)
ಮೈಸೂರು: ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಮೂಮೆಂಟ್ಸ್ ಎಂಬ ಬೆಳ್ಳಿ ಗೋದಾಮಿನಲ್ಲಿ ಮಂಗಳವಾರ ಮುಂಜಾನೆ ದರೋಡೆ ನಡೆದಿದ್ದು, ಖದೀಮರು ಅಂದಾಜು 50 ಕೆ.ಜಿ.ಗಿಂತಲೂ ಹೆಚ್ಚು ಬೆಳ್ಳಿಯನ್ನು ಕಳ್ಳತನ ಮಾಡಿದ್ದಾರೆ.
ಗೋದಾಮಿನಲ್ಲಿ ಒಟ್ಟು 500 ಕೆ.ಜಿ. ಬೆಳ್ಳಿ ಇದ್ದು, ಲಾಕರ್ ಒಡೆಯಲಾಗದೇ ಕಳ್ಳರು ಉಳಿದ ಬೆಳ್ಳಿಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಮುಂಜಾನೆ 3 ಗಂಟೆ ಸುಮಾರಿಗೆ ಕಾರಿನಲ್ಲಿ ಆಗಮಿಸಿದ ಮೂವರು ದರೋಡೆಕೋರರು, ಕಟ್ಟಡದ ಮೇಲ್ಚಾವಣಿಯ ಮೂಲಕ ಗೋದಾಮಿನೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಗನ್ ತೋರಿಸಿ ಬೆದರಿಸಿ, ಅವರ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆಯನ್ನು ತುರಿಕಿ, ಪ್ಲ್ಯಾಸ್ಟರ್ ಹಾಕಿದ್ದಾರೆ. ಅಲ್ಲದೇ, ಭದ್ರತಾ ಸಿಬ್ಬಂದಿಯ ಮೊಬೈಲ್ಗಳನ್ನು ಕಿತ್ತುಕೊಂಡು, ಸಿಸಿಟಿವಿ ಕ್ಯಾಮೆರಾದ ಡಿವಿಆರ್ನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಮುಂಜಾನೆ ರಸ್ತೆಯಲ್ಲಿ ಹಾದುಹೋಗುತ್ತಿದ್ದವರ ಸಹಾಯದಿಂದ ಭದ್ರತಾ ಸಿಬ್ಬಂದಿ ಬಂಧನದಿಂದ ಬಿಡುಗಡೆಯಾಗಿ, ಗೋದಾಮಿನ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.ಗೋದಾಮಿನಲ್ಲಿ ಸುಮಾರು 350 ಕೆ.ಜಿ. ಕಚ್ಚಾ ಬೆಳ್ಳಿಯಿದ್ದು, ಪ್ರಾಥಮಿಕ ಮಾಹಿತಿಯಂತೆ 10 ಕೆ.ಜಿ. ಬೆಳ್ಳಿ ಕಳ್ಳತನವಾಗಿರುವುದು ದೃಢಪಟ್ಟಿದೆ. ಆದರೆ, ಒಟ್ಟು ಕಳ್ಳತನವಾದ ಬೆಳ್ಳಿಯ ಪ್ರಮಾಣವನ್ನು ಖಚಿತಪಡಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಗೋದಾಮು ರಾಕೇಶ್ ಮತ್ತು ಅವರ ತಂದೆಯ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, 30ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಏಳಕ್ಕೂ ಹೆಚ್ಚು ಇತರ ರಾಜ್ಯಗಳ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸುಂದರ್ರಾಜ್ ಮಾತನಾಡಿ, "ಮಧ್ಯರಾತ್ರಿ 1:30ರಿಂದ ಬೆಳಗಿನ 4:30ರವರೆಗೆ ದರೋಡೆಕೋರರು ಗೋದಾಮಿನಲ್ಲಿ ಹುಡುಕಾಟ ನಡೆಸಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರು ಸ್ಥಳೀಯರಾದರೆ, ಇನ್ನೊಬ್ಬರು ಬೇರೆ ರಾಜ್ಯದವರು. ಕಂಪನಿಯಿಂದ ಕೆಲಸ ಬಿಟ್ಟು ಹೋದವರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ತನಿಖೆ ಆರಂಭಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶೀಘ್ರವೇ ದರೋಡೆಕೋರರನ್ನು ಬಂಧಿಸುವ ವಿಶ್ವಾಸವಿದೆ," ಎಂದು ತಿಳಿಸಿದ್ದಾರೆ.ಸ್ಥಳಕ್ಕೆ ಹೆಬ್ಬಾಳ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಕೈಗಾರಿಕಾ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಖದೀಮರನ್ನು ಸದೆಬಡಿಯಲು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ.