Davanagere By Election: ದಾವಣಗೆರೆ ಬೈ ಎಲೆಕ್ಷನ್ ಬಳಿಕ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಯದ್ವಾತದ್ವಾ ಬೆಳವಣಿಗೆಗಳಾಗುತ್ತಿವೆ. ಅದರಲ್ಲೂ ಮುಸ್ಲಿಮ್ ನಾಯಕರ ಕಿತ್ತಾಟ ಬೀದಿಗೆ ಅಂದಿದೆ.

Minister Zameer Ahmed: ದಾವಣಗೆರೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದರು. ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ವಜಾ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನೆಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿದ್ದಾರೆ.
ದಾವಣಗೆರೆ ಉಪ ಚುನಾವಣೆ ಶುರುವಾದಾಗಿನಿಂದಲೂ ಜಮೀರ್ ಅಹ್ಮದ್ ಖಾನ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅದರಿಂದಾಗಿ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ದಾವಣಗೆರೆ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಅಂತಾ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡುವೆ ಎಂದು ಜಮೀರ್ ತಿಳಿಸಿದ್ದಾರೆ.
ಟಿಕೆಟ್ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಮೀರ್, ನಾನು ಏನೂ ಮುಚ್ಚುಮರೆ ಮಾಡಿಲ್ಲ. ನಾನು ಜಬ್ಬಾರ್ ಹೆಸರು ಹೇಳಿಲ್ಲ. ಮುಸ್ಲಿಮರ ಪೈಕಿ ಯಾರಿಗಾದರೂ ಟಿಕೆಟ್ ಕೊಡಿ ಎಂದು ಹೇಳಿದ್ದೆ. ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ ಅನ್ನೋ ಅಸಮಾಧಾನ ಇತ್ತು. ಅಂತಿಮವಾಗಿ ಪಕ್ಷ ಸಮರ್ಥ್ ಅವರಿಗೆ ಅವಕಾಶ ಕೊಟ್ಟಿದೆ. ಈಗ ನಾವು ಅಲ್ಲಿ ಗೆದ್ದೇ ಗೆಲ್ತೇವೆ ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಿಮ್ಮ ವಿರುದ್ಧ ಕೆಲವರು ಆರೋಪ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಯಾರೂ ಕೂಡ ನನ್ನ ಹೆಸರನ್ನು ಹೇಳಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನಾನು ಮುಸ್ಲಿಂ ಸಮುದಾಯದ ಸುಪ್ರೀಂ ಲೀಡರ್ ಅಲ್ಲ. ನಾನು ಲೀಡರ್ ಆಗಲು ಹೊರಟಿಲ್ಲ. ಮುಂದೇನು ಲೀಡರ್ ಆಗೋಕೆ ಹೋಗಲ್ಲ. ನಾನೊಬ್ಬ ಸೇವಕ ಸೇವೆ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.
ದಾವಣಗೆರೆಯಲ್ಲಿ ಜಬ್ಬಾರ್ ಪಕ್ಷ ವಿರೋಧಿ ಚಟುವಟಿಕೆ ಮಾಡಿದರು ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್, ಎಸ್ಎಸ್ ಮಲ್ಲಿಕಾರ್ಜುನ್ ಅವರು ಜಬ್ಬಾರ್ ಪಕ್ಕದ ಮನೆಗೆ ಹೋಗಿದ್ದಾರೆ. ಜಬ್ಬಾರ್ ಮನೆಗೆ ಹೋಗಿಲ್ಲ. ಅದರಿಂದ ಅವರು ಬೇಸರ ಮಾಡಿಕೊಂಡಿದ್ದಾರೆ. ಅದರಿಂದಾಗಿ ಅವರು ಹೋಗಿಲ್ಲ ಎಂದು ತಿಳಿಸಿದ್ದಾರೆ.