`ಜನಾಶೀರ್ವಾದ` ಕ್ಕೆ ಕರ್ನಾಟಕಕ್ಕೆ ಆಗಮಿಸಿದ ರಾಹುಲ್ ಗಾಂಧಿ
ಹೊಸಪೇಟೆ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ತಂತ್ರವನ್ನೇ ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ಅವರು ಇಂದಿನಿಂದ ರಾಜ್ಯಪ್ರವಾಸ ಕೈಗೊಂಡಿದ್ದಾರೆ.
ಜನಾಶಿರ್ವಾದ ಯಾತ್ರೆಯ ಪ್ರಯುಕ್ತ ಕರ್ನಾಟಕದ ಹೈದರಾಬಾದ್ ಕರ್ನಾಟಕದ ಭಾಗಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ ಇಂದು ದೆಹಲಿಯಿಂದ ಹೊಸಪೇಟೆ ಜಿಂದಾಲ್ ಏರ್ ಫೋರ್ಟ್ ಗೆ ಆಗಮಿಸಿದರು. ಅಲ್ಲಿಂದ ನೇರವಾಗಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದಿನಿಂದ ಫೆ. 13ರವರೆಗೆ ರಾಜ್ಯ ಪ್ರವಾಸ ನಡೆಸಲಿರುವ ರಾಹುಲ್, ಹೊಸಪೇಟೆಯ ಬೃಹತ್ ಸಮಾವೇಶದ ನಂತರ ಕೊಪ್ಪಳದ ಹುಲಿಗೆಮ್ಮ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ನಂತರ ಗವಿಸಿದ್ದೇಶ್ವರ ಮಠಕ್ಕೂ ಭೇಟಿ ನೀಡಿ ಕುಕನೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಫೆ.11 ರಂದು ಕುಷ್ಟಗಿ, ಕನಕಗಿರಿ, ಗಂಗಾವತಿಗೆ ಭೇಟಿ ನೀಡಲಿದ್ದಾರೆ. ಕಾರಟಗಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಹಂಚಿನಾಳ ಕ್ಯಾಂಪ್‌ನಲ್ಲಿ ಜನರ ಜತೆ ಸಂವಾದ ನಡೆಸಲಿದ್ದಾರೆ. ಫೆ.12 ರಂದು ರಾಯಚೂರಿನ ಕಲ್ಮಠಕ್ಕೆ ಭೇಟಿ ನೀಡಲಿದ್ದು, ದೇವದುರ್ಗದಲ್ಲಿ ಪರಿಶಿಷ್ಟ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕಲಬುರಗಿಯ ಜೇವರ್ಗಿಯಲ್ಲಿ ಸಾರ್ವಜನಿಕ ಸಭೆ ನಡೆಸಿ, ನಂತರ ಖಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.
ಫೆ.13 ರಂದು ಖಮರುಲ್ ಇಸ್ಲಾಂ ನಿವಾಸಕ್ಕೆ ಭೇಟಿ ನೀಡಿ, ನಂತರ ಹೆಚ್.ಕೆ. ಸೊಸೈಟಿಯಲ್ಲಿ ಉದ್ಯಮಿಗಳ ಜತೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ಬಸವ ಕಲ್ಯಾಣಕ್ಕೆ ಭೇಟಿ ನೀಡಿ, ಬಸವ ಕಲ್ಯಾಣದಿಂದ ಹೈದರಾಬಾದ್ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ.