)
ಚಾಮರಾಜನಗರ: ಪೂರ್ವಾಶ್ರಮದ ಧರ್ಮ ಬೆಳಕಿಗೆ ಬಂದ ಹಿನ್ನಲೆ ಯುವ ಸ್ವಾಮೀಜಿ ಪೀಠ ತೊರೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಭಾನುವಾರ (ಆ.3) ಶ ನಡೆದಿದೆ.
ಚೌಡಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ಕಳೆದ ಒಂದೂವರೆ ತಿಂಗಳಿನಿಂದ ಸ್ವಾಮೀಜಿಯಾಗಿದ್ದ ನಿಜಲಿಂಗ ಸ್ವಾಮೀಜಿ ಮಠ ತೊರೆದ ಯುವ ಸನ್ಯಾಸಿ. ಯಾದಗಿರಿ ಜಿಲ್ಲೆಯ ಶಹಾಪುರ ಗ್ರಾಮದ ನಿಜಲಿಂಗ ಸ್ವಾಮೀಜಿ @ ಮಹಮ್ಮದ್ ನಿಸಾರ್(22) ಅವರು ಬಸವ ಕಲ್ಯಾಣದ ಸ್ವಾಮೀಜಿಯೊಬ್ಬರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪೀಠಾಧಿಪತಿಯಾಗಿ ಬಂದಿದ್ದರು. ನಂತರ ಧಾರ್ಮಿಕ ಕಾರ್ಯಗಳು ಮತ್ತು ಪ್ರವಚನ ನಡೆಸಿಕೊಂಡು ಹೋಗುತ್ತಿದ್ದರು.
ಆ.1ರಂದು ಮಠದ ಭಕ್ತರಾದ ಗ್ರಾಮದ ಯುವಕರೊಬ್ಬರಿಗೆ ಶ್ರೀಗಳು ಮೊಬೈಲ್ ನೀಡಿದ್ದರು. ಈ ವೇಳೆ ಮೊಬೈಲ್ನಲ್ಲಿದ್ದ ಇವರ ಆಧಾರ್ ಕಾರ್ಡ್ ನಲ್ಲಿ ಮಹಮ್ಮದ್ ನಿಸಾರ್ ಎಂಬ ಹೆಸರಿದ್ದ ವಿಷಯ ತಿಳಿದಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ನೋಡಿದ್ದ ಯುವಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶ್ರೀಗಳನ್ನು ವಿಚಾರಿಸಿದಾಗ ನಾನು ಅನ್ಯ ಧರ್ಮವನಾದರೂ ಬಸವ ತತ್ವದಿಂದ ಆಕರ್ಷಿತನಾಗಿ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಅನ್ಯ ಧರ್ಮದ ವ್ಯಕ್ತಿ ಪೀಠಾಧಿಪತಿಯಾಗಿ ಇರುವುದು ಬೇಡ ಎಂದು ಹಲವರು ಆಕ್ಷೇಪ ಹೊರಹಾಕಿದ್ದಾರೆ.
ಮಾಹಿತಿ ಅರಿತ ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ್ ಮತ್ತು ಸಿಬ್ಬಂದಿ ಭಾನುವಾರದಂದು ಗ್ರಾಮಕ್ಕೆ ತೆರಳಿ ಶ್ರೀಗಳು ಮತ್ತು ಗ್ರಾಮಸ್ಥರ ಅಭಿಪ್ರಾಯ ಪಡೆದರು. ನಂತರ ಗ್ರಾಮಸ್ಥರಿಗೆ ಇಷ್ಟವಿಲ್ಲದಿದ್ದರೆ ಪೀಠ ತ್ಯಾಗ ಮಾಡಲು ಸಿದ್ದನಿರುವುದಾಗಿ ಶ್ರೀಗಳು ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಸ್ವಾಮೀಜಿ ತಂದಿದ್ದ ಬೈಕ್ ಮತ್ತು ಇತರೆ ಅಗತ್ಯ ವಸ್ತುಗಳೊಂದಿಗೆ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ.