ಹುಸಿ ಭರವಸೆ, ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತಾ?

ಮಹಾರಾಷ್ಟ್ರ, ಹರಿಯಾಣದ ಚುನಾವಣಾ ಫಲಿತಾಂಶವನ್ನು ಮರೆತು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ- ರಾಜ್ಯ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ 

Yashaswini V Yashaswini V | Updated: Dec 8, 2019 , 02:22 PM IST
ಹುಸಿ ಭರವಸೆ, ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತಾ?

ಬೆಳಗಾವಿ: ಹುಸಿ ಭರವಸೆ, ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತಾ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹಾಲಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರನ್ನು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಉಪಚುನಾವಣೆ ಫಲಿತಾಂಶದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಮಹಾರಾಷ್ಟ್ರ, ಹರಿಯಾಣದ ಚುನಾವಣಾ ಫಲಿತಾಂಶವನ್ನು ಮರೆತು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀನಿ‌ ಅಂದವರೆಲ್ಲ ಅವರೇ ನಿಧಾನವಾಗಿ ಒಂದೊಂದೆ ರಾಜ್ಯಗಳಲ್ಲಿ ಕಣ್ಮರೆಯಾಗುತ್ತಿದ್ದಾರೆ. ದೇಶದ ಜನಕ್ಕೆ ಯಾರು ತಮ್ಮ ಹಿತ ಕಾಯುವವರು ಎಂದು ಕ್ರಮೇಣ ಅರ್ಥವಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಮಾಧ್ಯಮ ಮಿತ್ರರೊಬ್ಬರು ಸರ್ಕಾರ ಇನ್ನೂ ಚುನಾವಣಾ ಗುಂಗಲ್ಲೇ ಇದೆ. ಆದರೆ ಬೆಳಗಾವಿಯಲ್ಲಿ ಎಷ್ಟೋ ನೆರೆ ಸಂತ್ರಸ್ತರು ಇನ್ನೂ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಯಾರೂ ಏನೂ ಮಾತನಾಡುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪರಿಹಾರದ ಬಗ್ಗೆ ಈವರೆಗೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಸಂತ್ರಸ್ತರಿಗೆ 10-10 ಸಾವಿರ ನೀಡಿ ಕೈ ತೊಳೆದುಕೊಂಡಿದ್ದಾರೆ. ಇನ್ನು ಕೆಲವರಿಗಷ್ಟೇ ಒಂದೊಂದು ಲಕ್ಷ ನೀಡಿದ್ದು, ಇನ್ನೂ ಅನೇಕ ಮಂದಿಗೆ ಅದನ್ನೂ ನೀಡಿಲ್ಲ. ಈ ವರೆಗೂ ಯಾವುದೇ ಪರಿಹಾರ ಬಂದಿಲ್ಲ ಎಂಬ ಬಗ್ಗೆ ಸಾಕಷ್ಟು ಮಂದಿ ದೂರಿದ್ದಾರೆ ಎಂದರು.

ಇದೇ ವೇಳೆ ಹೊಸಕೋಟೆಯನ್ನು ಮಾದರಿ ತಾಲೂಕು ಮಾಡ್ತೀನಿ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಪ್ರವಾಹದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಜನರನ್ನು ಮರೆತುಹೋಗಿದ್ದಾರೆ. ಅವರ ಬದುಕು ಸರಿ ಮಾಡೋದು ಯಾವಾಗ? ಹುಸಿ ಭರವಸೆ, ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತಾ? ಎಂದು ಕಿಡಿಕಾರಿದರು.

ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಸರ್ಕಾರದ ಮೇಲೆ ದಾಳಿ ಮಾಡಿದ ಸಿದ್ದರಾಮಯ್ಯ, ನೆರೆ ಪರಿಹಾರದ ಹಣವೂ ಬರುತ್ತೆ. ಕೇಂದ್ರದಿಂದ ಬರಬೇಕಿದ್ದ ಜಿಎಸ್‌ಟಿ ಸಂಗ್ರಹಣೆಯ ರಾಜ್ಯದ ಪಾಲು ರೂ.5,600 ಕೋಟಿ ಹಣ ಬಂದಿಲ್ಲ, ಯಡಿಯೂರಪ್ಪನವರಿಗೆ ಆರ್ಥಿಕ ನಿರ್ವಹಣೆಯ ಜ್ಞಾನವಿಲ್ಲ. ಕುರ್ಚಿ ಮೇಲೆ ಕೂತು ಅಧಿಕಾರ ಉಳಿಸಿಕೊಳ್ಳಲು ಭಜನೆ ಮಾಡುವ ಬದಲು, ಕೇಂದ್ರದ ಬಳಿ ಗಟ್ಟಿಯಾಗಿ ಮಾತನಾಡಿದರೆ ಸರ್ಕಾರಿ ನೌಕರರಿಗೆ ಸಂಬಳವೂ ಸಿಗುತ್ತೆ ಎಂದು ಹೇಳಿದರು.