)
Chamarajanagar: ಚಾಮರಾಜನಗರ ಬಸ್ ನಿಲ್ದಾಣದಲ್ಲಿ ನಿನ್ನೆ ಸಂಜೆ ಅಚ್ಚರಿಯ ಘಟನೆ ನಡೆಯಿತು. ಪ್ರಥಮ ಡಿಗ್ರಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಪ್ರೀತಿಸಬೇಕೆಂದು ಒತ್ತಾಯಿಸಿದ ಯುವಕ, ತಾನು ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಎದೆಗೆ ಚಾಕು ಚುಚ್ಚಿಕೊಂಡು ಹುಚ್ಚಾಟ ನಡೆಸಿದ್ದಾನೆ.
ಮಾಹಿತಿ ಪ್ರಕಾರ, ಚಾಮರಾಜನಗರ ತಾಲೂಕಿನ ಸಾಣೆಗಾಲ ಗ್ರಾಮದ ಪ್ರದೀಪ್ ಎಂಬ ಯುವಕ ಈ ಹುಚ್ಚಾಟ ನಡೆಸಿದ್ದಾನೆ. ವಿದ್ಯಾರ್ಥಿನಿ ಬಸ್ ನಿಲ್ದಾಣದಲ್ಲಿ ಇದ್ದಾಗ ಆಕೆಯ ಬಳಿ ಬಂದು ಪ್ರೀತಿಸಬೇಕೆಂದು ಒತ್ತಾಯಿಸಿದ ಪ್ರದೀಪ್, ಆಕೆ ಸ್ಪಷ್ಟವಾಗಿ ನಿರಾಕರಿಸಿದ ಕೂಡಲೇ ತನ್ನ ಎದೆಗೆ ತಾನೇ ಚಾಕು ಇರಿದುಕೊಂಡಿದ್ದಾನೆ.
ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಗೊಂದಲ ಉಂಟಾಗಿ ಜನರು ಬೆಚ್ಚಿಬಿದ್ದರು. ತಕ್ಷಣವೇ ಸ್ಥಳೀಯರು ಗಾಯಾಳುವನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಚಾಮರಾಜನಗರ ಪಟ್ಟಣ ಠಾಣೆ ಪಿಐ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿನಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಪ್ರದೀಪ್ ವಿರುದ್ಧ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಸ್ತುತ ಗಾಯಾಳುವಿನ ಆರೋಗ್ಯ ಸ್ಥಿತಿ ಚೇತರಿಕೆ ಹಂತದಲ್ಲಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.