)
School Without Toilets: ಇಲ್ಲಿ ಸರ್ಕಾರಿ ಪ್ರೌಢ ಶಾಲೆಯುಂಟು ಆದ್ರೆ ಶೌಚಾಲಯ ಇಲ್ಲ...! ಗದಗ ತಾಲೂಕಿನ ಹೊಂಬಳ ಸರ್ಕಾರಿ ಪ್ರೌಢ ಶಾಲೆಗಿಲ್ಲ ಶೌಚಾಲಯ ಭಾಗ್ಯ...! ಪ್ರೌಢ ಶಾಲೆಯ ನೂರಾರು ಗಂಡು ಮಕ್ಕಳ ಗೋಳು ಕೇಳೋರೆ ಇಲ್ಲ..? ಬಯಲು ಶೌಚ ಮೊರೆ ಹೋದ ಹೊಂಬಳ ಶಾಲೆ ಗಂಡು ಮಕ್ಕಳು...! ಹೆಣ್ಣು ಮಕ್ಕಳಿಗೆ ಇದ್ದೂ ಇಲ್ಲದಂತಿರುವ ಪಿಂಕ್ ಶೌಚಾಲಯ.
ಹೌದು, ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಎಲ್.ಎಸ್ ಮೈಲಾರ ಸರ್ಕಾರಿ ಪ್ರೌಢ ಶಾಲೆ ಇದೆ. 8 ರಿಂದ 10ನೇ ತರಗತಿ ವರೆಗೆ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 100ಕ್ಕೂ ಅಧಿಕ ಗಂಡು ಮಕ್ಕಳಿದ್ದಾರೆ. ಅವರಿಗೆ ಬಹುಮುಖ್ಯವಾಗಿ ಶೌಚಕ್ಕೆ ಶೌಚಾಲಯವೇ ಇಲ್ಲ. ಈ ಗ್ರಾಮದಲ್ಲಿ ಸರ್ಕಾರಿ ಶಾಲೆ 90ರ ದಶಕದಿಂದ್ಲೆ ಆರಂಭವಾಗಿದೆ. ಮೊದಲಿಗೆ ಚಿಕ್ಕ ಶೌಚಾಲಯ ನಿರ್ಮಿಸಲಾಗಿತ್ತು. ಅದು ಕಳಪೆ ಆದ್ದರಿಂದ ಎರಡೇ ವರ್ಷದಲ್ಲಿ ಹಾಳಾಗಿದೆ. ಶೌಚಾಲಯಕ್ಕೆ ಹಾಕಿದ್ದ ಶೀಟ್ ಗಳು ಮಳೆ ಗಾಳಿಗೆ ಹಾರಿಹೋಗಿವೆ. ಗೋಡೆಗಳು ಬಿದ್ದು ನೆಲಕಚ್ಚಿವೆ. ಈ ಪ್ರೌಢ ಶಾಲೆ ನೂರಾರು ಮಕ್ಕಳಿಗೆ, ಶೌಚಕ್ಕೆ ಬಯಲೇ ಅನಿವಾರ್ಯವಾಗಿದೆ.
ಸ್ಕೂಲ್ ಎದುರು ರಾಜ್ಯ ಹೆದ್ದಾರಿ ಇರುವುದರಿಂದ ರಸ್ತೆ ದಾಟಿಕೊಂಡು ಶೌಚಕ್ಕೆ ಹೋಗೊ ಅನಿರ್ವಾಯತೆ ಇದೆ. ಮಲ-ಮೂತ್ರಕ್ಕಾಗಿ ಮಕ್ಕಳು ರಸ್ತೆ ದಾಟುವ ವೇಳೆ ಏನಾದ್ರೂ ಅನಾಹುತ ಘಟನೆ ನಡೆದ್ರೆ ಯಾರು ಹೋಣೆ ಅನ್ನುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಸ್ಥಳಿಯ ಗ್ರಾಮ ಪಂಚಾಯಿತಿಗೆ ಸಾಕಷ್ಟು ಮನವಿ ನೀಡಲಾಗಿದೆ. ಆದರೂ, ಯಾರೂ ಸಹ ಈ ಸಮಸ್ಯೆಯನ್ನು ಕಾಣು ತೆರೆದು ನೋಡ್ತಿಲ್ಲ. ಗ್ರಾಮ ಪಂಚಾಯತ್ ನವರು ತಾಂತ್ರಿಕ ದೋಷದ ನೆಪ ಹೇಳಿ ಕಾಲ ಕಳೀತಿದ್ದಾರೆ. ಅದ್ಯಾವಾಗಾ ಕಾಲ ಕೂಡಿ ಬರುತ್ತೊ ಅಂತ ಕಾಯ್ದುನೋಡೊ ತಂತ್ರಕ್ಕೆ ಮೊರೆ ಹೋಗಿದ್ದಾರೆ ಶಾಲೆಯ ಶಿಕ್ಷಕರು.
