ಡಿ.ಕೆ. ಶಿವಕುಮಾರ್ ಅಸ್ವಸ್ಥ: ವಿಚಾರಣೆ ಬದಲು ವಿಶ್ರಾಂತಿ

ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಗ್ಲೂಕೋಸ್ ಹಾಕಲಾಯಿತು. ಜೊತೆಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಯಿತು.

Yashaswini V Yashaswini V | Updated: Sep 13, 2019 , 08:17 AM IST
ಡಿ.ಕೆ. ಶಿವಕುಮಾರ್ ಅಸ್ವಸ್ಥ: ವಿಚಾರಣೆ ಬದಲು ವಿಶ್ರಾಂತಿ
Photo Credits: ANI

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುರುವಾರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ. ಅವರನ್ನು ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 4ರಂದು ಡಿ.ಕೆ. ಶಿವಕುಮಾರ್ ಅವರನ್ನು  10 ದಿನಗಳ ಕಾಲ ಇಡಿ ವಶಕ್ಕೆ ನೀಡಿತ್ತು. 9ನೇ ದಿನವಾದ ಗುರುವಾರ ಬೆಳಿಗ್ಗೆ ಎಂದಿನಂತೆ ತುಘಲಕ್ ರಸ್ತೆ ಪೊಲೀಸ್ ಠಾಣೆಯಿಂದ ವಿಚಾರಣೆಗಾಗಿ ಖಾನ್ ಮಾರ್ಕೆಟ್ ಬಳಿ ಇರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಗೆ ಕರೆತರಲಾಯಿತು. ಆದರೆ ರಕ್ತದ ಒತ್ತಡ ಹೆಚ್ಚಾದ ಮತ್ತು ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಲ್ಪ ಹೊತ್ತು ಮಾತ್ರ ವಿಚಾರಣೆ ನಡೆಸಿ ನಂತರ ವಿಶ್ರಾಂತಿ ನೀಡಲಾಯಿತು. ಇದರಿಂದಾಗಿ ಡಿ.ಕೆ. ಶಿವಕುಮಾರ್ ಮತ್ತು ಪುತ್ರಿ ಐಶ್ವರ್ಯರನ್ನು ಜೊತೆಯಾಗಿ ವಿಚಾರಣೆ ನಡೆಸಲು ಗುರುವಾರ ಸಾಧ್ಯವಾಗಲಿಲ್ಲ.

ಕುಟುಂಬದ ವೈದ್ಯರು, ಸಂಬಂಧಿ ಮತ್ತು ಕುಣಿಗಲ್ ಶಾಸಕರೂ ಆದ ಡಾ.‌ ಎಚ್.ಡಿ. ರಂಗನಾಥ್ ಅವರು ಜಾರಿ‌ ನಿರ್ದೇಶನಾಲಯದ ಕಚೇರಿಗೆ ಬಂದು ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ತಪಾಸಣೆ ಮಾಡಿದರು. ಇದಾದ ಬಳಿಕ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆ ವೈದ್ಯರು ಕೂಡ ತಪಾಸಣೆ ನಡೆಸಿದರು. ಸಂಜೆವರೆಗೆ ಕಾದರೂ ರಕ್ತದ ಒತ್ತಡ ಸಹಜ ಸ್ಥಿತಿಗೆ ಮರಳದ ಹಿನ್ನೆಲೆಯಲ್ಲಿ ಕಡೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.

ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಗ್ಲೂಕೋಸ್ ಹಾಕಲಾಯಿತು. ಜೊತೆಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಯಿತು. ತಡರಾತ್ರಿ ಅವರನ್ನು ಮತ್ತೆ ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.