ರಾಜ್ಯಕ್ಕೆ ಮೋದಿ ಭೇಟಿ, ಸರಣಿ ಟ್ವೀಟ್ ಮೂಲಕ ಕುಟುಕಿದ ಸಿದ್ಧರಾಮಯ್ಯ

ನೂತನ ವರ್ಷದ ಆಚರಣೆ ನಂತರ ರಾಜ್ಯಕ್ಕೆ ಪ್ರವಾಸ ಬೆಳೆಸಿರುವ ಪ್ರಧಾನಿ ಮೋದಿ ತುಮಕೂರಿನಲ್ಲಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಲವಾರು ಕಾರ್ಯಕ್ರಮಗಳಲ್ಲಿ  ಭಾಗಿಯಾದರು.

Last Updated : Jan 2, 2020, 08:44 PM IST
ರಾಜ್ಯಕ್ಕೆ ಮೋದಿ ಭೇಟಿ, ಸರಣಿ ಟ್ವೀಟ್ ಮೂಲಕ ಕುಟುಕಿದ ಸಿದ್ಧರಾಮಯ್ಯ  title=

ಬೆಂಗಳೂರು: ನೂತನ ವರ್ಷದ ಆಚರಣೆ ನಂತರ ರಾಜ್ಯಕ್ಕೆ ಪ್ರವಾಸ ಬೆಳೆಸಿರುವ ಪ್ರಧಾನಿ ಮೋದಿ ತುಮಕೂರಿನಲ್ಲಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿ ಭಾಷಣ ಮಾಡಿದ ಮೋದಿ' ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ರಚಿಸಲಾಯಿತು, ಧಾರ್ಮಿಕ ಅಲ್ಪಸಂಖ್ಯಾತರನ್ನು ಅಲ್ಲಿ ಹಿಂಸಿಸಲಾಗುತ್ತಿದೆ. ಕಿರುಕುಳಕ್ಕೊಳಗಾದವರು ನಿರಾಶ್ರಿತರಾಗಿ ಭಾರತಕ್ಕೆ ಬರಬೇಕಾಯಿತು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ವಿರುದ್ಧ ಮಾತನಾಡುವುದಿಲ್ಲ, ಬದಲಾಗಿ, ಅವರು ಈ ನಿರಾಶ್ರಿತರ ವಿರುದ್ಧ ರ್ಯಾಲಿಗಳನ್ನು ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು.ಇನ್ನು ಮುಂದುವರೆದು 'ಕಳೆದ 70 ವರ್ಷಗಳ ಪಾಕಿಸ್ತಾನದ ಕ್ರಮಗಳ ವಿರುದ್ಧ ಧ್ವನಿ ಎತ್ತಿ' ಎಂದು ಅವರು ಪ್ರತಿಭಟನಾಕಾರರಿಗೆ ಆಗ್ರಹಿಸಿದರು.

ಇನ್ನೊಂದೆಡೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಅವರಿಗೆ ಸರಣಿ ಟ್ವೀಟ್ ಗಳ ಮೂಲಕ ರಾಜ್ಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. "ತುಮಕೂರಿನ‌‌ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ.ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ‌ ಕ್ಷಮಿಸದು" ಎಂದು ಟೀಕಿಸಿದ್ದಾರೆ.

'ನೆರೆಹಾವಳಿಯಿಂದ ಆಗಿರುವ ನಷ್ಟ ಅಂದಾಜು ರೂ.೫೦ ಸಾವಿರ ಕೋಟಿಗೂ ಅಧಿಕ.ರಾಜ್ಯ ಸರ್ಕಾರ ಕೇಳಿದ್ದು ರೂ.36 ಸಾವಿರ ಕೋಟಿ, ಕೇಂದ್ರ ಸರ್ಕಾರ ಕೊಟ್ಟಿದ್ದು ರೂ.1200 ಕೋಟಿ.ಕರ್ನಾಟಕದ ಬಗ್ಗೆ ಯಾಕೆ ತಾತ್ಸಾರ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಮುಂದುವರೆದು ' ಕಾವೇರಿ ನೀರು ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ರಿ, ಈಗ ಮಹದಾಯಿ ಯೋಜನೆಯನ್ನು ತಡೆದು ದ್ರೊಹ ಮಾಡುತ್ತಿದ್ದೀರಿ, ಚುನಾವಣಾ ಕಾಲದಲ್ಲಿ ನಿಮ್ಮ ಜಲಸಂಪನ್ಮೂಲ ಸಚಿವ ಹೇಳಿದ್ದೇನು? ಈಗ ಮಾಡಿದ್ದೇನು? ಕರ್ನಾಟಕದ ಜನರ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ, ಅಸೂಯೆ?. ಕೇಂದ್ರ- ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಭಾಷಣ ಮಾಡಿದ್ರಿ, ಅಮಾಯಕ ಜನ ನಿಮ್ಮ ಮಾತು ನಂಬಿ 25 ಸ್ಥಾನ ಗೆಲ್ಲಿಸಿಕೊಟ್ಟರು. ನಮ್ಮ ಭಾಗ್ಯದ ಬಾಗಿಲು ತೆಗೆಯಲಿಲ್ಲ, ಕರ್ನಾಟಕದ ಪಾಲಿಗೆ ನಿಮ್ಮ ಕಚೇರಿ ಬಾಗಿಲು ಮುಚ್ಚಿದ್ದೀರಿ, ಯಾಕೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆರೆಹಾವಳಿಗೆ ಪರಿಹಾರ ಕೊಡಲಿಲ್ಲ, ಜಿಎಸ್ ಟಿ ನಷ್ಟಕ್ಕೆ ಪರಿಹಾರ ತುಂಬಿಕೊಡಲಿಲ್ಲ,ಕೇಂದ್ರ ಅನುದಾನದಲ್ಲಿ ನಮಗೆ ನೀಡ ಬೇಕಾದ ನ್ಯಾಯಬದ್ಧ ಪಾಲೂ ಕೊಡಲಿಲ್ಲ ಈಗ ಯಾವ ಮುಖ ಹೊತ್ತು ರಾಜ್ಯಕ್ಕೆ ಬರ್ತಿದ್ದೀರಿ ನರೇಂದ್ರ ಮೋದಿ ಅವರೇ? ಎಂದು ಸಿದ್ಧರಾಮಯ್ಯ ಕುಟುಕಿದ್ದಾರೆ.

Trending News