Bengaluru: ರಾಜ್ಯ ರಾಜಕೀಯದಲ್ಲಿ ‘ನವಂಬರ್ ಕ್ರಾಂತಿ’ ಚರ್ಚೆಗಳು ಗರಿಗೆದರಿರುವ ಸಮಯದಲ್ಲಿ, ಜೆಡಿಎಸ್ ಅಂಗಳದಲ್ಲೂ ನಾಯಕತ್ವ ಬದಲಾವಣೆ ಕುರಿತ ಸಂಚಲನ ಶುರುವಾಗಿದೆ. ಕಾಂಗ್ರೆಸ್ ಪಕ್ಷದೊಳಗಿನ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಲ್ಲಟದ ಮಾತುಗಳು ಮುನ್ನಲೆಗೆ ಬಂದಿದೆ. ಇದೇ ಹಿನ್ನಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಲರ್ಟ್ ಆಗಿದ್ದಾರೆ.
ಹೆಚ್.ಡಿ.ಕೆ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಅಭಿಪ್ರಾಯ ಸಂಗ್ರಹ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಹಳೆ ಮೈಸೂರು ಭಾಗದಲ್ಲಿ ಹೆಚ್.ಡಿ.ಕೆ ಪ್ರವಾಸ ನಡೆಸಿ, ನಂಜನಗೂಡು ಹಾಗೂ ಚಾಮುಂಡೇಶ್ವರಿ ದರ್ಶನ ಪಡೆದು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಸೋಮವಾರ ಬೆಂಗಳೂರಿನ ಪಕ್ಷ ಕಚೇರಿಯಲ್ಲಿ ಹಿರಿಯ ಮುಖಂಡರ ಸಭೆಯನ್ನು ಕುಮಾರಸ್ವಾಮಿ ಕರೆದಿದ್ದಾರೆ. ಉತ್ತರ ಕರ್ನಾಟಕದಲ್ಲೂ ನಿಖಿಲ್ ಸಕ್ರಿಯವಾಗಿದ್ದು, ಸಂಘಟನೆ ಬಲಪಡಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವ ಮಾತುಗಳು ನಿಜವಾದರೆ, ಸಮುದಾಯದ ಮತಬ್ಯಾಂಕ್ ಹಿಡಿತಕ್ಕಾಗಿ ಪುತ್ರ ನಿಖಿಲ್ ಅನ್ನು ಮುಂದಿರಿಸಲು ಹೆಚ್.ಡಿಕೆ ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ರಾಜಕೀಯದಲ್ಲಿ ಹೆಚ್.ಡಿಕೆ ಬ್ಯುಸಿ ಆಗಿರುವುದರಿಂದ, ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಸಮಯ ನೀಡಲು ಸಂಕೋಲೆ ಇರುವ ಹಿನ್ನಲೆ—ಸಂಕ್ರಾಂತಿಯ ವೇಳೆಗೆ ನಿಖಿಲ್ ಪಟ್ಟಾಭಿಷೇಕದ ಕುರಿತ ಚಿಂತನೆ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ನಿಖಿಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸುವ ಕುರಿತು ಜೆಡಿಎಸ್ ಪಿತಾಮಹ ಎಚ್.ಡಿ. ದೇವೇಗೌಡರ ಸಹಮತವೂ ದೊರೆತಿರುವುದಾಗಿ ಪಕ್ಷ ಮೂಲಗಳು ಹೇಳಿವೆ.
ನವಂಬರ್ ತಿಂಗಳಲ್ಲಿ ಎದುರಾಗಬಹುದಾದ ರಾಜಕೀಯ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಜೆಡಿಎಸ್ ಸುಮ್ಮನೆ ಕೂರದೆ ರಾಜಕೀಯ ಲಾಭ ಪಡೆಯಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ.









