ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮುಂದೆ ಹಾಜರಾಗಬೇಕಿರುವ ಸಚಿವ ಡಿ.ಕೆ. ಶಿವಕುಮಾರ್ ಕೋರಿಕೆಯನ್ನು ಇ.ಡಿ ಪರಿಗಣಿಸಬೇಕೆಂದು ರಾಜ್ಯ ಹೈಕೋರ್ಟ್ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠವು, ಫೆಬ್ರವರಿ 8 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿರುವ ಡಿ.ಕೆ. ಶಿವಕುಮಾರ್ ಒಂದುವೇಳೆ ವಿಚಾರಣೆಗೆ ಹಾಜರಾಗುವುದನ್ನು ಮುಂದೂಡುವಂತೆ ಕೋರಿದರೆ ಅದನ್ನು ಪರಿಗಣಿಸಬೇಕು ಎಂದು ಹೇಳಿದೆ.


ಕೇಂದ್ರ ಸರ್ಕಾರದ ಪರ ಹಾಜರಿದ್ದ ನ್ಯಾ. ಪ್ರಭುಲಿಂಗ ಕೆ. ನಾವದಗಿ, ಅರ್ಜಿದಾರರು ಸಲ್ಲಿಸುವ ಮನವಿಯನ್ನು ಇ.ಡಿ ಪರಿಶೀಲಿಸಲಿದೆ ಎಂದು ಹೇಳಿದರು.


ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿದಾರರು ಕಾಲಕಾಲಕ್ಕೆ ತೆರಿಗೆ ಪಾವತಿ ಮಾಡಿದ್ದಾರೆ. ಐ‌‌.ಟಿ ದಾಳಿ ನಡೆದ ಸಂದರ್ಭದಲ್ಲಿ ತೆರಿಗೆ ಪಾವತಿಸಲು ಇನ್ನೂ ಕಾಲವಕಾಶ ಇತ್ತು. ಹೀಗಿದ್ದರೂ, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಸರಿಯಲ್ಲ ಎಂದು ವಿವರಿಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.8 ವಿಚಾರಣೆಗೆ ಹಾಜರಾಗಲು ಇ.ಡಿ. ಸಮನ್ಸ್ ಜಾರಿಗೊಳಿಸಿದೆ. ಒಂದು ವೇಳೆ ವಿಚಾರಣೆಗೆ ಹಾಜರಾದರೆ, ಅರ್ಜಿದಾರರನ್ನು ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ಸಮನ್ಸ್ ಗೆ ತಡೆ ನೀಡಬೇಕು ಎಂದು ಕೋರಿದರು.