ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?

ರಾಜ್ಯದಲ್ಲಿನ ನಮ್ಮ ಪಕ್ಷದ ಸೋಲು ಆಘಾತಕಾರಿಯಾದುದು. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಇಂತಹ ಸೋಲಿನ ಸಣ್ಣ ಸೂಚನೆಯನ್ನೂ ನಾನು ಕಂಡಿರಲಿಲ್ಲ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated : May 24, 2019, 07:11 AM IST
ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು? title=

ಬೆಂಗಳೂರು: ಸೋಲು-ಗೆಲುವುಗಳು ರಾಜಕೀಯ ಜೀವನದ ಅವಿಭಾಜ್ಯ ಅಂಗ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ನಮ್ಮ ಪಕ್ಷದ ಸೋಲು ಅನಿರೀಕ್ಷಿತವಾಗಿದ್ದರೂ ಜನಾಭಿಪ್ರಾಯಕ್ಕೆ ತಲೆ ಬಾಗಬೇಕಾಗುತ್ತದೆ ಎಂದು 2019ರ ಚುನಾವಣಾ ಸೋಲಿನ ಬಳಿಕ ಮಾಜಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿನ ನಮ್ಮ ಪಕ್ಷದ ಸೋಲು ಆಘಾತಕಾರಿಯಾದುದು. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಇಂತಹ ಸೋಲಿನ ಸಣ್ಣ ಸೂಚನೆಯನ್ನೂ ನಾನು ಕಂಡಿರಲಿಲ್ಲ. ಕನಿಷ್ಠ 15 ರಿಂದ 20 ಸ್ಥಾನಗಳನ್ನು ಗೆಲ್ಲುವ ಭರವಸೆ ಇತ್ತು. ಮಲ್ಲಿಕಾರ್ಜುನ ಖರ್ಗೆ ಮತ್ತು ಹೆಚ್.ಡಿ.ದೇವೇಗೌಡರ ಸೋಲನ್ನು ಯಾರೂ ಊಹಿಸಿರಲಿಲ್ಲ. ಇಂತಹ ಸೋಲಿಗೆ ಖಂಡಿತ ಇಬ್ಬರು ನಾಯಕರೂ ಅರ್ಹರಾಗಿರಲಿಲ್ಲ. ಈ ಇಬ್ಬರು ಹಿರಿಯ ನಾಯಕರು ಲೋಕಸಭೆಯಲ್ಲಿ ಇದ್ದಿದ್ದರೆ ಅದರ ಲಾಭ ಕರ್ನಾಟಕಕ್ಕೆ ಸಂದಾಯವಾಗುತ್ತಿತ್ತು. ಎರಡೂ ಕ್ಷೇತ್ರಗಳ ಮತದಾರರು ಇವರನ್ನು ಸೋಲಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಕುವೆಂಪುರವರು ಹೇಳಿರುವಂತೆ ದೇಶವನ್ನು "ಸರ್ವಜನಾಂಗದ ಶಾಂತಿಯ ತೋಟ"ವನ್ನಾಗಿಸಿ:
ಈ ಚುನಾವಣೆಯಲ್ಲಿ ಗೆದ್ದಿರುವ ಭಾರತೀಯ ಜನತಾ ಪಕ್ಷಕ್ಕೆ ಮತ್ತು ಈ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ್ದ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ಐದು ವರ್ಷಗಳ ಕಾಲ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ "ಸರ್ವಜನಾಂಗದ ಶಾಂತಿಯ ತೋಟ"ವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಹಾರೈಸಿದ್ದಾರೆ.

ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ನಮ್ಮ ರಾಜ್ಯದ ಪ್ರತಿನಿಧಿಗಳೇ:
ಚುನಾವಣೆ ಮುಗಿದ ಮೇಲೆ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ. ಎಲ್ಲರೂ ನಮ್ಮವರೇ ಆಗಿರುತ್ತಾರೆ. ಅವರೆಲ್ಲರಿಗೂ ಅಭಿನಂದನೆಗಳು. ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಅವರೆಲ್ಲರೂ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ.

ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂಬ ಏಕೈಕ ಗುರಿ:
ರಾಹುಲ್ ಗಾಂಧಿಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂಬ ಏಕೈಕ ಗುರಿಯನ್ನಿಟ್ಟುಕೊಂಡು ಹಗಲು ರಾತ್ರಿ ಶ್ರಮಿಸಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎನ್ನುವುದು ನಿಜವಾದರೂ ಅವರ ಪ್ರಯತ್ನವನ್ನು ಅಭಿನಂದಿಸಲೇಬೇಕಾಗುತ್ತದೆ ಎಂದು ರಾಹುಲ್ ಗಾಂಧಿಯವರಿಗೆ ಅಭಿನಂದಿಸಿದ್ದಾರೆ.

ರಾಹುಲ್ ಗಾಂಧಿಯವರನ್ನು ಪ್ರಧಾನಿ ಪಟ್ಟದಲ್ಲಿ ಕಾಣಲು ಕೋಟ್ಯಾಂತರ ಜನ ಕಾದಿದ್ದರು:
ರಾಹುಲ್ ಗಾಂಧಿಯವರನ್ನು ಪ್ರಧಾನಿ ಪಟ್ಟದಲ್ಲಿ ಕಾಣಬೇಕೆಂದು ಈ ದೇಶದ ಕೋಟ್ಯಂತರ ಜನ ಕಾದಿದ್ದರು. ಅಂತಹ ಕಾಲ ಕೂಡಿ ಬಂದಿಲ್ಲ. ವಿಳಂಬವಾಗಿಯಾದರೂ ಖಂಡಿತ ಆ ಕಾಲ ಬಂದೇಬರುತ್ತೆ ಎಂಬ ನಂಬಿಕೆ ನನಗಿದೆ ಎಂದು ಸಿದ್ದರಾಮಯ್ಯ ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಲುಗಳಿಂದ ನಿರಾಶರಾಗದೆ ಮತ್ತೊಮ್ಮೆ ಗೆಲುವಿಗಾಗಿ ಹೋರಾಡುವವನು ನಾಯಕ:
ಈ ಚುನಾವಣೆಯಲ್ಲಿ ನಮ್ಮ ನಿಷ್ಠಾವಂತ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಿಸಿದ್ದಾರೆ. ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಸೋಲಿನಿಂದ ಅವರಿಗೆ ಖಂಡಿತ ನಿರಾಶೆಯಾಗಿರುತ್ತದೆ. ಸೋಲುಗಳಿಂದ ನಿರಾಶರಾಗದೆ ಮತ್ತೊಮ್ಮೆ ಗೆಲುವಿಗಾಗಿ ಹೋರಾಡುವವನು ನಾಯಕನಾಗುತ್ತಾನೆ. ಇದನ್ನು ನಮ್ಮ ಕಾರ್ಯಕರ್ತರು
ಅರ್ಥಮಾಡಿಕೊಳ್ಳಬೇಕು. ಕತ್ತಲೆಯ ಸುರಂಗದ ಕೊನೆಯಲ್ಲಿ ಬೆಳಕು ಇರುತ್ತದೆ ಎಂದು ನಂಬಿಕೊಂಡು ಮುಂದೆ ಸಾಗಬೇಕಾಗುತ್ತದೆ ಎಂದು ಸಿದ್ದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

ಮೇಲ್ನೋಟಕ್ಕೆ ಇಡೀ ದೇಶದಲ್ಲಿ ನರೇಂದ್ರಮೋದಿಯವರ ಪರವಾದ ಅಲೆ ಎದ್ದಿರುವಂತೆ ಕಾಣುತ್ತಿದೆ. ಇದಕ್ಕೆ ಏನು ಕಾರಣ ಎಂಬುದನ್ನು ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಕೂತು ಚರ್ಚೆ ಮಾಡುತ್ತೇವೆ.

ನಾವು ಜನರ ನಿತ್ಯ ಜೀವನಕ್ಕೆ ಸಂಬಂಧಿಸಿದ ವಾಸ್ತವದ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿದೆವು. ಬಹಳ ಮುಖ್ಯವಾಗಿ ನನ್ನ ಐದು ವರ್ಷಗಳ ಆಡಳಿತಾವಧಿಯ ನಮ್ಮ ಸಾಧನೆ ಹಾಗೂ ಹಿಂದಿನ ಯುಪಿಎ ಸರ್ಕಾರದ ಹತ್ತು ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸಿಹೇಳಲು ಪ್ರಯತ್ನ ಮಾಡಿದೆವು.

ಬಿಜೆಪಿ ರಾಷ್ಟ್ರೀಯತೆ, ಸೇನೆ, ಯುದ್ದ, ಹಿಂದು-ಮುಸ್ಲಿಮ್ ಮೊದಲಾದ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡಿದರು. ಭಾರತದ ಮತದಾರರು ಭಾವುಕರು, ಈ ಕಾರಣದಿಂದಲೋ ಏನೋ ಅವರು ಭಾವನಾತ್ಮಕ ವಿಚಾರಗಳ ಅಲೆಯಲ್ಲಿ ತೇಲಿಹೋದಂತೆ ಕಾಣಿಸುತ್ತದೆ.

ಸಮಸಮಾಜ ನಿರ್ಮಾಣದ ಕನಸು ಹೊತ್ತು ರಾಜಕೀಯ ಪ್ರವೇಶಿಸಿದವನು ನಾನು:
ಸತ್ಯ ಯಾವಾಗಲೂ ಕಹಿಯಾಗಿರುತ್ತೆ, ಸುಳ್ಳು ಸಿಹಿಯಾಗಿರುತ್ತದೆ. ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲವಾದರೂ ಒಮ್ಮೊಮ್ಮೆ ಜನ ಅದನ್ನೇ ಇಷ್ಟಪಡುತ್ತಾರೆ. ವೈಯಕ್ತಿಕವಾಗಿ ನಾನು ಸೈದ್ಧಾಂ ತಿಕ ರಾಜಕೀಯದಲ್ಲಿ ಆಸಕ್ತಿ ಹೊಂದಿದವನು. ಸಮಸಮಾಜ ನಿರ್ಮಾಣದ ಕನಸು ಹೊತ್ತು ರಾಜಕೀಯ ಪ್ರವೇಶಿಸಿದವನು. ಅಧಿಕಾರದಲ್ಲಿದ್ದಾಗೆಲ್ಲ ಸಾಮಾಜಿಕ ನ್ಯಾಯಕ್ಕಾಗಿ ಪ್ರಯತ್ನ ಪಟ್ಟವನು. ಚುನಾವಣಾ ಸೋಲಿನ ಹೊರತಾಗಿಯೂ ನನ್ನ ಈ ಹೋರಾಟ ಮುಂದುವರಿಯಲಿದೆ. ಗೆಲುವಿನಿಂದ ನಾನೆಂದು ಹಿಗ್ಗಿದವನಲ್ಲ, ಸೋಲಿನಿಂದ ಕುಗ್ಗಿದವನೂ ಅಲ್ಲ. ಇವೆಲ್ಲ ರಾಜಕೀಯದಲ್ಲಿ ಇರುವಂತಹದ್ದೇ ಆಗಿದೆ. ಇದನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಲಿನ ಬಗ್ಗೆ ಖಂಡಿತ ಆತ್ಮಾವಲೋಕನ ನಡೆಯಲೇ ಬೇಕು:
ಸೋಲಿನ ಬಗ್ಗೆ ಖಂಡಿತ ಆತ್ಮಾವಲೋಕನ ನಡೆಯಲೇ ಬೇಕು. ಈ ಸೋಲಿಗೆ ಕಾರಣಗಳನ್ನು ಹುಡುಕಲು ಸಾಧ್ಯವಾದರೆ, ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಇದರ ಬದಲಿಗೆ ಪರಸ್ಪರ ದೋಷಾರೋಪ ಮಾಡುತ್ತಾ ಕಾಲ ಕಳೆಯುವುದು ಸರಿ ಅಲ್ಲ. ಸೋಲಿಗೆ ನಾವೆಲ್ಲ ಜವಾಬ್ದಾರರಾಗಿರುವ ಕಾರಣ ಇದನ್ನು ಜತೆಯಾಗಿಯೇ ಎದುರಿಸಬೇಕಾಗುತ್ತದೆ ಎಂದವರು ಹೇಳಿದರು.

ಮೈತ್ರಿ ಸರ್ಕಾರ ಸುಭದ್ರ: 
ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಬಿಜೆಪಿಯ ನೂರೆಂಟು ವಿಘ್ನಗಳ ಹೊರತಾಗಿಯೂ ಅದು ಸಾಂಗವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಸನ್ಮಾನ್ಯ ಯಡಿಯೂರಪ್ಪನವರೂ ಸೇರಿದಂತೆ ರಾಜ್ಯದ ಅನೇಕ ಬಿಜೆಪಿ ನಾಯಕರು ಈ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದೆ ಎಂದು ನಂಬಿದ್ದೇನೆ ಎಂದರು.
 

Trending News