ಪಕ್ಷಾಂತರಿಗಳನ್ನು ಜನರು ಸಹಿಸಲ್ಲ, ಅವರನ್ನು ಖಂಡಿತಾ ಸೋಲಿಸುತ್ತಾರೆ- ಸಿದ್ಧರಾಮಯ್ಯ

 ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ' ಪಕ್ಷಾಂತರಿಗಳನ್ನು ಜನರು ಸಹಿಸಲ್ಲ, ಅವರನ್ನು ಖಂಡಿತಾ ಸೋಲಿಸುತ್ತಾರೆ 'ಎಂದು ಅಭಿಪ್ರಾಯಪಟ್ಟಿದ್ದಾರೆ.

Updated: Nov 13, 2019 , 03:26 PM IST
ಪಕ್ಷಾಂತರಿಗಳನ್ನು ಜನರು ಸಹಿಸಲ್ಲ, ಅವರನ್ನು ಖಂಡಿತಾ ಸೋಲಿಸುತ್ತಾರೆ- ಸಿದ್ಧರಾಮಯ್ಯ
file photo

ಬೆಂಗಳೂರು:  ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ' ಪಕ್ಷಾಂತರಿಗಳನ್ನು ಜನರು ಸಹಿಸಲ್ಲ, ಅವರನ್ನು ಖಂಡಿತಾ ಸೋಲಿಸುತ್ತಾರೆ 'ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೇಲ್ನೋಟಕ್ಕೆ ಅನರ್ಹ ಶಾಸಕರ ಉದ್ದೇಶ ಈಡೇರಿದಂತೆ ಕಂಡರೂ, ನೈತಿಕತೆ ಆಧಾರದಲ್ಲಿ ಇದು ಅವರಿಗೆ ಅತಿ ದೊಡ್ಡ ಹಿನ್ನಡೆ. ಸಂವಿಧಾನದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಶಾಸಕರು ಅನರ್ಹರಾಗುವುದು ಅವರ ನೈತಿಕತೆಯ ಸೋಲು ಎಂದು ಸಿದ್ಧರಾಮಯ್ಯ ಸುಪ್ರೀಂ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತಾಗಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.

'ಸ್ವಯಂಪ್ರೇರಿತವಲ್ಲದ ರಾಜೀನಾಮೆ ಹಾಗೂ ವಿಪ್ ಉಲ್ಲಂಘಿಸಿದ್ದಕ್ಕಾಗಿ ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು 17 ಜನ ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಈ ತೀರ್ಪಿನಲ್ಲಿ ಸಭಾಧ್ಯಕ್ಷರ ಆದೇಶವನ್ನು ಸುಪ್ರೀಂ ಕೋರ್ಟ್ ಭಾಗಶಃ ಎತ್ತಿಹಿಡಿದಿದೆ. 

ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರ ನಿರ್ಣಯದಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಸಂವಿಧಾನದ ನಿಯಮ ಉಲ್ಲಂಘಿದ್ದಕ್ಕಾಗಿ ಅನರ್ಹಗೊಳಿಸಲಾಗಿತ್ತು. ಎರಡನೆಯದು ತಪ್ಪಿತಸ್ಥರೆಂಬ ಕಾರಣಕ್ಕೆ ಈ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅವರ ಮೇಲೆ ನಿರ್ಬಂಧ ಹೇರಲಾಗಿತ್ತು. 

ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸಭಾಧ್ಯಕ್ಷರ ನಿರ್ಣಯದ ಮೊದಲ ಭಾಗವನ್ನು ಎತ್ತಿಹಿಡಿಯಲಾಗಿದೆ ಮತ್ತು ಎರಡನೇ ಭಾಗವನ್ನು ಬದಲಾವಣೆಗೊಳಪಡಿಸಿ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಹೊಣೆಗಾರಿಕೆ ಅತಿ ಮುಖ್ಯವಾದುದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ಪಕ್ಷದಿಂದ ಗೆದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರುವುದು ಅನೈತಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ. ಇದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದನ್ನೂ ಸ್ವಾಗತಿಸುತ್ತೇನೆ. ಆದರೆ ಪಕ್ಷದಿಂದ ಪಕ್ಷಕ್ಕೆ ಹಾರುವವರನ್ನು ಜನರು ಸಹಿಸಲ್ಲ, ಅವರನ್ನು ಖಂಡಿತಾ ಸೋಲಿಸುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷಾಂತರಿಗಳು ಸೋತಿದ್ದಾರೆ, ಅದೇ ಫಲಿತಾಂಶ ಕರ್ನಾಟಕದಲ್ಲಿಯೂ ಮರುಕಳಿಸುತ್ತದೆ.

ಮೇಲ್ನೋಟಕ್ಕೆ ಅನರ್ಹ ಶಾಸಕರ ಉದ್ದೇಶ ಈಡೇರಿದಂತೆ ಕಂಡರೂ, ನೈತಿಕತೆ ಆಧಾರದಲ್ಲಿ ಇದು ಅವರಿಗೆ ಅತಿ ದೊಡ್ಡ ಹಿನ್ನಡೆ. ಸಂವಿಧಾನದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಶಾಸಕರು ಅನರ್ಹರಾಗುವುದು ಅವರ ನೈತಿಕತೆಯ ಸೋಲು. ಇದನ್ನು ಜನರು ಗಮನಿಸಿದ್ದರೆ ಮತ್ತು ಮುಂದಿನ‌ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.