನೆ ವಿಚಾರ ಇನ್ನೇನು ಕೆಲವೇ ಕ್ಷಣದಲ್ಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಲಿದೆ..ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಕೆ ಮಾಡಿರುವ ದೀಕ್ಷಾ ಎನ್ ಅಮೃತೇಶ್ ಅವರು ಜೀ ಕನ್ನಡ ಜೊತೆ ಮಾತನಾಡಿದ್ದು, ಸದ್ಯ ಸರ್ಕಾರ, ಸಾರಿಗೆ ಸಚಿವರು, ಸಾರಿಗೆ ಮುಖಂಡರ ಯುನಿಯಾನ್ ಬಣದ ಚಿತ್ತಾ ಹೈಕೋರ್ಟ್ ನತ್ತಾ ಎಂದಿದ್ದಾರೆ..
KSRTC Bus Strike LIVE: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಸರ್ಕಾರಿ ಬಸ್‌ಗಳಿಲ್ಲದ ಬದಲು ಖಾಸಗಿ ಬಸ್‌ಗಳು ನಿಲ್ದಾಣದೊಳಗೆ ದರ್ಬಾರ್ ನಡೆಸಿವೆ. ಶಿವಮೊಗ್ಗ, ಬೆಂಗಳೂರು, ಮೈಸೂರು ಸೇರಿದಂತೆ ಲಾಂಗ್ ರೂಟ್ ಮತ್ತು ತಾಲೂಕುಗಳಿಗೆ ಖಾಸಗಿ ಬಸ್‌ಗಳು ಹೊರಟಿವೆ. ಪರಿಸ್ಥಿತಿಯನ್ನು ಅವಲೋಕನೆ ಮಾಡಲೆಂದು ಎಸ್ಪಿ ವಿಕ್ರಂ ಅಮಟೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
Karnataka Bus Strike LIVE : ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಪರಿಣಾಮ ಕಲಬುರಗಿಯಲ್ಲೂ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು, ನೌಕರರು ಹಾಗೂ ದೂರದೂರಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ. ಯಾವುದೇ ಬಸ್ ರಸ್ತೆಗೆ ಇಳಿಯದೇ, ಆಸ್ಪತ್ರೆ ಮತ್ತು ಇತರೆ ಕಾರ್ಯಗಳಿಗಾಗಿ ಬಂದವರು ಮರಳಲು ಪರದಾಡುತ್ತಿದ್ದಾರೆ..
Karnataka Bus Strike LIVE : ಮಂಗಳವಾರ ಬೆಳಗ್ಗೆ ಕೆಲವೇ ಬಸ್‌ಗಳು ಸಂಚರಿಸಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಯಿತು. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯುವ ಸ್ಥಿತಿಗೆ ತಲುಪಿದರು. ಸಮರ್ಪಕ ಬಸ್ ಸಂಚಾರ ಇಲ್ಲದೇ ಪರದಾಟ ಹೆಚ್ಚಾಯಿತು.
Karnataka transport department : ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಹಾವೇರಿ-ಹುಬ್ಬಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಹಾವೇರಿ ಟು ಹುಬ್ಬಳ್ಳಿ ಹೋಗುತ್ತಿದ್ದ ಬಸ್‌ನಲ್ಲಿ ಮಹಿಳಾ ಕಂಡಕ್ಟರ್ "ಬಸ್ ಹೋಗಲ್ಲ, ಇಳಿರಿ" ಎಂದ ತಕ್ಷಣ ಪ್ರಯಾಣಿಕರು ಕಿರಿಕ್ ಆರಂಭಿಸಿದರು. "ಬೆಳಿಗ್ಗೆಯಿಂದ ಬಸ್ ಹೋಗ್ತಿತ್ತು, ಈಗ ಯಾಕೆ ಇಲ್ಲ?" ಎಂಬುದಾಗಿ ಪ್ರಶ್ನಿಸಿದ ಪ್ರಯಾಣಿಕರು ಕಂಟ್ರೋಲರ್ ಬಳಿ ಹೋಗಿ ವಾದಕ್ಕೆ ಇಳಿದರು. ಆದರೆ ಮಹಿಳಾ ಕಂಟ್ರೋಲರ್ “ನಮಗೆ ಗೊತ್ತಿಲ್ಲ, ಡಿಪೋದಲ್ಲಿ ಕೇಳಿ” ಎಂದು ಉತ್ತರಿಸಿದರು. ಪರಿಣಾಮ ಮುಷ್ಕರದ ಪರಿಣಾಮ ಪ್ರಯಾಣಿಕರಿಗೆ ತೀವ್ರ ಅಸೌಕರ್ಯ ಎದುರಾಗಿದೆ.
karnataka transport Strike : ವಿವಿಧ ಬೇಡಿಕೆಗಳ ಕುರಿತಾಗಿ ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಸ್ ಸಂಚಾರ ಮಿಶ್ರ ಸ್ಥಿತಿಯಲ್ಲಿದೆ. ಕೆವಲ ಕೆಲವು KSRTC ಬಸ್‌ಗಳು ಬೆಂಗಳೂರಿನತ್ತ ಹಾಗೂ ಜಿಲ್ಲೆಯಿಂದ ಬೇರೆ ಕಡೆಗಳಿಗೆ ಸಂಚರಿಸುತ್ತಿದ್ದು, ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಾಗೇಪಲ್ಲಿ, ಗೌರಿಬಿದನೂರು, ಬೆಂಗಳೂರು ಮಾರ್ಗದಲ್ಲಿ ಕೆಲ BMTC ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಕೆಲ ಚಾಲಕರು ಮತ್ತು ಕಂಡಕ್ಟರ್‌ಗಳು ಮುಷ್ಕರಕ್ಕೆ ಬೆಂಬಲ ನೀಡದೆ ಬಸ್ ಓಡಿಸುತ್ತಿರುವುದು ಗಮನಾರ್ಹವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ.
