)
Alpine Ethanol Limited Company
: ಕೃಷಿ ಭೂಮಿ, ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತು & ಫಲವತ್ತತೆಯ ನಾಡಲ್ಲಿ ಖಾಸಗಿ ಕಂಪನಿಯೊಂದು ಕಾಲಿಟ್ಟಿದೆ. ರೈತರಿಗೆ ಯಾಮಾರಿಸಿ ಭೂಮಿ ಖರೀದಿಸಿ, ಕೆರೆ ಕಬಳಿಸಿ ವಿರೋಧಗಳ ನಡುವೆ ಆರಂಭವಾಗ್ತಿದೆ ಅನ್ನೋ ಆರೋಪ ಕೇಳಿ ಬರ್ತಿದೆ. ರೈತರ ಭೂಮಿ ಫಲವತ್ತತೆ, ಪರಿಸರ, ವಾಯು ಮಾಲಿನ್ಯ, ಶಬ್ಧಮಾಲಿನ್ಯ ಅಂತರ್ಜಲ ಮಟ್ಟ, ರಸ್ತೆ ಹಾಳಾಗುವುದನ್ನ ತಡೆಗಟ್ಟಿ, ಜನರ ಜೀವ ಉಳಿಸಿ ಎಂಬ ಕೂಗು ಕೇಳಿಬರುತ್ತಿದೆ.
ಹೌದು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಿರೇಮಲ್ಲಾಪೂರ ಗ್ರಾಮದ ಬಳಿ ಬೆಂಗಳೂರ ಮೂಲದ ಆಲ್ಪೈನ್ ಎಥೆನಾಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಎಥೆನಾಲ್ ಘಟಕ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸ್ಥಳಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಫ್ಯಾಕ್ಟರಿ ಊರು ಪಕ್ಕದಲ್ಲೇ ಇರುವುದರಿಂದ ಜನರಿಗೆ ಸಾಕಷ್ಟು ತೊಂದರೆ ಆಗಲಿದೆ. ಎಥೆನಾಲ್ ಫ್ಯಾಕ್ಟರಿ ಆದ್ದರಿಂದ ದುರ್ವಾಸನೆ, ಹೊಗೆ, ಶಬ್ದ ಮಾಲಿನ್ಯದಿಂದ ತೊಂದರೆ ಆಗುತ್ತದೆ. ನಮಗೆ ಹಾಗೂ ನಮ್ಮ ಪೀಳಿಗೆಗೆ ಪೂರಕವಾಗದೇ ಮಾರಕವಾಗಲಿದೆ. ಇದರಿಂದ ರೈತರ ಭೂಮಿ ಫಲವತ್ತತೆ ಹಾಳಾಗಲಿದೆ. ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಅಂತರ್ಜಲ ಮಟ್ಟ, ರಸ್ತೆ ಹಾಳಾಗುವುದನ್ನ ತಡೆಗಟ್ಟುವುದರ ಜೊತೆಗೆ ಜನ-ಜಾನುವಾರುಳ ಪ್ರಾಣ ಉಳಿಸಿ ಎಂಬ ಕೂಗು ಸ್ಥಳಿಯರದ್ದಾಗಿದೆ.
ಹಿರೇಮಲ್ಲಾಪೂರ ಸರಹದ್ದಿನ ಸರ್ವೇ ನಂಬರ್ 45 ಮತ್ತು 46ರಲ್ಲಿ ಸುಮಾರು 40ಕ್ಕೂ ಅಧಿಕ ಎಕರೆ ವಿಸ್ತೀರ್ಣದಲ್ಲಿ ಫ್ಯಾಕ್ಟರಿ ನಿರ್ಮಾಣವಾಗುತ್ತಿದೆ. ಮೊದಮೊದಲು ಕೃಷಿ ಚಟುವಟಿಕೆ, ಫಾರ್ಮ್ ಹೌಸ್ ಹೆಸರಲ್ಲಿ ಮಧ್ಯವರ್ತಿಗಳಿಂದ ರೈತರಿಗೆ ಸುಳ್ಳು ಹೇಳಿ ಭೂಮಿ ಖರೀದಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಫ್ಯಾಕ್ಟರಿ ಕಟ್ಟುವ ಕಾರ್ಯ ಜೋರಾಗಿ ನಡೆಸಲಾಗುತ್ತಿದೆ. ಊರಿನ ಜನ-ಜಾನುವಾರು, ರೈತರಿಗೆ ವರದಾನವಾದ ಕೆರೆ ಸಹ ಕಬಳಿಸುವ ಹುನ್ನಾರ ನಡೆಸಿದ್ದಾರೆಂಬ ಆರೋಪ ಸ್ಥಳಿಯರಿಂದ ಕೇಳಿ ಬರುತ್ತಿದೆ. ಎಥೆನಾಲ್ ಘಟಕಗಳ ನಿರ್ಮಾಣಕ್ಕೆ ಸಾಕಷ್ಟು ವಿರೋಧವಿದೆ. ಸ್ಥಳಿಯರ ಅನುಮತಿ ಪಡೆಯದೇ ಈ ಫ್ಯಾಕ್ಟರಿ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಕೇಳಲು ಹೋದರೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರೇಮಲ್ಲಾಪೂರ ಗ್ರಾಮಸ್ಥರ ವಿರೋಧದ ನಡುವೆಯೂ ಎಥೆನಾಲ್ ಫ್ಯಾಕ್ಟರಿ ನಿರ್ಮಾಣದ ಕಾರ್ಯ ಶುರುವಾಗಿದೆ. ಈ ಬಗ್ಗೆ ತಹಶಿಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಯಾರೂ ಸಹ ಇತ್ತ ಸುಳಿಯುತ್ತಿಲ್ಲವೆಂಬ ಆರೋಪ ಸ್ಥಳಿಯರದ್ದಾಗಿದೆ. ಹತ್ತಿರದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಊರು ಪಕ್ಕದಲ್ಲಿ ಫ್ಯಾಕ್ಟರಿ ಕಟ್ಟಲು ಪರವಾನಿಗೆ ಕೊಟ್ಟವರು ಯಾರು? ಅನ್ನೋ ಪ್ರಶ್ನೆ ಸ್ಥಳೀಯರನ್ನ ಕಾಡುತ್ತಿದೆ. ಸ್ಥಳಿಯರ ಹೋರಾಟಕ್ಕೆ ಮಣಿದು ಫ್ಯಾಕ್ಟರಿ ನಿರ್ಮಾಣಕ್ಕೆ ಫುಲ್ಸ್ಟಾಪ್ ಬೀಳುತ್ತಾ ಅಥವಾ ಮನವೊಲಿಸಿ ಎಥೆನಾಲ್ ಘಟಕ ಆರಂಭವಾಗುತ್ತಾ? ಕಾದು ನೋಡಬೇಕಿದೆ.