)
ಊರು ಅಂದಮೇಲೆ ಅಭಿವೃದ್ಧಿ ಆಗಿರ್ಬೇಕು. ಆದರೆ ಇಲ್ಲಿ ಒಂದೇ ಊರಿನಲ್ಲಿ ಅರ್ಧ ಜನ ಅಭಿವೃದ್ಧಿ ಕಂಡಿದ್ದರೆ, ಇನ್ನರ್ಧ ಜನ ಅಭಿವೃದ್ಧಿ ಕಾಣದೆ ಕಂಗಾಲಾಗಿದ್ದಾರೆ. ಒಂದೇ ಊರಿನಲ್ಲಿ ಎರಡು ರೀತಿಯ ಕೆಲಸಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಧಿಕ್ಕಾರದ ಘೋಷಣೆ, ಮತ್ತೊಂದು ಕಡೆಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಘೇರಾವ್.ಇನ್ನೊಂದು ಕಡೆ ರಸ್ತೆಯಲ್ಲೇ ಪೈರು ನಾಟಿ ಮೂಲಕ ಆಡಳಿತ ವರ್ಗವನ್ನು ವ್ಯಂಗ್ಯ ಮಾಡುತ್ತಿರುವ ದೃಶ್ಯ. ಇದೆಲ್ಲಾ ಕಂಡು ಬಂದಿದ್ದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸ್ವಕ್ಷೇತ್ರ ನಾಗಮಂಗಲದ ಹಳ್ಳಿಯೊಂದರಲ್ಲಿ.
ಮಂಡ್ಯ ಜಿಲ್ಲೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಹೊನ್ನಾವರ ಗ್ರಾಮ ಪಂಚಾಯಿತಿ ಹಾಸನ ಜಿಲ್ಲೆಗೆ ಅಂಟಿಕೊಂಡಂತೆ ಇದ್ದು, ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ 18 ಹಳ್ಳಿಗಳು ಅಭಿವೃದ್ಧಿಯನ್ನು ಕಾಣದೆ ಕಂಗಾಲಾಗಿವೆ. ಅದರಲ್ಲೂ ಹೊನ್ನಾವರ ಗ್ರಾಮ ಪಂಚಾಯ್ತಿಯ 2ನೇ ವಾರ್ಡ್ ಆಗಿರುವ ಹೊನ್ನಾವರ ಗ್ರಾಮದ ಅರ್ಧ ಗ್ರಾಮವಂತೂ ತೀರ ಹಿಂದುಳಿದಿದೆ. ಮೊದಲ ವಾರ್ಡ್ ನಲ್ಲಿ ರಸ್ತೆ, ಚರಂಡಿ ಇದೆ. ಆದರೆ 2ನೇ ವಾರ್ಡ್ ನಲ್ಲಿ ರಸ್ತೆಯೂ ಇಲ್ಲ, ಚರಂಡಿಯೂ ಇಲ್ಲ, ಬೀದಿ ದೀಪಗಳೂ ಇಲ್ಲ.
ಇದೇ ಕಾರಣಕ್ಕೆ ಹೊನ್ನಾವರ 2ನೇ ವಾರ್ಡ್ ಜನರು ಗ್ರಾಮ ಸಭೆ ನಡೆಯುತ್ತಿದ್ದಾಗಲೇ ದಾಳಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಅಭಿವೃದ್ಧಿಯನ್ನೇ ಮಾಡದೆ ಇದ್ದ ಮೇಲೆ ಗ್ರಾಮ ಪಂಚಾಯ್ತಿ ಅಗತ್ಯವೇನಿದೆ ಎಂದು ಪ್ರಶ್ನಿಸಿ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿದ್ದಾರೆ. ಜೊತೆಗೆ ಗ್ರಾಮಸಭೆಯಲ್ಲಿ ಮೊಬೈಲ್ ಮೂಲಕ ನಾಡಗೀತೆ ಹಾಕಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿ, ನಾಡಗೀತೆ ಹಾಡುವುದಕ್ಕೂ ಬರುವುದಿಲ್ಲವೇ ಎಂದು ಚಾಟಿ ಬೀಸಿದ್ದಾರೆ.
ಇದನ್ನೂ ಓದಿ : ಸುಪ್ರೀಂ ತೀರ್ಪು, ಕ್ಷಣ ಕ್ಷಣಕ್ಕೂ ʻಡೆವಿಲ್ʼಗೆ ಡವಡವ
ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ನಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತಿಲ್ಲ. ಈಗಾಗಲೇ ಗ್ರಾಮ ಪಂಚಾಯತಿ ಅವಧಿ ಮುಕ್ತಾಯವಾಗುತ್ತಾ ಬಂದಿದೆ. ಇನ್ನೇನು ಅಭಿವೃದ್ಧಿ ಮಾಡುತ್ತಿರೀ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಜನರ ಆಕ್ರೋಶದಿಂದ ಕಂಗಾಲಾಗಿರುವ ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಳ್ಳೇಗೌಡ, ನಾವು ಅನುದಾನಕ್ಕಾಗಿ ಪ್ಲಾನ್ ಆರ್ಡರ್ ಕಳಿಸಿದ್ದೇವೆ. ಆದರೆ ಮೇಲ್ಮಟ್ಟದಲ್ಲಿ ತಿರಸ್ಕಾರ ಆಗಿದೆ ಎಂದು ಕೈಚೆಲ್ಲಿದ್ದಾರೆ.
ಹೇಳೋದಕ್ಕೆ ಕೃಷಿ ಸಚಿವರ ಕ್ಷೇತ್ರ. ಮಂತ್ರಿ ಆದವರು ತಮ್ಮ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿಕೊಳ್ತಾರೆ ಅನ್ನೋ ಮಾತು ಇಲ್ಲಿ ಸುಳ್ಳಾಗಿದೆ. ಅಭಿವೃದ್ಧಿ ಕಾಣದ ಹೊನ್ನಾವರ ಗ್ರಾಮ ಪಂಚಾಯಿತಿ , ಮುಂಬರುವ ದಿನಗಳಲ್ಲಿ ಸಚಿವರಿಗೂ ಘೇರಾವ್ ಮಾಡಲು ಸಜ್ಜಾಗಿ ನಿಂತಿದೆ.