)
ಆತ 30 ವರ್ಷಗಳ ಹಿಂದೆ ಕಟ್ಟಿಕೊಂಡ ಹೆಂಡತಿಯನ್ನು ಕಳೆದುಕೊಂಡು ಸಹೋದರಿಯ ಮನೆಯಲ್ಲಿದ್ದವ. ಸಹೋದರಿ ಹಾಗೂ ಅಳಿಯಂದಿರೇ ಆತನನ್ನು ಸಲುಹುತ್ತಿದ್ದರು. ತಂಗಿಯ ಮನೆಯಲ್ಲಿದ್ದರೂ ನಿತ್ಯ ಕುಡಿದು ಮನೆಯವರಿಗೆ ಕಿರುಕುಳ ನೀಡುತ್ತಿದ್ದ. ಮಾವನ ಕಿರುಕುಳದಿಂದ ರೋಸಿಹೋಗಿದ್ದ ಅಳಿಯಂದಿರು ತಾಳ್ಮೆ ಕಳೆದುಕೊಂಡಿದ್ದರು. ನೋಡ ನೋಡ್ತಿದ್ದಂತೆ ಮಾವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ ನಡೆಸಿದ್ದಾರೆ.
ಈರಪ್ಪನ ಕೈಕಾಲು ಮುಖ ಬಹುತೇಕ ಭಾಗ ಸುಟ್ಟು ಕರಕಲು :
ಕುಡುಕ ಮಾವನ ಕಾಟಕ್ಕೆ ಬೇಸತ್ತ ಅಳಿಯಂದಿರಿಂದ ಮಾವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಮೈ ತುಂಬ ಸುಟ್ಟ ಗಾಯಗಳಾಗಿದ್ದು, ಈರಪ್ಪ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಕೊಲೆಯತ್ನ ನಡೆಸಿದ ಅಳಿಯಂದಿರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮದ್ಯವ್ಯಸನಿಯಾಗಿದ್ದ ಈರಪ್ಪ ನಿತ್ಯ ಕುಡಿದು ಬಂದು ಮನೆಯವರ ಜೊತೆಗೆ ಗಲಾಟೆ ಮಾಡ್ತಿದ್ದನಂತೆ. ಯಾವುದೇ ಸಮಸ್ಯೆ ಇಲ್ಲದಿದ್ದರೂ ಕಾಲು ಕೆರೆದು ಜಗಳಕ್ಕೆ ಇಳಿತಿದ್ದನಂತೆ. ಮನೆಯಲ್ಲಿರೋ ಮಹಿಳೆಯರಿಗೆ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದನಂತೆ. ಮಾಡಿದ ಅಡುಗೆಗೆ ನೀರು ಸುರಿಯುತ್ತಿದ್ದನಂತೆ. ಹೀಗಾಗಿ ಈತನ ವರ್ತನೆಯಿಂದ ಇಡೀ ಕುಟುಂಬ ರೋಸಿ ಹೋಗಿತ್ತು. ಕುಡುಕ ಮಾವನ ಕಾಟ ತಾಳದೇ ಇಬ್ಬರು ಅಳಿಯಂದಿರು ನಿನ್ನೆ ಸಂಜೆ 8 ಗಂಟೆಗೆ ಕುಡುಕ ಮಾವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಅಕ್ಕಪಕ್ಕದವರಿಗೆ ವಿಷಯ ತಿಳಿದು, ಬೆಂಕಿ ನಂದಿಸಿ ಮುಧೋಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಈರಪ್ಪನಿಗೆ 80% ನಷ್ಟು ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಈರಪ್ಪನಿಗೆ ಮದುವೆಯಾಗಿದ್ದು, 30 ವರ್ಷಗಳ ಹಿಂದೆಯೇ ಪತ್ನಿ ಈತನನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ಅಕ್ಕಿಮರಡಿ ಗ್ರಾಮದಲ್ಲಿರುವ ತನ್ನ ಸಹೋದರಿ ದುಂಡವ್ವನ ಮನೆಯಲ್ಲಿ ವಾಸವಿದ್ದ. ತಾಯಿ ತೀರಿಕೊಂಡ ಬಳಿಕವೂ, ಏನೋ ಸೋದರ ಮಾವ ಅಂತ ಇಬ್ಬರು ಅಳಿಯಂದಿರು ಈತನನ್ನು ತಮ್ಮ ಜೊತೆಗೆ ಇಟ್ಟುಕೊಂಡಿದ್ದರು. ಆದರೆ ಈತ ನಿತ್ಯ ಕುಡಿದು ಗಲಾಟೆ ರಂಪಾಟ ಮಾಡ್ತಿದ್ದ. ಸಾಕಷ್ಟು ಬಾರಿ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡಿದ್ದರೂ ತನ್ನ ಚಾಳಿ ಬಿಟ್ಟಿರಲಿಲ್ವಂತೆ .
ಈತನ ನಿತ್ಯ ಕಾಟದ ಮಧ್ಯೆಯೂ ಊಟ ಹಾಕಿ ಸಲುಹುತ್ತಿದ್ದರು. ಆದರೆ ನಿನ್ನೆ ಈತನ ಕಾಟದಿಂದ ತಾಳ್ಮೆ ಕಳೆದುಕೊಂಡು ಕೊಲೆ ಪ್ರಯತ್ನ ಮಾಡಿದ್ದಾರೆ. ಸದ್ಯ ಈರಪ್ಪನ ಕೈಕಾಲು ಮುಖ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಘಟನೆ ಸಂಬಂಧ ಗಾಯಾಳು ಸಹೋದರ ರಾಮಪ್ಪ ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಧೋಳ ಪೊಲೀಸರು, ಮಾವನ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ನಡೆಸಿದ ಅಳಿಯಂದಿರಾದ ಸುನಿಲ್ ನಡುವಿನಮನಿ ಹಾಗೂ ಮರೆಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.