)
Mahantesh Bilagi IAS Biography: ಭೀಕರ ಕಾರು ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೃತಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ 51 ವರ್ಷದ ಬೀಳಗಿ ಅವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮಂಗಳವಾರ ಸಂಜೆ ಬೆಳಗಾವಿಯಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಹೋದರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬಿಳಗಿ ಅವರನ್ನ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಗಿತ್ತು. ಆದರೆ ತೀವ್ರ ಗಾಯಗಳಾದ ಹಿನ್ನೆಲೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಮತ್ತು DHO ಶರಣಬಸಪ್ಪ ಕ್ಯಾತನಾಳ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕಡುಬಡತನದಿಂದ ಐಎಎಸ್ ಅಧಿಕಾರಿಯವರೆಗೆ...
ಮಹಾಂತೇಶ್ ಬೀಳಗಿ ಅವರು 1974 ಮಾರ್ಚ್ 27ನಲ್ಲಿ ಜನಿಸಿದರು. ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನವರಾದ ಅವರು ಕಡುಬಡತನದಲ್ಲಿ ಬೆಳೆದರು. ಅವರ ಪೋಷಕರು ಕೂಲಿ ಕೆಲಸ ಮಾಡಿ ಕುಟುಂಬವನ್ನ ನಿರ್ವಹಿಸುತ್ತಿದ್ದರು. ಬಾಲ್ಯದಲ್ಲಿ ತಮ್ಮ ಸಹೋದರರ ಜೊತೆಗೆ ತಾವು ಹೇಗೆ ಕಷ್ಟಪಟ್ಟಿದ್ದೇವು ಅನ್ನೋದರ ಬಗ್ಗೆ ಅನೇಕ ಸಂದರ್ಶನಗಳಲ್ಲಿ ತಿಳಿಸಿದ್ದಾರೆ. ಅತ್ಯಂತ ಕಡುಬಡತನದಲ್ಲಿಯೇ ಬೆಳೆದ ಅವರು ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡುವ ಕನಸು ಕಂಡಿದ್ದರು. ಯಾವುದೇ ಮನುಷ್ಯ ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು, ಕಷ್ಟಪಟ್ಟು ಓದಿದರೆ ಒಂದಲ್ಲ ಒಂದು ದಿನ ದೊಡ್ಡ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮೋಟಿವೇಷನ್ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ಮಹಾಂತೇಶ್ ಬೀಳಗಿ ಅವರಿಗೆ ಪತ್ನಿ ಮತ್ತು ಮಕ್ಕಳಿದ್ದಾರೆ.
ವ್ಯಕ್ತಿತ್ವದಿಂದಲೇ ಹೆಸರುವಾಸಿ
ದಾವಣಗೆರೆಯ ಜಿಲ್ಲಾಧಿಕಾರಿಯಾಗಿ, ಬೆಸ್ಕಾಂ ಎಂಡಿಯಾಗಿ ಕಾರ್ಯ ನಿರ್ವಹಿಸಿದ್ದ ಮಹಾಂತೇಶ್ ಬೀಳಗಿ ಅವರಿಗೆ ಬಡವರ ಮೇಲೆ ವಿಶೇಷ ಪ್ರೀತಿಯಿತ್ತು. ಸಮಯ ಸಿಕ್ಕಾಗ ಪ್ರೋತ್ಸಾಹದ ನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಯಶಸ್ಸಿನ ಪಾಠ ಹೇಳಿಕೊಡುತ್ತಿದ್ದರು. ಕಷ್ಟದ ಬದುಕಿನಲ್ಲೂ ಶ್ರಮದಿಂದ ಓದಿ ಉನ್ನತ ಹುದ್ದೆಗೆ ಏರಿದ್ದ ಅವರು ತಮ್ಮ ಕೆಲಸಗಳಿಂದಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಜನಸ್ನೇಹಿ ಅಧಿಕಾರಿಯಾಗಿ, ಭಾವುಕ ವ್ಯಕ್ತಿಯಾಗಿದ್ದ ಅವರು ಸದಾ ಪಾಸಿಟಿವ್ ಮನೋಭಾವ ಹೊಂದಿರಬೇಕೆಂದು ಸಲಹೆ ನೀಡುತ್ತಿದ್ದರು. ʼನಾವು ಈ ಸಮಾಜದಿಂದ ಅನೇಕವುಗಳನ್ನ ಪಡೆದಿದ್ದೇವೆ, ಹೀಗಾಗಿ ನಾವು ಸಮಾಜಕ್ಕೆ ನಮ್ಮ ಕೈಲಾದಷ್ಟು ವಾಪಸ್ ಕೊಡಬೇಕುʼ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು.
ಯುವಕರಿಗೆ ಪ್ರೇರಣೆ
ಮಹಾಂತೇಶ್ ಬೀಳಗಿ ಅವರು ಕಷ್ಟಪಟ್ಟು ಓದಿ ಮೊದಲು ಕೆಎಎಸ್ ಅಧಿಕಾರಿಯಾಗಿದ್ದರು. ನಂತರ ಐಎಎಸ್ ಹುದ್ದೆಗೆ ಬಡ್ತಿ ಪಡೆದು ಉನ್ನತ ಸ್ಥಾನಕ್ಕೇರಿದ್ದರು. ಅವರ ಈ ಸಾಧನೆ ಸಾವಿರಾರು ಯುವಕರಿಗೆ ಪ್ರೇರಣೆಯಾಗಿತ್ತು. 2012 ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದ ಬೀಳಗಿಯವರು ಹಲವು ಜಿಲ್ಲೆಗಳ ಸಿಇಒ, ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಗೊಂಡು ಬೆಸ್ಕಾಂ ಎಂಡಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇತ್ತೀಚೆಗೆ ಅಲ್ಲಿಂದಲೂ ವರ್ಗಾವಣೆಯಾಗಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಹಿರಿಯ ಐಎಎಸ್ ಅಧಿಕಾರಿಯ ಅಗಲಿಕೆಯು ಅವರ ಸಾವಿರಾರು ಅಭಿಮಾನಿಗಳು, ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಆಘಾತವನ್ನುಂಟು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅಗಲಿದ ಚೇತನಕ್ಕೆ ಸಂತಾಪ ಸೂಚಿಸಲಾಗುತ್ತಿದೆ.