)
ಬೆಂಗಳೂರು: 'ಸತ್ಯವೇ ಸುದ್ದಿಯ ಜೀವಾಳ' ಎನ್ನುವ ಘೋಷಣೆಯೊಂದಿಗೆ ಕನ್ನಡಿಗರ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್ ವಾಹಿನಿಯು ಕನ್ನಡ ನಾಡು ನುಡಿಗಾಗಿ ನಿರಂತರ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರತಿವರ್ಷ ವೀರ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಕಳೆದ ವರ್ಷದಿಂದ ಆರಂಭವಾಗಿರುವ ಈ ಪ್ರಶಸ್ತಿ ಯಶಸ್ವಿಯಾಗಿ ಎರಡನೇ ಬಾರಿಗೆ ನೈಜ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಪ್ರಯತ್ನಕ್ಕೆ ಮುಂದಾಗಿದೆ.ಕಲೆ, ಸಾಹಿತ್ಯ, ಸಿನಿಮಾ, ಪ್ರತಿಕಾರಂಗ, ಉದ್ಯಮ, ಹಾಗೂ ಇನ್ನಿತರ ಸೃಜನಶೀಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವ ಮೂಲಕ ಈ ಸಾಧಕರೆಲ್ಲರೂ ಇತರರಿಗೂ ಮಾದರಿಯಾಗಿದ್ದಾರೆ.ಹಾಗಾಗಿ ಇಂತಹ ಸಾಧಕರನ್ನು ಜೀ ಕನ್ನಡ ನ್ಯೂಸ್ ವಾಹಿನಿಯು ವೀರ ಕನ್ನಡಿಗ ಪ್ರಶಸ್ತಿಯನ್ನು ನೀಡುವುದರ ಮೂಲಕ ಗೌರವಿಸುತ್ತಿದೆ. ಇಂತಹ ಪ್ರತಿಷ್ಟಿತ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮಕ್ಕೆ ರಾಜ್ಯದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ.
ಡಿಸೆಂಬರ್ 4 ರಂದು ಹೋಟೆಲ್ ಲಲಿತ್ ಅಶೋಕ್ ನಲ್ಲಿ ನಡೆಯಲಿರುವ ಜೀ ಕನ್ನಡ ನ್ಯೂಸ್ ವೀರ ಕನ್ನಡಿಗ ಅವಾರ್ಡ್ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತರಾಗಿರುವ ಸಂತೋಷ ಹೆಗಡೆ, ಇಸ್ರೋದ ಮಾಜಿ ಮುಖ್ಯಸ್ಥರಾದ ಎ.ಎಸ್ ಕಿರಣ್ ಕುಮಾರ್,ಹಿರಿಯ ಸಾಹಿತಿಗಳಾದ ಬರಗೂರ ರಾಮಚಂದ್ರಪ್ಪ, ಹಿರಿಯ ನಟಿ ಡಾ. ತಾರಾ ಅನುರಾಧ, ನಟ, ವಶಿಷ್ಟ ಸಿಂಹ, ನಟಿ ಸಪ್ತಮಿ ಗೌಡ ತಮ್ಮ ಘನ ಉಪಸ್ಥಿತಿಯ ಮೂಲಕ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಇನ್ನೂ ಸರ್ಕಾರದ ಪರವಾಗಿ ಸಾರಿಗೆ & ಮಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್, ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿ, ಸನ್ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ, ಕಾರ್ಮಿಕ ಇಲಾಖೆ ಸಚಿವರಾದ ಶ್ರೀ ಸಂತೋಷ್ ಲಾಡ್, ಕನ್ನಡ, ಸಂಸ್ಕೃತಿ & ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಶಿವರಾಜ್ ತಂಗಡಗಿ, ವಿಧಾನಸಭೆ ಪ್ರತಿಪಕ್ಷ ನಾಯಕರಾದ ಶ್ರೀ ಆರ್.ಅಶೋಕ, ವಿಧಾನಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ಈ ಪ್ರತಿಷ್ಟಿತ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ವೀರ ಕನ್ನಡ ಅವಾರ್ಡ್ಸ್ ನ ಕುರಿತಾಗಿ ಪ್ರತಿಕ್ರಿಯಿಸಿರುವ ಜೀ ಕನ್ನಡ ನ್ಯೂಸ್ ನ ಮುಖ್ಯ ಸಂಪಾದಕರಾದ ರವಿ.ಎಸ್ "ಸತತ ಎರಡನೇ ಬಾರಿಗೆ ನಾವು ಜೀ ಕನ್ನಡ ನ್ಯೂಸ್ ವಾಹಿನಿ ಮೂಲಕ ರಾಜ್ಯದಲ್ಲಿನ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.ಈಗಾಗಲೇ ನಾವು ಉದ್ಯಮ, ಕ್ರೀಡೆ, ಆರೋಗ್ಯ, ಕೃಷಿ, ಸಿನಿಮಾ, ಕಲೆ, ಸಮಾಜ ಸೇವೆ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದೇವೆ.ಮುಂಬರುವ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಅವರಿಗೆ ವೀರ ಕನ್ನಡಿಗ ಪ್ರಶಸ್ತಿ ಮೂಲಕ ಸನ್ಮಾನ ಮಾಡಲಿದ್ದೇವೆ" ಎಂದು ತಿಳಿಸಿದ್ದಾರೆ.