)
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ದರ್ಶನೋತ್ಸವದ ಏಳನೇ ದಿನವಾದ ಇಂದು ಸಿಎಂ ಸಿದ್ದರಾಮಯ್ಯ ದರ್ಶನ ಪಡೆದಿದ್ದಾರೆ.. ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಹಾಸನಾಂಬೆ ದರ್ಶನ ಪಡೆದ ಸಿದ್ದರಾಮಯ್ಯ ನಾಡಿನ ಒಳಿತಿಗಾಗಿ ಶಕ್ತಿಮಾತೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದಿದ್ದಾರೆ.ಈ ಬಾರಿ ಅಪಾರ ಸಂಖ್ಯೆಯ ಭಕ್ತರು ಹಾಸನಾಂಬೆ ದರ್ಶನ ಪಡೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.ಸಿಎಂ ಮಾತ್ರವಲ್ಲದೇ ಸಿನಿಮಾ ನಟರು, ನಟಿಯರು, ಅನೇಕ ಗಣ್ಯರು ಕೂಡಾ ತಾಯಿ ಹಾಸನಾಂಬೆಯ ದರ್ಶನವನ್ನು ಒಡೆದುಕೊಂಡ್ರು.
ಹೌದು, ನಾಡಿನ ಶಕ್ತಿ ದೇವತೆಗಳ ದೇವಾಲಯಗಳ ಸಾಲಿನಲ್ಲಿರೊ ಹಾಸನಾಂಬೆ ದೇವಿಯ ದರ್ಶನೋತ್ಸವದ ಏಳನೇ ದಿನವಾದ ಇಂದು ನಾಡ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ದರ್ಶನ ಪಡೆದ್ರು. ಮಧ್ಯಾಹ್ನ ೧೨ ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹಾಸನಕ್ಕೆ ಆಗಮಿಸಿದ ಸಿಎಂ ನೇರವಾಗಿ ಪ್ರವಾಸಿ ಮಂದಿರಕ್ಕೆ ತೆರಳಿ ಶಿಷ್ಟಾಚಾರಕ್ಕೆ ಜಿಲ್ಲಾಡಳಿತ ಈ ಬಾರಿ ನಿಗದಿ ಮಾಡಿರೋ ವಾಹನದಲ್ಲಿ ಹಾಸನಾಂಬೆ ದೇವಸ್ಥಾನಕ್ಕೆ ಬಂದ್ರು. ದೇವಾಲಯದ ಆವರಣದಲ್ಲಿ ಸಿಎಂಗೆ ಹಾಸನ ಜಿಲ್ಲಾಡಳಿತ ಅದ್ಧೂರಿ ಸ್ವಾಗತ ಕೋರಿತು. ಕಳೆದ ಬಾರಿಯೂ ಸಿಎಂ ಆಗಿ ಹಾಸನಾಂಬೆ ದರ್ಶನ ಪಡೆದಿದ್ದ ಸಿದ್ದರಾಮಯ್ಯ ಈ ಬಾರಿ ಎರಡನೇ ಬಾರಿಗೆ ದರ್ಶನ ಪಡೆದರು. ಹಾಸನಾಂಬೆ ಗರ್ಭಗುಡಿಯಲ್ಲಿ ವಿಶೇಷ ಅರ್ಚನೆ ಮೂಲಕ ಅರ್ಚಕರು ಪೂಜೆ ಸಲ್ಲಿಸಿದರು.
ಸಿಎಂಗೆ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಂಸದ ಶ್ರೇಯಸ್ ಪಟೇಲ್ ಶಾಸಕ ಶಿವಲಿಂಗೇಗೌಡ ಸಾಥ್ ನೀಡಿದ್ರು. ನಂತರ ಹಾಸನಾಂಬ ದೇವಾಲಯದ ಆವರಣದಲ್ಲೇ ಇರೋ ಸಿದ್ದೇಶ್ವರ ದೇವಾಲಯಕ್ಕೂ ಭೇಟಿ ನೀಡಿದ ಸಿಎಂ ನಾಡಿನಲ್ಲಿ ಮಳೆ ಬೆಳೆ ಚನ್ನಾಗಿ ಆಗಿದೆ. ಆದ್ರೆ ಈ ಬಾರಿ ವಿಕೋಪದಿಂದ ರೈತರ ಬೆಳೆ ಹಾನಿಯಾಗಿದೆ. ಮುಂದೆ ಈ ರೀತಿ ಆಗದೆ ನಾಡಿನ ಜನ ಸುಭೀಕ್ಷವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಇನ್ನು ಈ ಬಾರಿ ಹಾಸನಾಂಬೆ ದರ್ಶನೋತ್ಸವದಲ್ಲಿ ಪ್ರಾರಂಭದ ದಿನದಿಂದಲೂ ಭಕ್ತರ ದಂಡೆರ ಆಗಮಿಸುತ್ತಿದ್ದು ಇಲ್ಲಿವರೆಗೆ 8 ಲಕ್ಷ ಜನ ದರ್ಶನ ಪಡೆದಿದ್ದಾರೆ. ಇಂದು ಕೂಡ ಅನೇಕ ಗಣ್ಯರು ಸಿನಿ ತಾರೆಯರು ಸಾಹಿತಿಗಳು ದರ್ಶನ ಪಡೆದಿದ್ದು ಬುಕರ್ ವಿಜೇತೆ ಬಾನು ಮುಷ್ತಾಕ್ ಹಾಸನಾಂಬೆ ದರ್ಶನ ಪಡೆದಿದ್ದು ವಿಶೇಷವಾಗಿತ್ತು.