karnataka transport employees strike: ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಧಾರವಾಡದಲ್ಲಿ ಬಸ್ ಸಂಚಾರ ಗೊಂದಲದ ಪರಿಸ್ಥಿತಿಯಲ್ಲಿದೆ. ಕೆಲ ಸರ್ಕಾರಿ ಬಸ್‌ಗಳು ಬೆಳಗ್ಗೆ ಓಡಾಟ ಮಾಡಿದ್ದರೂ, ಈಗ ಬೆರಳನಿಕೆಯಲ್ಲಿ ಬಸ್ ಸಂಚಾರ ಕಂಡುಬರುತ್ತಿದೆ. ಬಹುತೇಕ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯದೇ, ಖಾಸಗಿ ಬಸ್‌ಗಳ ಸಂಚಾರ ಮಾತ್ರ ನಡೆಯುತ್ತಿದೆ. ಈ ಕಾರಣದಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ.
Bus strike 2025: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಶಾಲಾ ಮಕ್ಕಳ ಅನುಕೂಲಕ್ಕಾಗಿ ಮಾತ್ರ ಕೆಲ ಬಸ್‌ಗಳನ್ನು ಚಲಾಯಿಸಲಾಗುತ್ತಿದೆ. ಬಾಗಲಕೋಟೆ ನಗರ ಕೇಂದ್ರ ಬಸ್ ನಿಲ್ದಾಣದಿಂದ ಗಂಜಿಹಾಳ ಮತ್ತು ಸೋಕನಾದಗಿ ಗ್ರಾಮಗಳ ಕಡೆಗೆ ಬಸ್‌ಗಳು ತೆರಳಿದಿವೆ. ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪೊಲೀಸ್ ಬಂದೋಬಸ್ತ್ ಜೊತೆಗೆ ಬಸ್‌ಗಳನ್ನ ಕಳಿಸಲಾಗುತ್ತಿದ್ದು, "ಮುಷ್ಕರಕ್ಕೆ ಬೆಂಬಲವಿದೆ, ಆದರೆ ಮಕ್ಕಳನ್ನು ಶಾಲೆಗೆ ಕಳಿಸುವ ಕರ್ತವ್ಯ ಮಾಡಿದ್ದೇವೆ" ಎಂದು ಚಾಲಕರು ತಿಳಿಸಿದ್ದಾರೆ.
KSRTC-BMTC Bus strike : ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನ ಸಾರಿಗೆ ನೌಕರರ ಮುಷ್ಕರಕ್ಕೆ ಯಾವುದೇ ಬೆಂಬಲವಿಲ್ಲ. ವಿಮಾನ ನಿಲ್ದಾಣದಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಪ್ರತಿದಿನದಂತೆ ಇಂದು ಬೆಳಗ್ಗೆ ಕೂಡ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಸೇವೆ ನಿರ್ವಹಿಸಲಾಗಿದೆ. ಚಾಲಕರು ಮತ್ತು ನಿರ್ವಾಹಕರು “ಮುಷ್ಕರಕ್ಕೆ ಬೆಂಬಲವಿದೆ, ಆದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದೇವೆ. ಸಂಘಟನೆಯಿಂದ ನಿರ್ದೇಶನ ಬಂದರೆ ಮಧ್ಯಾಹ್ನದ ನಂತರ ವ್ಯತ್ಯಯ ಸಂಭವಿಸಬಹುದು” ಎಂದು ತಿಳಿಸಿದ್ದಾರೆ. KSRTC ಫ್ಲೈಬಸ್‌ಗಳೂ ಸಹ ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿವೆ.
Karnataka Bus Strike : ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರ ಯಾವುದೇ ಸ್ಪಷ್ಟ ಭರವಸೆ ನೀಡದ ಹಿನ್ನೆಲೆಯಲ್ಲಿ, ನೌಕರರು ಕೆಲಸಕ್ಕೆ ಹಾಜರಾಗದೆ ಮುಷ್ಕರ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳಲ್ಲಿ – KSRTC, BMTC, NWKRTC ಮತ್ತು KKRTC – ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರಧಾನ ಬೇಡಿಕೆಗಳಲ್ಲಿ, ಹಿಂಬಾಕಿ ವೇತನ, ಸೇವಾ ಭದ್ರತೆ, 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ, ಹಾಗೂ ನಿವೃತ್ತಿ ಸೌಲಭ್ಯಗಳ ಸಮರ್ಪಕ ಜಾರಿಗೆ ಒತ್ತಾಯವಿದೆ. ಈ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರದ ಮುಂದೆ ಮಂಡನೆ ಮಾಡಿದ್ದರೂ, ಸ್ಪಷ್ಟ ಬದ್ಧತೆ ಇಲ್ಲದೆ ಇರುವುದರಿಂದ ನೌಕರರು ನಿರಾಕಾರದಿಂದ ಮುಷ್ಕರಕ್ಕೆ ಇಳಿದಿದ್ದಾರೆ.