)
ಚಾಮರಾಜನಗರ: ಏಕೋ ಏನೋ ಮಾದಪ್ಪನ ಭಕ್ತರಿಗೆ ವನ್ಯಜೀವಿಗಳ ಕಾಟ ತಪ್ಪುವಂತೆ ಕಾಣುತ್ತಿಲ್ಲ.ಇದೀಗ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ಭಕ್ತರಿಗೆ ಚಿರತೆ ಕಾಟ ಹೆಚ್ಚಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಭಕ್ತಾಧಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.ಮತ್ತೊಂದೆಡೆ ನರಹಂತಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಇದರ ಬಗ್ಗೆ ಇಲ್ಲಿದೆ ರಿಪೋರ್ಟ್.
ಭಾನುವಾರದಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಬಾಲಕನೊರ್ವನ ಮೇಲೆ ಏಕಾಏಕಿ ಚಿರತೆಯೊಂದು ದಾಳಿ ಮಾಡಿ ರಕ್ತ ಹೀರಿ ಕೊಂದಿದೆ.ಮಾದಪ್ಪನ ಪುಣ್ಯ ನೆಲೆಯಲ್ಲಿ ಈವರೆಗೆ ಮೂವರ ಮೇಲೆ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದರೇ ಓರ್ವ ಬಾಲಕ ಗಾಯಗೊಳಿಸಿರುವ ಘಟನೆ ನಡೆದಿದೆ.ಈ ಹಿಂದೆ ತಾಳುಬೆಟ್ಟ ಹಾಗೂ ಪೊನ್ನಾಚ್ಚಿ ಬಳಿ ದಾಳಿ ಮಾಡಿದ್ದ ಚಿರತೆ ಇದೀಗ ನಾಗಮಲೆ ಹಾದಿಯಲ್ಲಿ ಬಾಲಕನ ಮೇಲೆ ದಾಳಿ ನಡೆಸಿ ಭಕ್ತರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಇದರಿಂದ ರೊಚ್ಚಿಗೆದ್ದ ರೈತರು ಹಾಗೂ ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ಹೊರಹಾಕುತ್ತಿದ್ದು,ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅನಾಹುತಗಳು ನಡೆಯುತ್ತಿವೆ.ವನ್ಯಪ್ರಾಣಿಗಳ ದಾಳಿಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಸದ್ಯಕ್ಕೆ ನಾಗಮಲೆ ಚಾರಣಕ್ಕೆ ಮಾದಪ್ಪನ ಭಕ್ತರಿಗೆ ನಿರ್ಬಂಧ ಹಾಕಿರುವ ಅರಣ್ಯಾಧಿಕಾರಿಗಳು, ಚಿರತೆ ಸೆರೆಗೆ ತೀವ್ರ ಕಾರ್ಯಚರಣೆ ಮುಂದುವರಿಸಿದ್ದಾರೆ. ಮಲೈಮಹದೇಶ್ವರ ಬೆಟ್ಟದ ಎಸಿಎಫ್ ತಂಡದೊಂದಿಗೆ ಮೈಸೂರಿನ ಚಿರತೆ ಸೆರೆ ವಿಶೇಷ ತಂಡ ತರಿಸಿ ಡ್ರೋಣ್ ಕ್ಯಾಮರಾದ ಮೂಲಕ ತೀವ್ರ ಕೂಂಬಿಂಗ್ ಶೋಧಕಾರ್ಯ ಆರಂಭಿಸಿದ್ದಾರೆ.ನಿನ್ನೆ ಸಂಜೆ ಅದೇ ಜಾಗದಲ್ಲಿ ಕಾಣಿಸಿಕೊಂಡಿರುವ ನರಭಕ್ಷಕ ಚಿರತೆ ಈವರೆವಿಗೂ ಮತ್ತೆ ಕಾಣಿಸಿಕೊಂಡಿಲ್ಲ. ಇನ್ನು ದಟ್ಟಾರಣ್ಯದಲ್ಲೇ ಈ ಘಟನೆ ನಡೆದಿರುವುದರಿಂದ ಚಿರತೆ ಸೆರೆ ಹಿಡಿಯುವುದು ಸಹ ಅರಣ್ಯ ಇಲಾಖೆಗೆ ಸವಾಲಾಗಿ ಬಿಟ್ಟಿದೆ.
ಮೃತ ಬಾಲಕನ ಕುಟುಂಬಕ್ಕೆ ಅರಣ್ಯ ಇಲಾಖೆಯು ಮೊದಲ ಹಂತದಲ್ಲಿ 5 ಲಕ್ಷ ರೂ. ಪರಿಹಾರ ವಿತರಿಸಿದ್ದು, ಮರಣೋತ್ತರ ವರದಿ ಬಂದ ಬಳಿಕ 15 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.ಮಾದಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ವನ್ಯಪ್ರಾಣಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೇರೆಡೆಯಿಂದ ತಂದು ನಮ್ಮ ಕಾಡಿಗೆ ಬಿಟ್ಟ ಪರಿಣಾಮದಿಂದಲೇ ಈ ದಾಳಿಯಾಗುತ್ತಿದೆ ಎಂದು ರೈತರು ಹಾಗೂ ಸ್ಥಳಿಯರು ದೂರಿದ್ದು ಇದಜ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಮಲೆಮಹದೇಶ್ವರನ ಭಕ್ತರಿಗೆ ರಕ್ಷಣೆ ಕೊಡಬೇಕಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.