ನವದೆಹಲಿ: ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಕ್ಕೂ ಮೊದಲೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟರ್'ನಲ್ಲಿ ದಿನಾಂಕ ಪ್ರಕಟಿಸಿದ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೇ ಚುನಾವಣಾ ದಿನಾಂಕವನ್ನು ಆದೇಶಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಇಂತಹ ಮಾಹಿತಿ ಸೋರಿಕೆಗಳು ಮರುಕಳಿಸದಂತೆ ತಡೆಯಲು ಚುನಾವಣಾ ಆಡಳಿತ ಮಂಡಳಿಗೆ ಖರ್ಗೆ ಮನವಿ ಮಾಡಿದ್ದಾರೆ.
"ಚುನಾವಣಾ ಆಯೋಗದ ಚುನಾವಣಾ ವೇಳಾಪಟ್ಟಿ ಘೋಷಿಸುವ ಮುಂಚೆಯೇ, ಕರ್ನಾಟಕ ಚುನಾವಣೆ ದಿನಾಂಕವನ್ನು ಅಮಿತ್ ಮಾಳವೀಯ ಟ್ವೀಟ್ ಮಾಡಿದರು. ಇದರರ್ಥ ಬಿಜೆಪಿ ಬಿಜೆಪಿ ಮತದಾನದ ದಿನಾಂಕವನ್ನು ನಮಗೆ ಆದೇಶಿಸುತ್ತದೆ. ಒಂದು ರಾಜಕೀಯ ಪಕ್ಷಕ್ಕೆ ಚುನಾವಣೆ ಬಗ್ಗೆ ಇಷ್ಟೆಲ್ಲಾ ಮಾಹಿತಿ ದೊರೆತಿರುವ ಬಗ್ಗೆ ನಾನು ಹಿಂದೆಂದೂ ಕಂಡಿಲ್ಲ. ಆದರೆ, ಸಂವಿಧಾನ ಮತ್ತು ಕಾನೂನಿನ ಪ್ರಕಾರ ಯಾವುದೇ ಮಾಹಿತಿ ಸೋರಿಕೆಗೆ ಅವಕಾಶ ನೀಡದೇ ಚುನಾವಣಾ ಆಯೋಗ ಕೆಲಸ ಮಾಡಬೇಕು ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಖರ್ಗೆ ಹೇಳಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಬಿಜೆಪಿ ಸಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗವನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗಕ್ಕೂ ಮೊದಲೇ ಚುನಾವಣಾ ದಿನಾಂಕ ಟ್ವೀಟ್ ಮಾಡಿದ ಬಿಜೆಪಿ
"ಬಿಜೆಪಿಯ ಈ ಕಾರ್ಯ ನೋಡಿದರೆ, ಅವರು ಸಾಂವಿಧಾನಿಕ ಕಚೇರಿಯನ್ನು ಪರಿಗಣಿಸುವುದಿಲ್ಲ ಎಂಬುದು ತಿಳಿಯುತ್ತದೆ. ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಬಿಜೆಪಿಯ ವಿರುದ್ಧ ನಾವು ಜಯಭೇರಿ ಬಾರಿಸಲಿದ್ದೇವೆ. ಸಮಾಜದ ದುರ್ಬಲ ವರ್ಗ ಸದಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದೆ ಎಂದು ಅವರು ಹೇಳಿದರು.
ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಇಂದು ಪತ್ರಿಕಾಗೋಷ್ಟಿಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸುವ ಮುನ್ನವೇ "ಕರ್ನಾಟಕ ವಿಧಾನಸಭೆ ಚುನಾವಣೆ ಮೆ 12ರಂದು ನಡೆಯಲಿದ್ದು ಮೇ 18ಕ್ಕೆ ಫಲಿತಾಂಶ ಹೊರಬೀಳಲಿದೆ" ಎಂದು ಟ್ವೀಟ್ ಮಾಡಿದ್ದರು. ಈ ವಿಚಾರ ವಿವಾದವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಅಮಿತ್ ಮಾಳವೀಯ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ.12 ರಂದು ನಡೆಯಲಿದ್ದು, ಮೇ.15ಕ್ಕೆ ಮತಎಣಿಕೆ ನಡೆಯಲಿದೆ.