)
ದಕ್ಷಿಣ ಕನ್ನಡ : RSS ಮುಖಂಡ ಬಿ.ಎಲ್. ಸಂತೋಷ್ ವಿರುದ್ಧ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವ್ರನ್ನು ವಶಕ್ಕೆ ಪಡೆಯಲು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಗೆ ಉಡುಪಿಯ ಬ್ರಹ್ಮಾವರ ಠಾಣೆಯ ಪೊಲೀಸರು ಆಗಮಿಸಿದರು. ಇದೇ ವೇಳೆ ಹೈಡ್ರಾಮಾವೇ ನಡೀತು.
ಹೌದು.. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ತಿಮರೋಡಿಗೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬ್ರಹ್ಮಾವರ ಠಾಣಾ ಪೊಲೀಸರು ಉಜಿರೆ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿಯ ಮನೆಗೆ ಆಗಮಿಸಿದ್ದು, ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು.
ವಿಷಯ ತಿಳಿದ ತಿಮರೋಡಿ ಬೆಂಬಲಿಗ ಯುವಕರ ತಂಡ ಮನೆಯ ಎದುರು ಜಮಾಯಿಸಿತ್ತು. ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ತಿಮರೋಡಿ ಪರ ವಕೀಲರು ಪೊಲೀಸರ ಜೊತೆ ಮಾತನಾಡಿ, ತಿಮರೋಡಿ ಸ್ವತಃ ಠಾಣೆಗೆ ಹಾಜರಾಗುವುದಾಗಿ ಹೇಳಿದರು. ಅದರಂತೆ ತಿಮರೋಡಿ ಖಾಸಗಿ ಕಾರಿನಲ್ಲಿ ಉಡುಪಿ ಪೊಲೀಸರ ಜೊತೆ ತೆರಳಿದ್ದಾರೆ. ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಕೂಡಾ ಕಾರಿನಲ್ಲಿ ತೆರಳಿದರು. ಉಡುಪಿಯಲ್ಲಿ ಅನೇಕ ಗಂಟೆಗಳ ಕಾಲ ಪೊಲೀಸ್ ವಿಚಾರಣೆ ನಡೆದು ಆರೋಗ್ಯ ತಪಾಸಣೆ ನಡೆಸಲಾಯ್ತು.
ಇತ್ತ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಾ ಜಾಮೀನು ಮಂಜೂರುಗೊಳಿಸಿ ಮಂಗಳೂರು ನ್ಯಾಯಾಲಯ ಆದೇಶ ಹೊರಡಿಸಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜು.12ಕ್ಕೆ ಸುಮೋಟೋ ಪ್ರಕರಣ ದಾಖಲಿಸಿದ್ದರು.
ಈ ನಿಟ್ಟಿನಲ್ಲಿ ಸಮೀರ್ ಎಂ.ಡಿ. ಮಂಗಳೂರು ನ್ಯಾಯಾಲಯಕ್ಕೆ ಆ.19ರಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಗುರುವಾರ ಆದೇಶ ಕಾಯ್ದಿರಿಸಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಒಟ್ಟಿನಲ್ಲಿ ಏಕಕಾಲದಲ್ಲಿ ಸೌಜನ್ಯ ಪರ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಕೇಸ್ ಗೆ ಸಂಬಂಧಿಸಿದಂತೆ ವಶಕ್ಕೆ ಕಾರ್ಯಾಚರಣೆ ಬಹಳ ಸುದ್ದಿ ಮಾಡಿತು.