ಇದ್ದು ಇಲ್ಲದಂತಿರುವ ಪಿಂಕ್ ಶೌಚಾಲಯ:
ಇನ್ನೂ ಈ ಶಾಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ನಿರ್ಮಿಸಲಾಗಿರುವ ಶೌಚಾಲಯ ಇದ್ದು ಇಲ್ಲದಂತೆ ಇದೆ. ಅಲ್ಲಿ ನೀರಿನ ವ್ಯವಸ್ಥೆ ಇಲ್ಲವೇ ಇಲ್ಲ. ಆದ್ರೆ ಗಂಡು ಮಕ್ಕಳು ಶೌಚಾಲಯವಿಲ್ಲದೆ ಬಯಲಿನಲ್ಲೇ ಶೌಚ ಅನಿವಾರ್ಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪೂರಕ ವಾತಾವರಣ ನಿರ್ಮಿಸದೇ, ಮಕ್ಕಳ ಜೊತೆಗೆ ಸರ್ಕಾರ ಚೆಲ್ಲಾಟವಾಡುವಂತಿದೆ.
ಸರ್ಕಾರ ಪ್ರತಿಯೊಬ್ಬರಿಗೂ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಿ ಅಂತ ಘೋಷಿಸುತ್ತೆ. ಅದೇ ಸರ್ಕಾರ ಬಯಲು ಶೌಚಾಲಯ ಮುಕ್ತವನ್ನಾಗಿ ಮಾಡಲು ಸಾವಿರಾರು ಕೋಟಿ ಹಣ ಖರ್ಚುಮಾಡುತ್ತೆ. ಇನ್ನು ಪ್ರತಿ ವರ್ಷ ಶಾಲಾ ಶೌಚಾಲಯ ನಿರ್ವಹಣೆಗೆ ಪ್ರತ್ಯೇಕ ಹಣ ತೆಗೆದಿರಿಸುತ್ತೆ. ಆದ್ರೂ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯವೇ ಇಲ್ಲ. ಈ ಶಾಲೆಯ ಗಂಡು ಮಕ್ಕಳು ಪಾಡು ಹೇಳತೀರದು. ಮಾಧ್ಯಮಗಳ ಮೂಲಕವಾದ್ರೂ ಶೌಚಾಲಯ ಭಾಗ್ಯ ಬರಹುದು ಅಂದುಕೊಂಡಿ್ದೆವೆ ಅಂತಾರೆ ಸ್ಥಳೀಯರು.
ಸದ್ಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಇದೆ. ಆದರೆ ಈ ಶಾಲೆಯಲ್ಲಿ ಮಕ್ಕಳಿಗೆ ಇನ್ನೂ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ. ಇನ್ನಾದ್ರೂ ಇಂತಹ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಶಾಲೆಗೆ ಒಂದು ಹೈಟೆಕ್ ಬೇಡ, ಸಾಮಾನ್ಯ ಶೌಚಾಲಯ ಕಟ್ಟಿಸಿಕೊಡಬೇಕು ಎಂಬುವುದು ಸ್ಥಳೀಯರ ಕಳಕಳಿಯಾಗಿದೆ.