)
Bengaluru: ಮಳೆ, ಬಿಸಿಲು ಗಂಟೆಗೊಂದು ರೀತಿಯ ವಾತಾವರಣ, ಸದ್ಯ ಬೆಂಗಳೂರಿನ ಹವಮಾನ ಹೀಗಿದೆ. ಯಾವಾಗ ವಾತಾವರಣ ಹೇಗೆ ಬದಲಾಗುತ್ತೋ ಅಂತ ಗೊತ್ತಿಲ್ಲದೇ ಗೊಂದಲದಲ್ಲಿರುವ ಬೆಂಗಳೂರಿನ ಜನರಿಗೆ ಹಾವುಗಳು ಮತ್ತೊಂದು ದೊಡ್ಡ ಸಮಸ್ಯೆಯಾಗಿ ಕಾಡಿದೆ.
ಒಂದೆಡೆ ಮಳೆ, ಒಂದೆಡೆ ಬಿಸಿಲು, ಎಲ್ಲಿ ಹೋಗಿ ಕೂರೋದು ಅಂತಾ ತಿಳಿಯದೆ ಹಾವುಗಳು ಮನೆಗಳಿಗೆ ಎಂಟ್ರಿ ಕೊಡುತ್ತಿದೆ. ಶೂಗಳಲ್ಲಿ ಬೆಚ್ಚಿನ ಜಾಗದಲ್ಲಿ ಅವಿತು ಕೂತು ಅವುಗಳನ್ನೇ ಆಶ್ರಯ ತಾಣಗಳನ್ನಾಗಿಸಿಕೊಂಡಿದೆ. ಹಾವಿನ ಮರಿಗಳು ಮನೆಯೊಳಗೆ ನುಸುಳುತ್ತಿವೆ. ಇತ್ತೀಚೆಗೆ ಆನೇಕಲ್ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಕೊಳಕು ಮಂಡಳ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವಿನ್ನಪ್ಪಿದ್ದಾರೆ.
ರಾತ್ರಿ ಮಲಗಿದ ನಂತರ ಬೆಳಿಗ್ಗೆ ಎದ್ದು ಹೊರಗೆ ಬರೋ ಸಮಯದಲ್ಲಿ ಶೂ ಅಥವಾ ಚಪ್ಪಲಿ ಹಾಕುವ ಮುನ್ನ ಸ್ವಲ್ಪ ಎಚ್ಚರ ವಹಿಸಬೇಕು. ಹವಾಮಾನದ ಬದಲಾವಣೆ ಹಾಗೂ ಬೆಚ್ಚಗಿನ ಜಾಗದ ಹುಡುಕಾಟದಲ್ಲಿ ಕೆಲವು ಬಾರಿ ಹಾವುಗಳು ಮನೆಗಳ ಬಳಿಗೆ ಬರುತ್ತವೆ. ಬೆಚ್ಚನೆಯ ಜಾಗ ಹುಡುಕಿ ಕೂತು ಶೂ ಚಪ್ಪಲಿಗಳಲ್ಲಿ ಅವತಿ ಕೂತಿರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ.
ಮಾರತಹಳ್ಳಿ ಪ್ರದೇಶದ ಮನೆಯೊಂದರಲ್ಲಿ ಇಂತಹ ಅಚ್ಚರಿಯ ಘಟನೆ ನಡೆದಿದೆ. ಬೆಳಗ್ಗೆ ಹೊರಡುವ ಮುನ್ನ ಶೂ ಹಾಕಲು ಮುಂದಾದ ಮಹಿಳೆಗೆ ಬೆಳ್ಳಂಬೆಳಗ್ಗೆ ಶಾಕ್ ಆಗಿತ್ತು. ಯಮ ಒಂದೊಮ್ಮೆ ಬಂದು ಬಾಗಿಲು ಬಡಿದಂತೆ ಬಾಸವಾಗಿತ್ತು. ಶೂನ ಒಳಗೆ ಅಡಗಿಕೊಂಡು ಕೂತಿದ್ದ ನಾಗರಹಾವಿನ ಮರಿ ಹೈ ಹೇಳಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತವಾಗದೆ ಮಹಿಳೆ ತಕ್ಷಣ ಎಚ್ಚರಗೊಂಡಿದ್ದಾರೆ.
ಕರೆಯದೆ ಬಂದ ಅತಿಥಿಯನ್ನು ನೋಡಿ ಬೆಚ್ಚಿಬಿದ್ದ ಮಹಿಳೆ ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ತಜ್ಞರಿಗೆ ಕರೆ ಮಾಡಿ ಶೂ ಒಳಗೆ ಅಡಗಿಕೊಂಡಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಮತ್ತೆ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಇದರಿಂದ ಸ್ಪಷ್ಟವಾಗುವುದು ಏನೆಂದರೆ — ಬೆಳಿಗ್ಗೆ ಹೊರಡುವಾಗ ಶೂ, ಚಪ್ಪಲಿ ಹಾಕುವ ಮೊದಲು ಒಮ್ಮೆ ಚೆಕ್ ಮಾಡುವುದು ಅತೀ ಮುಖ್ಯ. ಇದು ಸಣ್ಣ ಎಚ್ಚರಿಕೆಯಾಗಿದ್ದರೂ, ನಿಮ್ಮ ಜೀವವನ್ನು ರಕ್ಷಿಸಬಹುದು.