)
ರಾಮನಗರ: ಬಿಡದಿಯಲ್ಲಿ ಟೌನ್ ಶಿಪ್ ಯೋಜನೆಯನ್ನು ವಿರೋಧಿಸಿ ರೈತರಿಗೆ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರ ಟೌನ್ ಶಿಪ್ ಯೋಜನೆಯನ್ನು ಹಿಂಪಡೆಯದಿದ್ದರೇ ಭೈರಮಂಗಲ ಗ್ರಾಮದಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹಾಗೂ ಮುಖ್ಯಮಂತ್ರಿಗಳ ನಿವಾಸ ಕೃಷ್ಣ ಕಛೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ನಿಖಿಲ್ ಅವರು ಎಚ್ಚರಿಕೆ ನೀಡಿದರು.
ರೈತರಿಗೆ ಅಧಿಕಾರ ಕೊಡುವುದು ಗೊತ್ತು ತೊಡೆ ಮುರಿಯುವುದು ಗೊತ್ತು:
ಶೇ.80ರಷ್ಟು ರೈತರು ಭೂಮಿಯನ್ನು ನೀಡುವುದಿಲ್ಲ ಎಂದು ಹೇಳಿದರು ರೈತರ ಮೇಲೆ ದಿನನಿತ್ಯ ಅಧಿಕಾರಿಗಳ ಮೂಲಕ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿರುವುದು ಯಾವ ಉದ್ದೇಶಕ್ಕೆ. ರಾಜ್ಯದ ಉಪ ಮುಖ್ಯಮಂತ್ರಿಗಳು ರೈತರ ವಿರುದ್ಧ ತೊಡೆ ತಟ್ಟಿದ್ದಾರೆ. ಅವರಿಗೆ ರೈತರ ತಾಕತ್ತಿನ ಬಗ್ಗೆ ಅರಿವಿಲ್ಲ. ರೈತರಿಗೆ ಅಧಿಕಾರ ಕೊಡುವುದು ಗೊತ್ತು ತೊಡೆ ಮುರಿಯುವುದು ಗೊತ್ತು ಎಂದು ಗುಡುಗಿದರು.
ನಮ್ಮ ಹೋರಾಟ ನಿಲ್ಲುವುದಿಲ್ಲ:
ಅಲ್ಲದೇ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಈ ಯೋಜನೆಯನ್ನ ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೊನೆಯ ಹಂತದವರೆಗೂ ರೈತರ ಧ್ವನಿಯಾಗಿ ನಿಲ್ಲುತ್ತೇವೆ ಎಂದು ರೈತರಿಗೆ ಧೈರ್ಯ ತುಂಬಿದರು.
ಜೆಡಿಎಸ್ ರೈತರ ಪಕ್ಷ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಈ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ ವಿಚಾರ ಮಾಡದೇ ರೈತರ ಮೇಲೆ ದಬ್ಬಾಳಿಕೆ ಮಾಡಿ ಭೂಮಿ ಕಸಿದುಕೊಳ್ಳುತ್ತಿರುವುದು ಯಾವ ಉದ್ದೇಶಕ್ಕಾಗಿ? ರಿಯಲ್ ಎಸ್ಟೇಟ್ ಮಾಫಿಯಾ ನಡೆಸುವುದಕ್ಕಾ.? ಎಂದು ಡಿಸಿಎಂ ಡಿಕೆಶಿ ವಿರುದ್ಧ ಕಿಡಿಕಾರಿದರು.
ರೈತರ ಜಮೀನು ಮಾರಾಟ ಮಾಡದಂತೆ ಆದೇಶ ಮಾಡಿದ್ದೀರಾ? ಅವರ ಮಕ್ಕಳ ಜೀವನಕ್ಕೆ ಏನು ಮಾಡಬೇಕು. ರೈತ ಬೀದಿಗೆ ಬರ್ತಾನೆ ಅದಕ್ಕೆ ಸಾಮಾಜಿಕ ಸಮೀಕ್ಷೆ ಮಾಡಿದ್ದೀರಾ.? ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದ್ದಾರೆ. 10 ಹಳ್ಳಿಗಳ ರೈತರ ಜೊತೆ ಮಾತನಾಡಿದ್ದೀರಾ.? ಎಂದು ಸರ್ಕಾರವನ್ನು ಪ್ರಶ್ನಿಸಲಾಯಿತು.
ಇದೇ ವೇಳೆ ಕೇಂದ್ರ ಸಚಿವರಾದ ಶ್ರೀ ಕುಮಾರಣ್ಣ ಅವರು ವರ್ಚ್ಯುವಲ್ ಸಭೆ ಮೂಲಕ ರೈತರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ರೈತರು ಎದೆಗುಂದಬೇಡಿ, ನಾನು ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಖುದ್ದಾಗಿ ನಾನೇ ಬಂದು ನಿಮ್ಮ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಧೈರ್ಯ ತುಂಬಿದರು.
ನಮ್ಮ ನೀರು ಕಂಡೋರ ಪಾಲಾಗಿದೆ:
ಉಪಮುಖ್ಯಮಂತ್ರಿಗಳೇ ಅವತ್ತು ಮೇಕೆದಾಟು ಯೋಜನೆಗೆ ನಮ್ಮ ನೀರು ನಮ್ಮ ಹಕ್ಕು ತೂರಾಡಿಕೊಂಡು ಹೋಗಿ ಪಾದಯಾತ್ರೆ ಮಾಡಿದ್ರಲ್ಲ ಇವತ್ತು ನಮ್ಮ ನೀರು ಕಂಡೋರ ಪಾಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರ ಕಾಲೆಳೆದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸಿಬಿ ಸುರೇಶ್ ಬಾಬು ರವರು, ಮಾಜಿ ಶಾಸಕರಾದ ಎ. ಮಂಜು ರವರು, ಡಾ. ಕೆ.ಅನ್ನದಾನಿ ರವರು, ವಿಧಾನಪರಿಷತ್ ಸದಸ್ಯರಾದ ಟಿ.ಎನ್. ಜವರಾಯಿಗೌಡ ರವರು, ಟಿ.ಎಸ್. ಶರವಣ ರವರು, ಮಾಜಿ ವಿಧಾನಪರಿಷತ್ ಸದಸ್ಯರಾದ ಶರಮೇಶ್ ಗೌಡ ರವರು ಹಾಗೂ ರೈತಪರ ಹೋರಾಟಗಾರರು, ಸ್ಥಳೀಯ ರೈತರು ಉಪಸ್ಥಿತರಿದ್ದರು.