)
ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಕುಡಿಯುವ ನೀರಿಗೆ ವಿಷ ಹಾಕಿದ ಆರೋಪದ ಮೇಲೆ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಸಾಗರ ಪಾಟೀಲ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ದುರುದ್ದೇಶದಿಂದ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸುವ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕಳೆದ 15 ದಿನಗಳ ಹಿಂದೆ ನಡೆದ ಈ ಘಟನೆಯಿಂದ ಹಲವು ಮಕ್ಕಳು ಅಸ್ವಸ್ಥಗೊಂಡಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯು ಧಾರ್ಮಿಕ ಮೂಲಭೂತವಾದ ಮತ್ತು ಕೋಮುವೈಷಮ್ಯದಿಂದಾಗಿ ಎಂತಹ ಹೀನ ಕೃತ್ಯಗಳು ನಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘಟನೆಯನ್ನು ಖಂಡಿಸಿ, "ದಯೆಯೇ ಧರ್ಮದ ಮೂಲ" ಎಂದು ಸಾರಿದ ಶರಣರ ನಾಡಿನಲ್ಲಿ ಇಂತಹ ದ್ವೇಷಭರಿತ ಕೃತ್ಯಗಳು ನಡೆಯುವುದು ನಂಬಲಾಗದ ಸಂಗತಿಯಾಗಿದೆ ಎಂದಿದ್ದಾರೆ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಬಿಜೆಪಿ ನಾಯಕರು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಬಿಜೆಪಿಯ ವಿಜಯೇಂದ್ರ ಮತ್ತು ಆರ್.ಅಶೋಕ್ ಅವರಂತಹ ನಾಯಕರು ಈ ಘಟನೆಯ ಹೊಣೆಯನ್ನು ಹೊರಬೇಕೇ ಎಂದು ಸಿಎಂ ಪ್ರಶ್ನಿಸಿದ್ದಾರೆ."ಮತೀಯವಾದ ಮತ್ತು ಮೂಲಭೂತವಾದಿತನವು ಮನುಷ್ಯ ಸಮಾಜಕ್ಕೆ ಅಪಾಯಕಾರಿಯಾಗಿದೆ. ದ್ವೇಷ ಭಾಷಣಗಳು ಮತ್ತು ಕೋಮು ಗಲಭೆಗಳನ್ನು ತಡೆಗಟ್ಟಲು ನಾವು ವಿಶೇಷ ಟಾಸ್ಕ್ ಫೋರ್ಸ್ ರಚಿಸಿದ್ದೇವೆ. ಕಾನೂನಿನ ಪರಿಧಿಯಲ್ಲಿ ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ. ಆದರೆ, ಇಂತಹ ಶಕ್ತಿಗಳ ವಿರುದ್ಧ ಸಾರ್ವಜನಿಕರು ಧ್ವನಿಯೆತ್ತಿ, ಪ್ರತಿರೋಧ ಒಡ್ಡಿ, ದೂರು ದಾಖಲಿಸಬೇಕು" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ದುಷ್ಟ ಕೃತ್ಯವನ್ನು ಭೇದಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆರೋಪಿಗಳಿಗೆ ನ್ಯಾಯವ್ಯವಸ್ಥೆಯಿಂದ ತಕ್ಕ ಶಿಕ್ಷೆ ದೊರೆಯಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. "ಕೋಮುವಾದಿಗಳ ಸಂಖ್ಯೆಗಿಂತ ಕೂಡಿ ಬಾಳಲು ಬಯಸುವ ಜನರ ಸಂಖ್ಯೆ ನೂರು ಪಟ್ಟು ಹೆಚ್ಚಿದೆ" ಎಂದು ಸಿಎಂ ಆಶಾವಾದ ವ್ಯಕ್ತಪಡಿಸಿದ್ದಾರೆ.ಪೊಲೀಸರು ಈಗಾಗಲೇ ತನಿಖೆಯನ್ನು ತೀವ್ರಗೊಳಿಸಿದ್ದು, ಘಟನೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ.