ಬೆಂಗಳೂರು: ಕಾಂಗ್ರೆಸ್‌ನೊಳಗೆ ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುವ ಕೂಗೆದ್ದಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು, ವಿವಾದದ ಕಿಡಿ ದೊಡ್ಡದಾಗಿ ಹತ್ತಿಕೊಂಡಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮನವಿಯಲ್ಲಿ ಏನಿದೆ!?
"ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರವನ್ನು ನೀಡುತ್ತದೆ.
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸಲು ಸಂವಿಧಾನವೇ ನಮಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ನೀಡುತ್ತದೆ.
ಆರ್‌ಎಸ್‌ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ದಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ, ಬಾಬಾ ಸಾಹೇಬ್… pic.twitter.com/b1Gn63uoEq
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 12, 2025
ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮ್ತುಯುವ ಸಮುದಾಯದ ಮನಸ್ಸಿನಲ್ಲಿ ಭಾರತ ಐಕ್ಯತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ. ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಗ ಮಕ್ಕಳು ಹಾಗೂ ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ".ಎಂದು ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಬಿಜೆಪಿ ನಾಯಕರು ತೀವ್ರವಾಗಿ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ವಿಜಯೇಂದ್ರ, ಸಂಘದ ಬಗ್ಗೆ ಗೊತ್ತಿಲ್ಲದವರು ಪ್ರಚಾರಕ್ಕೆ ಮಾತ್ರ ಇರೋರು ಇಂಥ ಹೇಳಿಕೆ ಕೊಡ್ತಾರೆ. ಪ್ರಿಯಾಂಕ್ ಖರ್ಗೆ ನಡೆ ಮೂರ್ಖತನದ ಪರಮಾವಧಿ. ಸಂಘದ ಚಟುವಟಿಕೆ ನಿಷೇಧಿಸುವ ಶಕ್ತಿ ಕಾಂಗ್ರೆಸ್ ಗೆ ಇಲ್ಲ. ಚಟಕ್ಕೋಸ್ಕರ, ಚಪಲಕ್ಕೋಸ್ಕರ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪ್ರಿಯಾಂಕ್ ಖರ್ಗೆ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರಬೇಕು. ಗಾಂಧಿ ಕುಟುಂಬವನ್ನು ಓಲೈಸಲು ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪರಿಷತ್ ಸದಸ್ಯ ಸಿ ಟಿ ರವಿ ಮಾತಾಡಿ, ಪ್ರಿಯಾಂಕ್ ಖರ್ಗೆಗೆ ಕಿವಿ ಇದ್ದು ಕೇಳ್ಸಲ್ಲ. ಪಾಕ್ ಪರ ಘೋಷಣೆ ಇವರಿಗೆ ಕೇಳಲ್ಲ. ಪ್ರಿಯಾಂಕ್ ಖರ್ಗೆ ಒತ್ತಾಯ ಸಂವಿಧಾನ ಬಾಹಿರ. ಸಾರ್ವಜನಿಕ ಸ್ಥಳಗಳು ಯಾರಪ್ಪನ ಆಸ್ತಿಯಲ್ಲ. ಆರೆಸೆಸ್ ದೇಶಭಕ್ತಿಯ ಶಿಕ್ಷಣ ಕೊಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಪ್ರಿಯಾಂಕ್ ಖರ್ಗೆ ಸಂಘದ ಶಾಖೆಗೆ ಬಂದು ದೇಶಭಕ್ತಿ ನೋಡಿ ಕಲಿಯಲಿ ಅಂದು ವಾಗ್ದಾಳಿ ನಡೆಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಸೇರಿ ಹಲವೆಡೆ 100 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಸಿದೆ. ಬಿಜೆಪಿ ನಾಯಕರು ಈ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಸರ್ಕಾರಿ ಶಾಲೆಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಮನವಿ ಮಾಡಿರೋದು ಸಂಘರ್ಷಕ್ಕೆ ವೇದಿಕೆ ಒದಗಿಸಿದೆ.
ವರದಿ: ಜನಾರ್ದನ ಹೆಬ್ಬಾರ್ ಜೀ ಕನ್ನಡ ನ್ಯೂಸ್ ಬೆಂಗಳೂರು









