ಒಂದು ಕಾಲದಲ್ಲಿ ತನ್ನ ಸಾಂಸ್ಕೃತಿಕ ಶ್ರೀಮಂತಿಕೆ, ಔದ್ಯಮಿಕ ಪ್ರಗತಿ, ಹಾಗೂ ಪ್ರವಾಸೋದ್ಯಮಕ್ಕೆ ಹೆಸರಾಗಿದ್ದ ಕರ್ನಾಟಕ, ಇಂದು ತನ್ನ ಜಾಗತಿಕ ಸ್ಥಾನಮಾನಕ್ಕೆ ಚ್ಯುತಿ ತರುವಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಹಂಪಿಯ ಬಳಿ ಇಸ್ರೇಲಿ ಪ್ರವಾಸಿಯ ಭೀಕರ ಹಲ್ಲೆ, ಔದ್ಯಮಿಕ ಭೂ ಹಂಚಿಕೆಯಲ್ಲಿ ಎದ್ದು ಕಾಣುವ ಭ್ರಷ್ಟಾಚಾರದಂತಹ ಘಟನೆಗಳು ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿವೆ. ಆದರೆ ಇಂತಹ ಗಂಭೀರ ವಿಚಾರಗಳತ್ತ ಬೆಳಕು ಚೆಲ್ಲುವ ಬದಲು, ರಾಜ್ಯದ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರದ ಕಿತ್ತಾಟದತ್ತವೇ ದೃಷ್ಟಿ ನೆಟ್ಟು ಕೂತಿರುವಂತಿದೆ.
ಕರ್ನಾಟಕದ ಆಡಳಿತ ಅನಿಶ್ಚಿತತೆಯಲ್ಲಿರುವಂತೆ ಕಾಣುತ್ತಿದ್ದು, ರಾಜ್ಯದಲ್ಲಿ ತಲೆದೋರಿರುವ ಸುರಕ್ಷತಾ ವೈಫಲ್ಯಗಳು, ಭ್ರಷ್ಟಾಚಾರ, ಮತ್ತು ಅಸಮರ್ಪಕ ಆರ್ಥಿಕ ನಿರ್ವಹಣೆಗಳು ಪ್ರವಾಸಿಗರು, ಹೂಡಿಕೆದಾರರು, ಹಾಗೂ ಉದ್ಯಮಗಳಲ್ಲಿ ಆತಂಕ ಮೂಡಿಸಿವೆ. ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ಕರ್ನಾಟಕದಿಂದ ಹೂಡಿಕೆದಾರರು ನಿರ್ಗಮಿಸುವ, ಬೆಳವಣಿಗೆ ಕುಂಠಿತವಾಗುವ, ಮತ್ತು ಕಾನೂನು ಸುವ್ಯವಸ್ಥೆಗಳ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗುವ ಅಪಾಯಗಳಿವೆ.
ಬಿಕ್ಕಟ್ಟಿನಲ್ಲಿ ಪ್ರವಾಸೋದ್ಯಮ: ಹಂಪಿಯ ದುರಂತ ಮತ್ತು ಕಾನೂನು ಜಾರಿ ವೈಫಲ್ಯ
ಸನಾಪುರ ಕೆರೆಯ ಬಳಿ ನಡೆದ ಭೀಕರ ಘಟನೆಯಲ್ಲಿ 27 ವರ್ಷ ವಯಸ್ಸಿನ ಇಸ್ರೇಲಿ ಪ್ರವಾಸಿ ಮಹಿಳೆ ಮತ್ತು ಆಕೆ ನೆಲೆಸಿದ್ದ ಹೋಮ್ ಸ್ಟೇ ಮಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಓರ್ವ ಪುರುಷ ಪ್ರವಾಸಿಯ ಹತ್ಯೆ ನಡೆದಿದೆ. ಈ ದುರ್ಘಟನೆ ರಾಜ್ಯದಲ್ಲಿ ತಲೆದೋರಿರುವ ಭದ್ರತಾ ಸಮಸ್ಯೆಗಳತ್ತ ಬೆರಳು ತೋರಿಸಿದೆ. ಈ ಭೀಕರ ಘಟನೆ ಜಾಗತಿಕ ಪ್ರವಾಸಿ ಉದ್ಯಮಕ್ಕೆ ಆಘಾತ ನೀಡಿದ್ದು, ಅಂತರಾಷ್ಟ್ರೀಯ ಪ್ರವಾಸಿಗರಿಗೆ ಕರ್ನಾಟಕ ಸುರಕ್ಷಿತ ತಾಣವೇ ಎಂಬ ಕುರಿತು ಅನುಮಾನಗಳು ಮೂಡುವಂತೆ ಮಾಡಿದೆ.
