ಇಡಿ‌ ಕಚೇರಿಯಲ್ಲಿ ನಿನ್ನೆ ದಿನವಿಡೀ ಡಿಕೆಶಿಗೆ ವಿಶ್ರಾಂತಿ!

ಡಿ.ಕೆ. ಶಿವಕುಮಾರ್ ಅವರನ್ನು ಕಚೇರಿಗೆ ಕರೆತಂದ ಜಾರಿ‌ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ವಿಚಾರಣೆ ನಡೆಸಲಿಲ್ಲ ಎಂಬುದಾಗಿ ತಿಳಿದುಬಂದಿದೆ. 

Last Updated : Sep 7, 2019, 09:42 AM IST
ಇಡಿ‌ ಕಚೇರಿಯಲ್ಲಿ ನಿನ್ನೆ ದಿನವಿಡೀ ಡಿಕೆಶಿಗೆ ವಿಶ್ರಾಂತಿ! title=
File image(DNA)

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವುದೇ ರೀತಿಯ ವಿಚಾರಣೆ ನಡೆಸಿಲ್ಲ. ಡಿ.ಕೆ. ಶಿವಕುಮಾರ್ ಒಂದು ರೀತಿಯಲ್ಲಿ ದಿನವಿಡೀ ವಿಶ್ರಾಂತಿಯಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಎಂದಿನಂತೆ ಶುಕ್ರವಾರವೂ ಡಿ.ಕೆ. ಶಿವಕುಮಾರ್ ಅವರನ್ನು ತುಘಲಕ್ ರಸ್ತೆಯ ಪೊಲೀಸ್ ಠಾಣೆಯಿಂದ ದೆಹಲಿಯ ಖಾನ್ ಮಾರ್ಕೆಟ್ ಬಗಿಲಿಗಿರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಗೆ ಕರೆತರಲಾಯಿತು. ಕರೆತರುವ ಸಂದರ್ಭದಲ್ಲಿ ಅವರನ್ನು ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯವು ತನ್ನ ಆದೇಶದಲ್ಲಿ  48ಗಂಟೆಗಳಿಗೊಮ್ಮೆ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸೂಚಿಸಿರುವುದರಿಂದ ಶುಕ್ರವಾರ ಬೆಳಿಗ್ಗೆ ಡಿ.ಕೆ. ಶಿವಕುಮಾರ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.

ಡಿ.ಕೆ. ಶಿವಕುಮಾರ್ ಅವರನ್ನು ಕಚೇರಿಗೆ ಕರೆತಂದ ಜಾರಿ‌ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ.  ವಿಚಾರಣೆ ನಡೆಸಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಆದುದರಿಂದ ಇಡೀ ದಿನ ಡಿ.ಕೆ. ಶಿವಕುಮಾರ್ ಸುಮ್ಮನೆ ಕುಳಿತಿದ್ದರು. ಕೆಲಹೊತ್ತು ಮಲಗಿದ್ದರು. ರಾತ್ರಿ ಮತ್ತೆ ಅವರನ್ನು ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯವು ಪ್ರತಿದಿನ ಅರ್ಧಗಂಟೆ ಡಿ.ಕೆ. ಶಿವಕುಮಾರ್, ತಮ್ಮ ಕುಟುಂಬದವರು, ವೈದ್ಯರು ಮತ್ತು ವಕೀಲರೊಂದಿಗೆ ಅರ್ಧ ಗಂಟೆ ಮಾತನಾಡಬಹುದು. ಇಂಥ ಆದೇಶ ಇದ್ದರು ಇತರರಾದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಮಾಜಿ‌ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮತ್ತಿತರರು ಗುರುವಾರ ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಐಸಿಸಿ ಖಜಾಂಚಿ ಮತ್ತು ಕಾಂಗ್ರೆಸ್ ಹೈಕಮಾಂಡಿನ ಪ್ರಭಾವಿ ಮುಖಂಡ ಅಹಮದ್ ಪಟೇಲ್, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೋಲಾರ ಶಾಸಕ ಶ್ರೀನಿವಾಸಗೌಡ, ದಾಸರಹಳ್ಳಿ ಶಾಸಕ ಮಂಜುನಾಥ್, ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ, ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಡಿ.ಕೆ. ಶಿವಕುಮಾರ್ ಭೇಟಿಗಾಗಿ ಜಾರಿ‌ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದರು. ಆದರೆ ಇವರುಗಳು ಡಿಕೆಶಿಯವರ ಕುಟುಂಬದವರು, ವೈದ್ಯರು ಮತ್ತು ವಕೀಲರಲ್ಲ. ಆದುದರಿಂದ ಭೇಟಿಗೆ ಅವಕಾಶ ಕೊಡುವುದಿಲ್ಲ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿರಾಕರಿಸಿದರು.

ಡಿ.ಕೆ. ಶಿವಕುಮಾರ್ ಭೇಟಿಗೆ ಅವಕಾಶ ನಿರಾಕರಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಧೋರಣೆ ಬಗ್ಗೆ ಅಹಮದ್ ಪಟೇಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಕೊಡಲಿಲ್ಲ.‌   ರಮೇಶ್ ಕುಮಾರ್ ಮಾತನಾಡಿ ಗುರುವಾರ ಡಿಕೆಶಿ ಅವರ ರಕ್ತಸಂಬಂಧಿಗಳಲ್ಲದವರಿಗೂ ಭೇಟಿ ಅವಕಾಶ ನೀಡಿದ್ದರಿಂದ ಬಂದಿದ್ದೆವು. ನಾವು ಸುಳ್ಳು ಹೇಳಿ ಭೇಟಿ ಮಾಡುವ ಅಗತ್ಯ ಇಲ್ಲ. ಆದರೂ ಭೇಟಿಗೆ ಅವಕಾಶ ನೀಡುವುದಾಗಿ ಹೇಳಿ ನಮ್ಮ ಮಾಹಿತಿಗಳೆಲ್ಲವನ್ನೂ ತೆಗೆದುಕೊಂಡು ಲಾಗ್ ಬುಕ್ ಗೆ ಸಹಿ‌ ಹಾಕಿಸಿಕೊಂಡರು. ಮೊದಲು​ ಡಿಕೆಶಿ ಭೇಟಿಗೆ ಒಂದೊಂದು ನಿಮಿಷ ಕಾಲಾವಕಾಶ ಕೊಡುತ್ತಾರೆ ಎಂದು ಹೇಳಿದ್ದರು. ಹಾಗಾಗಿ ಅವರಿಗೆ ಸಾಂತ್ವಾನ ಹೇಳಲೆಂದು ಇಡಿ ಕಚೇರಿಗೆ ಬಂದಿದ್ದೆವು. ಮೊದಲು ಇಂತಿಷ್ಟು ಜನರಿಗೆ ಮಾತ್ರ ಅವಕಾಶ ಎಂದು ಅಧಿಕಾರಿಗಳು ಹೇಳಿದ್ದರು. ಅವರು ಹೇಳಿದ್ದಷ್ಟು ಜನರು ಕಚೇರಿ ಒಳಗೆ ಹೋದೆವು. ನಮ್ಮ ವಿವರಗಳನ್ನು ಸಂಗ್ರಹಿಸಿದರು. ಬಳಿಕ ದಿಢೀರನೆ ತಮ್ಮ ಮನಸ್ಸು ಬದಲಿಸಿದ ಅಧಿಕಾರಿಗಳು ಕೇವಲ ಮನೆಯವರಿಗೆ ಮಾತ್ರ ಭೇಟಿಗೆ ಅವಕಾಶ ಕೊಡುವುದಾಗಿ ಹೇಳಿ ನಮ್ಮೆಲ್ಲರಿಗೂ ಅವಕಾಶ ನಿರಾಕರಿಸಿದರು ಎಂದರು.

ಸಹೋದರ ಮತ್ತು ಸಂಸದ ಡಿ.ಕೆ. ಸುರೇಶ್ ಅವರು ಎಂದಿನಂತೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ಅಹಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಕಾಂಗ್ರೆಸ್ ನಾಯಕರ‌ ಭೇಟಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿರಾಕರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಈಗ ಮೌಖಿಕ ವಿಚಾರಣೆ ನಡೆಯುತ್ತಿದೆ. ದಾಖಲೆಗಳು ಬೇಕಾದರೆ ಬೆಂಗಳೂರಿನಿಂದ ತರಿಸಿಕೊಡುತ್ತೇವೆ. ದಾಖಲೆ ಇಲ್ಲದೇ ಉತ್ತರಿಸುವುದು ಕಷ್ಟ ಎಂದು ತಿಳಿಸಿದ್ದೇವೆ. ಇಡಿ ಅಧಿಕಾರಿಗಳು ದಾಖಲೆಗಳನ್ನು ಪಡೆಯುವ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಸದ್ಯ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.
 

Trending News