ಉತ್ತರ ಕನ್ನಡ ಭೂಕುಸಿತ ಪ್ರದೇಶ ಪರಿಶೀಲಿಸಿದ ಕಂದಾಯ ಸಚಿವ ಕೃಷ್ಣ ಬೈರೈಗೌಡ: ₹800 ಕೋಟಿ ತುರ್ತು ಅನುದಾನ ಘೋಷಣೆ

Krishna Byre Gowda: ಕಂದಾಯ ಸಚಿವ ಕೃಷ್ಣ ಬೈರೈಗೌಡ ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ‌ ಕೈಗೊಂಡಿದ್ದಾರೆ. 

Written by - Deepa A Reddy | Last Updated : Jul 22, 2025, 10:30 PM IST
  • ಕೃಷ್ಣ ಬೈರೈಗೌಡ ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ‌ ಕೈಗೊಂಡಿದ್ದಾರೆ.
  • 800 ಕೋಟಿ ರೂಪಾಯಿ ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.
  • ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ 500 ಕೋಟಿ ಮೀಸಲಿಡಲಾಗುತ್ತಿದೆ ಎಂದರು.
ಉತ್ತರ ಕನ್ನಡ ಭೂಕುಸಿತ ಪ್ರದೇಶ ಪರಿಶೀಲಿಸಿದ ಕಂದಾಯ ಸಚಿವ ಕೃಷ್ಣ ಬೈರೈಗೌಡ: ₹800 ಕೋಟಿ ತುರ್ತು ಅನುದಾನ ಘೋಷಣೆ

Krishna Byre Gowda: ಕಂದಾಯ ಸಚಿವ ಕೃಷ್ಣ ಬೈರೈಗೌಡ ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ‌ ಕೈಗೊಂಡಿದ್ದಾರೆ. ಆರಂಭದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ  ದೇವಿಮನೆ ಘಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕುಮಟಾ ತಾಲ್ಲೂಕು ಕಚೇರಿ ಭೇಟಿ ನೀಡಿದ ಸಚಿವರು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ  ರಾಜ್ಯದಲ್ಲಿ ಭೂಕುಸಿತ, ಕಡಲ ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು 800 ಕೋಟಿ ರೂಪಾಯಿ ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು. ರಾಜ್ಯದ 6 ಜಿಲ್ಲೆಗಳಲ್ಲಿ ಭೂಕುಸಿತ ಸಮಸ್ಯೆ ತೀವ್ರವಾಗಿದ್ದು, ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ  500 ಕೋಟಿ ಮೀಸಲಿಡಲಾಗುತ್ತಿದೆ ಎಂದರು.

Add Zee News as a Preferred Source

ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲು ಕೊರೆತ ಸಮಸ್ಯೆ ತಡೆಗೆ ಪ್ರತಿ ಜಿಲ್ಲೆಗೆ  ನೂರು ಕೋಟಿಯಂತೆ  300 ಕೋಟಿ ಒದಗಿಸಲಾಗುವುದು, ತಡೆಗೋಡೆ ನಿರ್ಮಾಣ ಸೇರಿದಂತೆ ಪ್ರಕೃತಿ ವಿಕೋಪ ತಡೆಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಲು ವಿಳಂಬವಾಗಿದೆ. ಈ ಕುರಿತಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದ ಅನುದಾನ ಬಿಡುಗಡೆ ವಿಳಂಬವಾಗಿರುವುದರಿಂದ ತಡೆಗೋಡೆ  ಹಾಗೂ ಪ್ರಕೃತಿ ವಿಕೋಪದ ಕಾಮಗಾರಿ ನಡೆಸಲು ವಿಳಂಬವಾಗಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿನ 136 ಕ್ಕೂ ಹೆಚ್ಚು ಮಳೆ ಮಾಪನ ಯಂತ್ರಗಳು ಹಾಳಾಗಿದೆ. ರಾಜ್ಯದ ಸುಮಾರು 1,500 ಸ್ಥಳಗಳಲ್ಲಿ ಮಳೆ ಮಾಪನ ಕೇಂದ್ರಗಳು ದುಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿ ಮಾಡಿಸುವ ಕೆಲಸ ನಡೆಯಲಿದೆ. ಯಂತ್ರಗಳು ಸಂಪೂರ್ಣ ಹಾಳಾಗಿದ್ದರೆ ಹೊಸ ಯಂತ್ರಗಳ ಅಳವಡಿಕೆ ನಡೆಯಲಿದೆ ಎಂದರು. ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಜನರಿಗೆ ದಾಖಲೆಗಳು ಸುಲಭವಾಗಿ ಸಿಗುವಂತೆ ಮಾಡಲಾಗುತ್ತಿದೆ. ಮುಂದಿನ 6 ತಿಂಗಳ ಒಳಗೆ  ರಾಜ್ಯದ ಎಲ್ಲ ಕಂದಾಯ ದಾಖಲೆಗಳನ್ನು  ಸಂಪೂರ್ಣ ಗಣಕೀಕರಣ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಗುತ್ತಿದ್ದು ಮೃತರ ಅಧಿಕೃತ ವಾರಿಸುದಾರರಿಗೆ ಪಹಣಿ ದಾಖಲೆಗಳನ್ನು  ವರ್ಗಾವಣೆ 
ಮಾಡಲಾಗುವುದು ಎಂದರು.

ಕಂದಾಯ ಸಚಿವರು  ಶಿರಸಿ ತಾಲ್ಲೂಕಿನ ಬೆಣ್ಣೆಹೊಳೆ ಸೇತುವೆ, ಭೂಕುಸಿತ ಸಂಭವಿಸಿರುವ ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ದೇವಿಮನೆ ಘಟ್ಟದಲ್ಲಿ ತಡೆಗೋಡೆ ನಿರ್ಮಿಸದೆ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಆರ್.ಎನ್.ಎಸ್ ಇನ್‌ಫ್ರಾಸ್ಟ್ರಕ್ಟರ್ ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಂದಾಯ ಸಚಿವರಿಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ,  ದಿನಕರ ಶೆಟ್ಟಿ ಸಾಥ್ ನೀಡಿದರು.‌ ಈ  ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯ ಮತ್ತಿತರರು ಉಪಸ್ಥಿತರಿದ್ದರು.

 

About the Author

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ. 

...Read More

Trending News