ಬೆಂಗಳೂರು: ಸಚಿವ ಸ್ಥಾನ ಕಳೆದುಕೊಂಡಿದ್ದರೂ ರಾಜಣ್ಣ ಮತ್ತೆ ರಾಜಕೀಯ ಮುನ್ನಲೆಯಲ್ಲಿ ಕಾಲಿಟ್ಟಿದ್ದಾರೆ. ಇಂದು ತುಮಕೂರಿನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಆಯೋಜಿಸಿರುವ ಔತಣ ಕೂಟ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.
ಈ ಔತಣ ಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅಹಿಂದ ಸಮುದಾಯದ ಪ್ರಮುಖ ಸಚಿವರಾದ ಡಾ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಹಾಜರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ
ಸಚಿವ ಸಂಪುಟದಿಂದ ಹೊರಬಿದ್ದ ಬಳಿಕ ರಾಜಣ್ಣ ಈಗ ಮತ್ತೊಮ್ಮೆ ಸಂಪುಟ ಸೇರ್ಪಡೆಗೆ ಕಸರತ್ತು ಆರಂಭಿಸಿದ್ದಾರೆ ಎಂಬುದು ರಾಜಕೀಯ ವಲಯದ ಊಹಾಪೋಹ.ಅಹಿಂದ ಸಮುದಾಯದ ಬೆಂಬಲವನ್ನು ತನ್ನತ್ತ ಸೆಳೆಯುವಲ್ಲಿ ರಾಜಣ್ಣ ತೊಡಗಿಕೊಂಡಿದ್ದಾರೆ.ಸಿದ್ದರಾಮಯ್ಯ ಸರ್ಕಾರ ಮುಂದುವರಿಯಬೇಕೆಂಬ ಅಭಿಪ್ರಾಯವೂ ರಾಜಣ್ಣರದ್ದು. ಸಂಪುಟದಲ್ಲಿದ್ದಾಗಲೂ ಸಿಎಂ ಪರವಾಗಿ ಗಟ್ಟಿ ಧ್ವನಿಯಾಗಿದ್ದ ರಾಜಣ್ಣ ಈಗ ಮತ್ತೆ ಅವರ ವಿಶ್ವಾಸಾರ್ಹ ನಾಯಕನಾಗಿ ಮರಳಿ ಬರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಅಹಿಂದ ಸಮುದಾಯದ ಶಕ್ತಿ ಕ್ಷೀಣಿಸದಂತೆ ನೋಡಿಕೊಳ್ಳಲು ಸಿಎಂ ಆಪ್ತ ಸಚಿವರು ಯೋಜನೆ ರೂಪಿಸಿದ್ದು, ಅದಕ್ಕೆ ರಾಜಣ್ಣರ ಸಹಕಾರವೂ ಅಗತ್ಯವಾಗಿದೆ.
ನಾಳೆಯ ತುಮಕೂರಿನ ಔತಣ ಕೂಟದಲ್ಲಿ ಸಿಎಂ ಮತ್ತು ಅಹಿಂದ ಸಚಿವರಿಂದ ಭವಿಷ್ಯದಲ್ಲಿ ಅಹಿಂದ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ಲೆಕ್ಕಾಚಾರ ನಡೆಯುವ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.
ಒಟ್ಟಿನಲ್ಲಿ, ರಾಜಣ್ಣ ನಿವಾಸದ ಇಂದಿನ ಔತಣ ಕೂಟ ಕೇವಲ ಆಹಾರದ ಕೂಟವಲ್ಲ — ಅದು ಅಹಿಂದ ಬಲ, ರಾಜಕೀಯ ಬಾಂಧವ್ಯ ಮತ್ತು ಭವಿಷ್ಯದ ಸಂಪುಟ ಸಮೀಕರಣಗಳ "ಟೇಬಲ್ ಮೀಟಿಂಗ್" ಆಗಿ ರೂಪಾಂತರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ವರದಿ: ಪ್ರಶೋಬ್ ದೇವನಹಳ್ಳಿ
ಜೀ ಕನ್ನಡ ನ್ಯೂಸ್









