)
ಸಕ್ರೆಬೈಲು: ಸಕ್ರೆಬೈಲು ಆನೆ ಶಿಬಿರದ ಜನಪ್ರಿಯ ಆನೆಗಳಲ್ಲಿ ಒಂದಾದ ಬಾಲಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬಲಗಿವಿಯಲ್ಲಿ ಉಂಟಾಗಿದ್ದ ಗ್ಯಾಂಗ್ರಿನ್ ಸೋಂಕಿನಿಂದಾಗಿ ಆನೆಯ ಬಲ ಕಿವಿಯ ಭಾಗವನ್ನು ವೈದ್ಯರ ತಂಡವು ಕತ್ತರಿಸಿ ತೆಗೆದಿದೆ.
ಬಾಲಣ್ಣ ಎಂಬ ಆನೆಯ ಕಿವಿಯ ಭಾಗದಲ್ಲಿ ಗ್ಯಾಂಗ್ರಿನ್ ಉಂಟಾಗಿದ್ದರಿಂದ ಕಳೆದ ಹಲವು ದಿನಗಳಿಂದ ಸೋಂಕಿನಿಂದಾಗಿ ನರಳುತ್ತಿದ್ದ ಆನೆಗೆ ಬಲಗಿವಿಯಾ ಭಾಗ ಸಂಪೂರ್ಣವಾಗಿ ಕಪ್ಪಾಗಿತ್ತು. ಜೊತೆಗೆ ಕಿವಿ ತೀವ್ರವಾಗಿ ಸೋರುತ್ತಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿದ್ದ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಿಂದ ಸಕ್ರೆಬೈಲು ಆನೆ ಶಿಬಿರಕ್ಕೆ ವಿಶೇಷ ವೈದ್ಯರ ತಂಡವನ್ನು ಕರೆಸಿದ್ದರು. ಬಾಲಣ್ಣನಿಗೆ ತುರ್ತು ಚಿಕಿತ್ಸೆ ನೀಡಲು ಶನಿವಾರ (ಅ.25) ಶಿಬಿರಕ್ಕೆ ಆಗಮಿಸಿದ್ದ ವಿಶೇಷ ವೈದ್ಯರ ತಂಡದಿಂದ ಆನೆಯ ಬಲಗಿವಿಯನ್ನು ಕತ್ತರಿಸಲಾಗಿದೆ.
ವೈದ್ಯರ ತಂಡವು ಸಕ್ರೆಬೈಲು ಶಿಬಿರಕ್ಕೆ ಆಗಮಿಸಿತ್ತು.
ತಜ್ಞ ವೈದ್ಯರಾದ ಡಾ. ಚೆಟ್ಟು ಯಪ್ಪ, ಡಾ. ರಮೇಶ್ ಸೇರಿದಂತೆ ಒಟ್ಟು ಐದು ಜನರ ವೈದ್ಯರ ತಂಡವು ಆನೆಯ ಆರೋಗ್ಯವನ್ನು ಪರಿಶೀಲಿಸಿ ತಕ್ಷಣವೇ ಚಿಕಿತ್ಸೆಯನ್ನು ಆರಂಭಿಸಿದ್ದು ಸೋಂಕು ತೀವ್ರವಾಗಿದ್ದರಿಂದ ಮತ್ತು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಶಸ್ತ್ರಚಿಕಿತ್ಸೆ ಮೂಲಕ ಆನೆಯ ಬಲ ಭಾಗದ ಕಿವಿಯನ್ನು ಕತ್ತರಿಸಿರುವುದಾಗಿ ತಿಳಿದುಬಂದಿದೆ.