ಈ ಸಮಸ್ಯೆಯ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವಂತೆ ರಾಜ್ಯದಲ್ಲಿ ಅನಧಿಕೃತ ಹೋಮ್ ಸ್ಟೇಗಳು ಅಪಾರವಾಗಿ ಹೆಚ್ಚಿದ್ದು, ಅವುಗಳು ಕಾನೂನಿನ ಮಿತಿಗೆ ನಿಲುಕದೆ, ತಮಗೆ ಬೇಕಾದಂತೆ ಕಾರ್ಯ ನಿರ್ವಹಿಸುತ್ತಿವೆ. ಇದರ ಪರಿಣಾಮವಾಗಿ, ಇಂತಹ ಹೋಮ್ ಸ್ಟೇಗಳು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿ ಹೊರಹೊಮ್ಮಿವೆ. ಕಾನೂನನ್ನು ಮೀರಿ ಇಂತಹ ಹೋಮ್ ಸ್ಟೇಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸ್ಥಳೀಯ ಆಡಳಿತ, ಕಾನೂನು ಜಾರಿ ಇಲಾಖೆಗಳು ಮತ್ತು ಇಂತಹ ಉದ್ಯಮ ಮುಖ್ಯಸ್ಥರ ನಡುವಿರುವ ಪರಸ್ಪರ ಹೊಂದಾಣಿಕೆಗಳಿವೆ ಎಂಬ ಭಾವನೆ ಮೂಡಿಸಿದೆ. ಇಂತಹ ಅಸುರಕ್ಷಿತ ವಾತಾವರಣ ಕರ್ನಾಟಕದ ಪ್ರವಾಸೋದ್ಯಮ ವಲಯಕ್ಕೆ ತೊಂದರೆ ಉಂಟುಮಾಡಿ, ರಾಜ್ಯದ ಆರ್ಥಿಕತೆಯ ಸ್ತಂಭಗಳಲ್ಲಿ ಒಂದಾದ ಪ್ರವಾಸೋದ್ಯಮ ಕುಸಿಯುವಂತೆ ಮಾಡಬಹುದು.
ಔದ್ಯಮಿಕ ಹಗರಣಗಳು ಮತ್ತು ಕುಸಿಯುತ್ತಿರುವ ಹೂಡಿಕೆದಾರರ ವಿಶ್ವಾಸ
ಈಗ ರಾಜಕೀಯ ಶಕ್ತಿಗಳು ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಸೆಣಸುತ್ತಿದ್ದು, ಕರ್ನಾಟಕದಲ್ಲಿ ಹೂಡಿಕೆ ನಡೆಸುವ ಹೂಡಿಕೆದಾರರ ವಿಶ್ವಾಸ ದಿನೇ ದಿನೇ ಕುಸಿತ ಕಾಣುತ್ತಿದೆ. ರಾಜ್ಯಕ್ಕೆ ಬರಬಹುದಾದ ಉತ್ತಮ ಉದ್ಯಮಗಳನ್ನು ಹಗರಣಗಳು ಹೇಗೆ ದೂರ ತಳ್ಳುತ್ತಿವೆ ಎನ್ನುವುದಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಹಗರಣ ಒಂದು ಉತ್ತಮ ಉದಾಹರಣೆಯಾಗಿದೆ. ಚಿನ್ನದ ಕಳ್ಳಸಾಗಣೆ ನಡೆಸಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಆದ್ಯತೆಯ ಮೇರೆಗೆ ಭೂಮಿ ನೀಡಿರುವುದು ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರಕ್ಕೆ ಸಾಕ್ಷಿ ನುಡಿದಿದೆ. ಈಗ ರಾಜ್ಯದ ಔದ್ಯಮಿಕ ಪ್ರಕ್ರಿಯೆಗಳು ಅರ್ಹತೆ, ಪಾರದರ್ಶಕತೆಯ ಆಧಾರದಲ್ಲಿ ನಡೆಯದೆ, ಲಂಚ ಮತ್ತು ರಾಜಕೀಯ ಪ್ರಭಾವದ ಆಧಾರದಲ್ಲಿ ನಡೆಯುತ್ತಿರುವುದು ದುರಂತದ ಬೆಳವಣಿಗೆ.
ಪ್ರಕ್ರಿಯೆಗಳಲ್ಲಿನ ವಿಳಂಬ, ತಮಗೆ ಬೇಕಾದವರಿಗೆ ಆದ್ಯತೆ, ಮತ್ತು ಅಪಾರದರ್ಶಕ ನೀತಿಗಳ ಪರಿಣಾಮವಾಗಿ, ಕರ್ನಾಟಕ ಉದ್ಯಮಗಳಿಗೆ ಅನನೂಕಲಕರ ವಾತಾವರಣವನ್ನು ಹೊಂದುತ್ತಿದೆ. ಈಗ ಹೂಡಿಕೆದಾರರು 'ಸಂಪನ್ಮೂಲಗಳ ಲಭ್ಯತೆ ಉದ್ಯಮಗಳ ಸಾಮರ್ಥ್ಯದಿಂದ ನಿರ್ಧಾರವಾಗದೆ, ರಾಜಕೀಯ ಪ್ರಭಾವದಿಂದ ನಿರ್ಧಾರವಾಗುವಂತಹ ರಾಜ್ಯದಲ್ಲಿ ನಾವು ಏಕೆ ಹೂಡಿಕೆ ಮಾಡಬೇಕು?' ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ಆರ್ಥಿಕ ಪ್ರಗತಿಗಿಂತ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡಿದ ಬಜೆಟ್
ಕರ್ನಾಟಕದ ರಾಜ್ಯ ಆದಾಯ 11% ಹೆಚ್ಚಳ ಕಂಡ ಹೊರತಾಗಿಯೂ, 2025-26ನೇ ಸಾಲಿನ ರಾಜ್ಯ ಬಜೆಟ್ ಆರ್ಥಿಕ ಸುಸ್ಥಿರತೆಯ ಬೆನ್ನೆಲುಬಾದ ಔದ್ಯಮಿಕ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಿಲ್ಲ. ರಾಜ್ಯ ಬಜೆಟ್‌ನಲ್ಲಿ 51,000 ಕೋಟಿ ರೂಪಾಯಿಗಳನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟಿರುವುದರಿಂದ, ಮತದಾರರನ್ನು ಸೆಳೆಯಲು ಅನುಕೂಲವಾಗಬಹುದು. ಆದರೆ, ಇದಕ್ಕಾಗಿ ಉದ್ಯಮ ವಲಯದ ಅಭಿವೃದ್ಧಿ ದರ 7.7% ದಿಂದ 5.8%ಗೆ ಇಳಿಕೆ ಕಂಡಿರುವುದು ಮಾತ್ರ ಎಚ್ಚರಿಕೆಯ ಸಂದೇಶವಾಗಿದೆ.
ಜನಪ್ರಿಯ ಯೋಜನೆಗಳಿಂದ ಹೆಚ್ಚಿನ ಮತ ಗಳಿಸಲು ಸಾಧ್ಯವಾಗಬಹುದು. ಆದರೆ, ಉದ್ಯೋಗ ಸೃಷ್ಟಿಗೆ, ಆರ್ಥಿಕ ವೈವಿಧ್ಯೀಕರಣಕ್ಕೆ, ಮತ್ತು ಔದ್ಯಮಿಕ ಪ್ರಗತಿಗೆ ಸೂಕ್ತವಾದ ಸದೃಢ ನೀತಿಗಳನ್ನು ಜಾರಿಗೆ ತರದಿದ್ದರೆ, ದೀರ್ಘಾವಧಿಯಲ್ಲಿ ಕರ್ನಾಟಕ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಅಪಾಯಗಳು ಹೆಚ್ಚಿವೆ. ಸುಸ್ಥಿರ ಆದಾಯ ಸೃಷ್ಟಿಯತ್ತ ಗಮನ ಹರಿಸುವುದಕ್ಕಿಂತಲೂ, ಸಬ್ಸಿಡಿಗಳಿಗೆ ಆದ್ಯತೆ ನೀಡುವ ಸರ್ಕಾರವನ್ನು ಹೂಡಿಕೆದಾರರು ಜಾಗರೂಕವಾಗಿ ಗಮನಿಸುತ್ತಾರೆ. ಇಂತಹ ಬೆಳವಣಿಗೆಗಳು ಔದ್ಯಮಿಕ ವಿಸ್ತರಣೆಗೆ ಅಡ್ಡಗಾಲು ಹಾಕುತ್ತವೆ.
ಸೌಜನ್ಯ ಪ್ರಕರಣ: ಕರ್ನಾಟಕದ ಕಾನೂನು ಮತ್ತು ಆಡಳಿತ ವೈಫಲ್ಯಕ್ಕೆ ಸಾಕ್ಷಿ
ಸೌಜನ್ಯ ಪ್ರಕರಣದಲ್ಲಿ ಸಾಕ್ಷಿಗಳನ್ನು ತಿರುಚಿ, ರಾಜಕೀಯ ಹಸ್ತಕ್ಷೇಪ ನಡೆದು, ಶೋಷಿತ ಕುಟುಂಬಕ್ಕೆ ನ್ಯಾಯ ದೊರಕದಿರುವುದು ರಾಜ್ಯದ ಕಾನೂನು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆ ಎನ್ನುವುದನ್ನು ನಮಗೆ ನೆನಪು ಮಾಡಿಕೊಡುತ್ತದೆ. ಶಕ್ತಿಶಾಲಿ ವ್ಯಕ್ತಿಗಳು ನಿರ್ಭಯವಾಗಿ ನ್ಯಾಯವನ್ನೇ ಖರೀದಿಸಲು ಸಾಧ್ಯವಾಗುವಂತಹ ರಾಜ್ಯ ಖಂಡಿತವಾಗಿಯೂ ಹೂಡಿಕೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಗಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಹೆಚ್ಚುತ್ತಿರುವ ಕಾನೂನು ನಿಷ್ಕ್ರಿಯತೆ ಮತ್ತು ಆಡಳಿತ ವೈಫಲ್ಯದ ವಾತಾವರಣ ಕರ್ನಾಟಕವನ್ನು ದೇಶೀಯ ಮತ್ತು ವಿದೇಶೀ ಹೂಡಿಕೆದಾರರಿಂದ ಇನ್ನಷ್ಟು ದೂರವಿಡುತ್ತದೆ.
ಆದ್ಯತೆ ಮರೆತ ಮಾಧ್ಯಮಗಳು: ಸಾರ್ವಜನಿಕ ಹಿತಕ್ಕಿಂತ ಅಧಿಕಾರದ ಕಿತ್ತಾಟವೇ ಮುಖ್ಯ
ಅಪರಾಧಗಳು, ಔದ್ಯಮಿಕ ಹಗರಣಗಳು, ಮತ್ತು ಆರ್ಥಿಕ ಅಸಮರ್ಪಕತೆಗಳು ರಾಜ್ಯವನ್ನು ಹೈರಾಣಾಗಿಸಿವೆ. ಆದರೆ, ರಾಜ್ಯದ ಪ್ರಮುಖ ಮಾಧ್ಯಮಗಳಂತೂ ರಾಜ್ಯದ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರದ ಕಿತ್ತಾಟಕ್ಕೇ ಆದ್ಯತೆ ನೀಡಿವೆ. ಇಂತಹ ರಾಜಕೀಯ ಅಧಿಕಾರದ ಆಟ ಕರ್ನಾಟಕದ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುವ ಪ್ರಮುಖ ವಿಚಾರಗಳ ಮೇಲೆ ಕಾರ್ಮೋಡ ಬೀರಿದೆ.
ಆಡಳಿತ ವೈಫಲ್ಯಗಳು, ಹೂಡಿಕೆದಾರರ ಕಳವಳಗಳು, ಮತ್ತು ಭದ್ರತಾ ಅಪಾಯಗಳತ್ತ ಬೆಳಕು ಚೆಲ್ಲುವು ಬದಲು, ಮಾಧ್ಯಮಗಳು ಕಾಂಗ್ರೆಸ್ ಪಕ್ಷದ ಆಂತರಿಕ ಬಣ ರಾಜಕೀಯಕ್ಕೆ ಒತ್ತು ನೀಡುತ್ತಿದ್ದು, ಆದ್ಯತೆ ನೀಡಬೇಕಾದ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಮೂಲೆಗುಂಪಾಗಿವೆ. ನಿಜವಾದ ಸವಾಲು ಕರ್ನಾಟಕದ ನೇತೃತ್ವ ಯಾರು ವಹಿಸುತ್ತಾರೆ ಎನ್ನುವುದು ಖಂಡಿತಾ ಅಲ್ಲ. ನೈಜ ಸವಾಲು, ಕರ್ನಾಟಕ ಇನ್ನು ಮುಂದೆಯೂ ಹೂಡಿಕೆ ಸ್ನೇಹಿ, ಸುರಕ್ಷಿತ ಮತ್ತು ಆರ್ಥಿಕ ಸ್ಥಿರತೆ ಹೊಂದಿರುವ ರಾಜ್ಯವಾಗಿ ಮುಂದುವರಿಯಲಿದೆಯೇ ಎನ್ನುವುದಾಗಿದೆ.