ದರ್ಶನ ಪಡೆದು ಮಾತನಾಡಿದ ಬಾನು ಮುಷ್ತಾಕ್ ತಮ್ಮ ಬಾಲ್ಯದ ದಿನಗಳನ್ನ ಮೆಲುಕು ಹಾಕಿದ್ರು. ಹಾಸನಾಂಬೆ ದರ್ಶನ ಪಡೆದು ನಾನು ಚಿಕ್ಕವಳಿದ್ದಾಗ ನನ್ನ ತಾಯಿಯ ಕೈ ಬೆರಳು ಹಿಡಿದು ಇಲ್ಲಿಗೆ ಬರುತ್ತುದ್ದ ದಿನಗಳು ನೆನಪಾಗುತ್ತಿವೆ, ನಾನು ಹಿಂದಿನಿಂದಲೂ ಹಾಸನಾಂಬೆಗೆ ಬರುತ್ತೇನೆ ಇವತ್ತು ನಿಮಗಳ ಕಣ್ಣಿಗೆ ಬಿದ್ದಿದ್ದೇನೆ, ಹಿಂದೆ ಮುಸಲ್ಮಾನ್ ಸಮುದಾಯವೂ ಹಾಸನಾಂಬೆಯನ್ನ ಪೂಜಿಸುತ್ತಿದ್ದರು, ನಮ್ಮ ತಾಯಿ ಕಾಲದಲ್ಲಿ ಈ ದೇವಿಯನ್ನ ಹಸನ್ ಬಿ ಹುಸೇನ್ ಬೀ ಎಂಬ ನಂಬಿಕೆಯಲ್ಲಿ ಪರಿಚಯಿಸ್ತಿದ್ರು, ಆ ಕಾಲದಲ್ಲಿ ಮುಸಲ್ಮಾನ್ ಪೂಜೆಯಂತೆ ಸಕ್ಕರೆ ಊದಿನ ಕಡ್ಡಿ ತಂದು ದೇವಿಗೆ ಪೂಜಿಸುತಿದ್ರು, ಅವತ್ತಿನಲ್ಲಿ ಹೆಚ್ಚಿನ ಮುಸ್ಲಿಂ ಇಲ್ಲಿಗೆ ಬರ್ತಿದ್ರು ಈಗಲೂ ಕೆಲವರು ಬರ್ತಾರೆ. ಹಾಸನಾಂಬೆ ಒಂದು ಉತ್ತಮ ಭಾವೈಕ್ಯತೆಯ ಜಾಗ ಇದು ನಮ್ಮ ಊರ ಹಬ್ಬ ನಾವೆಲ್ಲಾ ಸಂಭ್ರಮದಿಂದ ಈ ದೇವಿ ಜಾತ್ರ ಮಾಡಬೇಕು ಭಾಗಿಯಾಗಬೇಕು ಎಂದು ಖುಷಿ ವ್ಯಕ್ತಪಡಿಸಿದ್ರು. ಇಂದು ಸಿನಿ ತಾರೆಯರಾದ ಜಯಮಾಲಾ, ಶೃತಿ, ಮಾಳವಿಕ, ಶಶಿಕುಮಾರ್ ಹಾಸನಾಂಬೆ ದರ್ಶನ ಪಡೆದುಕೊಂಡ್ರು.
ಒಟ್ಟಾರೆ ಹಾಸನಾಂಬೆ ದರ್ಶನೋತ್ಸವದ ಏಳನೇ ದಿನವಾದ ಇಂದು ನಾಡ ದೊರೆ ಜೊತೆ ಸಾಹಿತಿ, ಸಿನಿ ತಾರೆಯರು ದರ್ಶನ ಪಡೆದಿದ್ದು ಇವತ್ತಿನ ದರ್ಶನ ಮತ್ತಷ್ಟು ಕಳೆಗಟ್ಟುವಂತೆ ಮಾಡಿತ್ತು.