)
ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಮಂದಿಗೆ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಪ್ರಕರಣದ 7 ಆರೋಪಿಗಳ ಜಾಮೀನು ರದ್ದು ಮಾಡಿ ಆದೇಶ ನೀಡಿದೆ. ಈ ಮೂಲಕ ನಟ ದರ್ಶನ್ ಹಾಗೂ ಪವಿತ್ರ ಗೌಡ ಗ್ಯಾಂಗ್ ಮತ್ತೆ ಜೈಲು ಪಾಲಾಗಲಿದ್ದಾರೆ. ಇದೇ ವೇಳೆ ರೇಣುಕಾ ಸ್ವಾಮಿ ಕುಟುಂಬದವರು ನ್ಯಾಯಕ್ಕೆ ಸಂದ ಜಯ ಎಂದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿಯಮಿತ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ಮೂಲಕ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ದೊಡ್ಡ ಶಾಕ್ ನೀಡಿದೆ. ಡೆವಿಲ್ ಚಿತ್ರದ ಶೂಟಿಂಗ್ ನಲ್ಲಿರುವ ನಟ ದರ್ಶನ್ ಮತ್ತೆ ಜೈಲು ಸೇರಲಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ. ಜೆ. ಬಿ. ಪಾರ್ದಿವಾಲಾ ಹಾಗೂ ಆರ್.ಮಹಾದೇವನ್ ಪೀಠ ತೀರ್ಪು ನೀಡಿದೆ. 7 ಆರೋಪಿಗಳ ಜಾಮೀನು ರದ್ದು ಮಾಡುವ ಜೊತೆಗೆ ಜೈಲಿನಲ್ಲಿ ದರ್ಶನ್ ಗೆ ರಾಜತಿಥ್ಯ ನೀಡಿದ್ದ ಪೊಲೀಸರ ಅಮಾನತಿಗೂ ಆದೇಶ ನೀಡಿದೆ. ಸಮಾಜದಲ್ಲಿ ಎಷ್ಟೇ ದೊಡ್ಡವರಿರಲಿ, ಚಿಕ್ಕವರು ಇರಲಿ ಎಲ್ಲರಿಗೂ ಕಾನೂನು ಒಂದೇ ಎಂದು ಹೇಳುವ ಮೂಲಕ ಮಹತ್ವದ ತೀರ್ಪು ನೀಡಿದೆ.
ಈ ನಡುವೆ ರೇಣುಕಾಸ್ವಾಮಿ ಪತ್ನಿ ಸಹನಾ ಪ್ರತಿಕ್ರಿಯೆ ನೀಡಿದ್ದು, ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಿದೆ. ಕಾನೂನಿನಲ್ಲಿ ಎಲ್ಲರೂ ಸಮಾನರು ಎಂದು ಗೊತ್ತಾಗಿದೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಲಿ. ಕಾನೂನಿನಲ್ಲಿ ಯಾವ ರೀತಿಯಲ್ಲಿ ಶಿಕ್ಷೆ ಆಗಬೇಕು ಆ ರೀತಿಯಲ್ಲಿಯೇ ಶಿಕ್ಷೆ ಕೊಡಲಿ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಮಾತನಾಡಿ, ಈ ದಿನ ದರ್ಶನ್ ಅವರ ಬೇಲ್ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ರದ್ದಾಗಿದೆ. ಅರೆಸ್ಟ್ ಮಾಡಲು ಆದೇಶ ಆಗಿದೆ. ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹೈಕೋರ್ಟ್ ಬೇಲ್ ಕೊಟ್ಟಾಗ ಆತಂಕ ಆಗಿತ್ತು. ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಪೀಲ್ ಮಾಡಿತ್ತು. ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುವುದು ಈ ತೀರ್ಪಿನಿಂದ ಗೊತ್ತಾಗಿದೆ. ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ನಂಬಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ. ಈ ಕೇಸ್ ನಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ. ನೊಂದ ಸೊಸೆ ಸಹನ ಅವರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಚಿತ್ರದುರ್ಗ ಜನರು ಸರ್ಕಾರಿ ನೌಕರಿ ಕೊಡುವುದು ತಪ್ಪು ಮರ್ಡರ್ ಆದ ಗಂಡನ ಪತ್ನಿಯರಿಗೆಲ್ಲಾ ಸರ್ಕಾರಿ ಕೆಲಸ ಕೊಡುವುದು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.