ಕರ್ನಾಟಕಕ್ಕೆ ಬೇಕು ತುರ್ತು ಸುಧಾರಣೆಗಳು
ಕರ್ನಾಟಕ ಈಗ ಒಂದು ಮುಖ್ಯ ತಿರುವಿನಲ್ಲಿ ಬಂದು ನಿಂತಿದೆ. ಜನರಲ್ಲಿ, ಹೂಡಿಕೆದಾರರಲ್ಲಿ ವಿಶ್ವಾಸವನ್ನು ಮರಳಿ ಮೂಡಿಸಲು ಮತ್ತು ಆರ್ಥಿಕ ಹಾಗೂ ಸಾಮಾಜಿಕ ಕುಸಿತವನ್ನು ತಡೆಯಲು ಕರ್ನಾಟಕದ ನಾಯಕತ್ವ ತಕ್ಷಣವೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಅವೆಂದರೆ:
ರಾಜ್ಯದ ಜನರು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಖಾತ್ರಿಪಡಿಸಲು ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು.
ಅನಧಿಕೃತ ಹೋಮ್ ಸ್ಟೇಗಳ ಮೇಲೆ ತಕ್ಷಣವೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು, ಅಂತಹ ಹೋಮ್ ಸ್ಟೇಗಳು ಕಾರ್ಯಾಚರಿಸದಂತೆ ಹದ್ದಿನ ಕಣ್ಣಿಡುವುದು.
ಔದ್ಯಮಿಕ ಭೂ ನಿಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೊಡೆದು, ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಿ, ಅವರು ರಾಜ್ಯದಲ್ಲೇ ಉಳಿಯುವಂತೆ ಮಾಡುವುದು.
ಕಲ್ಯಾಣ ಕಾರ್ಯಕ್ರಮಗಳಿಗೆ ಸಂಪೂರ್ಣ ಆದ್ಯತೆ ನೀಡಿ, ಅವುಗಳನ್ನು ಅವಲಂಬಿಸುವ ಬದಲು, ಔದ್ಯಮಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯತ್ತ ಮರಳಿ ಗಮನ ಹರಿಸುವುದು.
ಸಾರ್ವಜನಿಕರ ವಿಶ್ವಾಸವನ್ನು ಮರಳಿ ಗಳಿಸಲು ಪಾರದರ್ಶಕ ಮತ್ತು ನ್ಯಾಯಯುತ ಕಾನೂನು ವ್ಯವಸ್ಥೆಯನ್ನು ಜಾರಿಗೊಳಿಸುವುದು.
ಒಂದು ವೇಳೆ ಕರ್ನಾಟಕ ತಕ್ಷಣವೇ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲು ವಿಫಲವಾದರೆ, ಹೂಡಿಕೆದಾರರು, ಪ್ರವಾಸಿಗರು, ಮತ್ತು ಉದ್ಯಮಗಳು ರಾಜ್ಯದಿಂದ ದೂರಾಗುವ ಅಪಾಯಗಳಿವೆ. ರಾಜಕೀಯ ಕದನಗಳು ರೋಚಕ ಸುದ್ದಿಗಳನ್ನೇನೋ ಒದಗಿಸಬಹುದು. ಆದರೆ, ನಿಜವಾದ, ಸಮರ್ಥ ಆಡಳಿತದ ಹೊರತಾಗಿ, ಕರ್ನಾಟಕದ ಭವಿಷ್ಯ ಮಸುಕಾಗುವಂತೆ ಕಾಣುತ್ತಿರುವುದಂತೂ ನಿಜ.
ಲೇಖಕರು - ಗಿರೀಶ್ ಲಿಂಗಣ್ಣ
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









