ತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ಕೊಡ್ಲಿಲ್ಲ ಅಂದ್ರೆ ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆಶಿ ವ್ಯಂಗ್ಯ

ಬಿಎಸ್​ವೈ ಪ್ರಮಾಣ ವಚನ ಸ್ವೀಕರಿಸುವಾಗ ಮಹೇಶ್​ ಕುಮಟಳ್ಳಿ ಒಬ್ಬ ಬಿಟ್ಟು ಉಳಿದ ತೃಪ್ತ ಶಾಸಕರಿಗೆ ಪ್ರಮಾಣ ವಚನ ನೀಡಲೇಬೇಕು. ಇಲ್ಲಾಂದ್ರೆ ಯಾರೂ ಯಡಿಯೂರಪ್ಪರನ್ನು ಸುಮ್ಮನ್ನೇ ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Updated: Jul 25, 2019 , 03:38 PM IST
ತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ಕೊಡ್ಲಿಲ್ಲ ಅಂದ್ರೆ ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆಶಿ ವ್ಯಂಗ್ಯ

ಬೆಂಗಳೂರು: ಎಲ್ಲಾ ಕೊಟ್ಟ ನಮ್ಮನ್ನೇ ಅತೃಪ್ತ ಶಾಸಕರು ಬಿಟ್ಟಿಲ್ಲ, ಇನ್ನು ಯಡಿಯೂರಪ್ಪ ಅವರನ್ನ ಬಿಡ್ತಾರಾ? ಅವರ ಬಟ್ಟೆ ಹರಿದು ಹಾಕಿಬಿಡ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ. 

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಲ್ಲಿ ಅತೃಪ್ತರು ಯಾರೂ ಇಲ್ಲ, ಎಲ್ಲರೂ ತೃಪ್ತರು, ಸಂತೃಪ್ತರು. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವಾಗ ರೆಬೆಲ್ ಶಾಸಕರಿಗೂ ಮಂತ್ರಿ ಪದವಿ ಕೊಟ್ಟು ಅವರ ಜೊತೆಗೆ ಪ್ರಮಾಣವಚನ ಸ್ವಿಕರಿಸಲು ಅವಕಾಶ ಮಾಡಿಕೊಟ್ಟರೆ ಮಾತ್ರ ಯಡಿಯೂರಪ್ಪ ಗೆದ್ದಂತೆ. ಇಲ್ಲವಾದರೆ ಅವರ ಕಥೆ ಗೋವಿಂದ... ಗೋವಿಂದ... ಅತೃಪ್ತ ಶಾಸಕರು ಅವರ ಬಟ್ಟೆ ಹರಿದು ಹಾಕ್ಬಿಡ್ತಾರೆ ಅಷ್ಟೇ" ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.

ಬಿಎಸ್​ವೈ ಪ್ರಮಾಣ ವಚನ ಸ್ವೀಕರಿಸುವಾಗ ಮಹೇಶ್​ ಕುಮಟಳ್ಳಿ ಒಬ್ಬ ಬಿಟ್ಟು ಉಳಿದ ತೃಪ್ತ ಶಾಸಕರಿಗೆ ಪ್ರಮಾಣ ವಚನ ನೀಡಲೇಬೇಕು. ಇಲ್ಲಾಂದ್ರೆ ಯಾರೂ ಯಡಿಯೂರಪ್ಪರನ್ನು ಸುಮ್ಮನ್ನೇ ಬಿಡುವುದಿಲ್ಲ. ಎಲ್ಲರೂ ಪ್ಯಾಂಟ್​ ಮತ್ತು ಶರ್ಟ್​ ಅನ್ನು ಹರಿದುಬಿಡುತ್ತಾರೆ. ಜೇಬ್​ ಒಬ್ಬ, ಪ್ಯಾಂಟ್​ ಒಬ್ಬ, ಶರ್ಟ್​ ಒಬ್ಬ ಕಿತ್ತುಕೊಂಡು ಕೊನೆಗೆ ಬಿಎಸ್​ವೈ ಸುತ್ತ ಇರುವ ಮುತ್ತು ರತ್ನಗಳನ್ನೆಲ್ಲಾ ಕಿತ್ತುಕೊಳ್ಳುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಈ ತೃಪ್ತ ಶಾಸಕರಲ್ಲಿ ಒಬ್ಬನಿಗೆ ಬೆಂಗಳೂರು ನಗರ ಬೇಕು, ಇನ್ನೊಬ್ಬನಿಗೆ ಪಿಡಬ್ಲುಡಿ ಖಾತೆ ಬೇಕು, ಒಬ್ಬನಿಗೆ ಇಂಧನ ಖಾತೆ ಬೇಕಿದೆ. ಬಿಜೆಪಿಯಲ್ಲಿ ಅಮಿತ್ ಶಾ ಕಂಟ್ರೋಲ್ ನಂಗೆ ಗೊತ್ತಿಲ್ಲ. ಆದರೆ 'ನಮ್ಮ ಅತೃಪ್ತ ಶಾಸಕರ' ಬುದ್ಧಿ ನಂಗೆ ಗೊತ್ತು. ಸಾಕಿರುವ ನಮ್ಮನ್ನೇ ಅವರು ಬಿಟ್ಟಿಲ್ಲ. ಇನ್ನು ಯಡಿಯೂರಪ್ಪರನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದರು.