)
SL Bhyrappa Passes Away: ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (SL Bhyrappa) ಅವರು ಇಂದು ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಎಸ್.ಎಲ್.ಭೈರಪ್ಪನವರು ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳದಿದ್ದಾರೆ. ಭೈರಪ್ಪನವರು 1934ರ ಜುಲೈ 26ರಂದು ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದರು. ಕನ್ನಡ ಸಾರಸ್ವತ ಲೋಕದ ಧ್ರವ ನಕ್ಷತ್ರ ಎಂದೇ ಖ್ಯಾತಿಯಾಗಿದ್ದ ಭೈರಪ್ಪನವರಿಗೆ 94 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಕಾರಣ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಕಳೆದ ಕೆಲ ದಿನಗಳ ಹಿಂದೆ ದಾಖಲಾಗಿದ್ದ ಪದ್ಮಭೂಷಣ ಪುರಸ್ಕೃತ ಎಸ್.ಎಲ್.ಭೈರಪ್ಪನವರು, 'ಗೃಹಭಂಗ', 'ವಂಶವೃಕ್ಷ', 'ತಬ್ಬಲಿಯು ನೀನಾದೆ ಮಗನೆ' ಸೇರಿದಂತೆ ಅನೇಕ ಪ್ರಸಿದ್ಧ ಕಾದಂಬರಿಗಳನ್ನ ರಚಿಸಿದ್ದರು. ಭೈರಪ್ಪನವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನ ಕಂಡಿವೆ. ಕನ್ನಡದ ಖ್ಯಾತ ಸಾಹಿತಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಕನ್ನಡ ಸಾರಸ್ವತ ಲೋಕದ ಧ್ರವ ನಕ್ಷತ್ರ
* ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ 26-07-1934ರಂದು ಜನಸಿದ ಎಸ್.ಎಲ್.ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯವರ ಧೀಮಂತಿಕೆಯನ್ನು ಮೈಗೂಡಿಸಿಕೊಂಡರು. ಶಾಲಾ ದಾಖಲೆಗಳ ಪ್ರಕಾರ ಅವರ ಜನ್ಮದಿನ 20-08-1931 ಎಂದು ಅವರು ತಮ್ಮ ಆತ್ಮಕಥೆ ʼಭಿತ್ತಿʼಯಲ್ಲಿ ಹೇಳಿಕೊಂಡಿದ್ದಾರೆ.
* ತಮ್ಮ 5ನೇ ವಯಸ್ಸಿನಲ್ಲಿ ಅವರ ತಾಯಿ ಬಡತನ - ಪ್ಲೇಗ್ಗೆ ಜೀವವನ್ನು ತೆತ್ತಾಗ ಬದುಕಿನ ವಿಶ್ವವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳತೊಡಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು. ಮಹಾತ್ಮ ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ 13 ವರ್ಷ ಅಷ್ಟೇ!
* ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು MAನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ" ಎಂಬ ಇಂಗ್ಲಿಷ್ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.
* ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. 1961ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿ ಇದುವರೆವಿಗೆ 4 ದಶಕಗಳಲ್ಲಿ 21ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ.
* ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ವ್ಯಾಪಕ ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದಗೊಂಡಿವೆ. ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.
* ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
* `ಪರ್ವ' ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಈ ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ವಿಶಿಷ್ಟವಾಗಿ ಮೂಡಿಸಿದ್ದಾರೆ.
* ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. 1999ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪನವರು ಆಯ್ಕೆಯಾಗಿದ್ದರು.