)
Dinesh Gundu Rao: ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ರಚನೆಯ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, "ಇದು ಯಾವುದೇ ರಾಜಕೀಯ ಪ್ರೇರಿತ ಕ್ರಮವಲ್ಲ, ಸತ್ಯಾವಳೋಕನವೇ ಇದಲ್ಲಿನ ಉದ್ದೇಶ," ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರು ಈ ತನಿಖೆಯನ್ನು ರಾಜಕೀಯ ಉದ್ದೇಶಿತವೆಂದು ವಾಖ್ಯಾನಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, “ಈ ರೀತಿಯ ಹೇಳಿಕೆಗಳು ಸರಿಯಲ್ಲ. ಒಂದಿಷ್ಟು ನಿಷ್ಠೆ ಇರಲಿ. ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ನಾಯಕರು ಈ ಬಗ್ಗೆ ಏನಾದರೂ ಮಾತಾಡಲಿ, ಸಾರ್ವಜನಿಕ ಒತ್ತಡದಿಂದ ಈ ತನಿಖೆ ಆರಂಭವಾಗಿದೆ. ಹಲವಾರು ಸಂಘ ಸಂಸ್ಥೆಗಳ ಮುಖಂಡರು ಸಹ ಈ ಕುರಿತು ಒತ್ತಡ ಹೇರಿದ್ದರು,” ಎಂದು ಹೇಳಿದರು.
ಅವರು ಮುಂದುವರಿದು, “ಇದರಲ್ಲಿ ಹಲವು ಗೊಂದಲಗಳು, ಸಂಶಯಗಳು ಹಾಗೂ ಆರೋಪಗಳಿವೆ. ಈ ಪ್ರಕರಣಗಳಲ್ಲಿ ಸತ್ತ ಹೆಣಗಳನ್ನು ಮುಚ್ಚಿಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ. ಇದು ಎಷ್ಟು ಮಟ್ಟಿಗೆ ನಿಜ ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ. ಅಷ್ಟು ಬೇರ್ತಿಯ ವಿಚಾರವಾಗಿ ಜನರಲ್ಲಿ ಚರ್ಚೆ ನಡೆಯುತ್ತಿದೆ,” ಎಂದು ವಿಸ್ತೃತವಾಗಿ ವಿವರಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಪ್ರತಿಯೊಂದರಲ್ಲಿ ರಾಜಕೀಯ ಹುಡುಕುವುದು ಸರಿಯಲ್ಲ. ಅವರ ಹೇಳಿಕೆಗಳು ತಿಳುವಳಿಕೆಯ ಕೊರತೆ ಹೊಂದಿವೆ," ಎಂದು ಟೀಕಿಸಿದರು.
ಜಿಎಸ್ ಟಿ ವಿಷಯಕ್ಕೂ ಪ್ರತಿಕ್ರಿಯೆ ನೀಡಿದ ಗುಂಡೂರಾವ್, "ಬಿಜೆಪಿಗೆ ಈ ಬಗ್ಗೆ ಸಮಗ್ರ ತಿಳುವಳಿಕೆ ಇಲ್ಲ. ಜಿಎಸ್ ಟಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡುವಂತಿಲ್ಲ. ಬಿಜೆಪಿ ನಾಯಕರೇ ಕೇಂದ್ರದಿಂದ ನೇಮಕಗೊಂಡಿದ್ದಾರೆ ಎಂಬಂಥ ನಿಲುವು ಅರ್ಥವಾಗುತ್ತಿಲ್ಲ. ಅಗತ್ಯವಿದ್ದರೆ ಇನ್ಕಮ್ ಟ್ಯಾಕ್ಸ್ ಕುರಿತು ಸಹಾಯವಾಣಿ ಆರಂಭಿಸಿ, ನಮಗೆ ಸಹಕಾರ ನೀಡಲಿ. ನಾವು ‘ಸಹಾಯ ಬೇಡ’ ಅಂತ ಹೇಳಿಲ್ಲ," ಎಂದು ವಿವರಿಸಿದರು.
ಮುಡಾ ಹಗರಣ ಪ್ರಕರಣ ಹಾಗೂ ಇಡಿಯ ಕುರಿತಂತೆ ಮಾತನಾಡಿದ ಅವರು, “ಇಡಿಯಿಂದ ಸಿಎಂಗೆ ಕ್ಲೀನ್ ಚೀಟ್ ನೀಡಿರುವ ವಿಚಾರ ಬಹಳ ಗಂಭೀರ. ಇಡಿ ಸ್ಪಷ್ಟವಾಗಿ ಪ್ರಶ್ನಿಸಿದೆ—ಯಾಕೆ ಇಡಿ ಅಥವಾ ಸಿಬಿಐ ಸರಕಾರದ ವಿಷಯಗಳಲ್ಲಿ ತಲೆ ಹಾಕುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಇಡಿಯನ್ನು ದುರುಪಯೋಗ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ," ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಗ್ಗೆ ಟೀಕಿಸಿದ ಅವರು, "ಪ್ರಹ್ಲಾದ್ ಜೋಶಿ ಪದೇ ಪದೇ ರಾಜಕೀಯ ಹೇಳಿಕೆ ನೀಡುತ್ತಿದ್ದು, ಅವರಿಗೆ ನೈತಿಕತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಐಟಿ, ಇಡಿ, ಸಿಬಿಐ ಎಲ್ಲವನ್ನೂ ತಮ್ಮ ಪಕ್ಷದ ಹಕ್ಕುಸ್ವಾಮ್ಯಕ್ಕೆ ತೆಗೆದುಕೊಂಡಿರುವ ರೀತಿಯು ಸಾರ್ವಜನಿಕ ನಿರೀಕ್ಷೆಗೆ ವಿರುದ್ಧವಾಗಿದೆ," ಎಂದು ಆರೋಪಿಸಿದರು.
ಅಲ್ಲದೇ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡಿದ ಅವರು, "ಪ್ರಧಾನಿ ಅಭ್ಯರ್ಥಿಗೆ ಖರ್ಗೆ ಅವರು ಸಂಪೂರ್ಣ ಅರ್ಹ ನಾಯಕ. ತಮ್ಮ ಅನುಭವ, ಶ್ರೇಷ್ಟ ರಾಜಕೀಯ ದಾರಿ ಅವರನ್ನು ಈ ಸ್ಥಾನಕ್ಕೆ ತಕ್ಕವರೆನ್ನಿಸುತ್ತದೆ," ಎಂದರು.
ಆಹಾರದಲ್ಲಿ ಬಣ್ಣ ಬಳಕೆ ಬಗ್ಗೆ ಮಾತನಾಡಿದ ಅವರು, “ಗೋಬಿ ಮಂಚೂರಿ ಸೇರಿದಂತೆ ಹಲವಾರು ಖಾದ್ಯಗಳಲ್ಲಿ ಬಣ್ಣ ಬೆರೆಸುವಿಕೆ ಮುಂದುವರಿದಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಕಾನೂನು ಜಾರಿಗೆ ಬಂದಿದೆ. ಸಾರ್ವಜನಿಕರ ಸಹಭಾಗಿತ್ವವೂ ಇಲ್ಲಿ ಅತ್ಯಂತ ಅಗತ್ಯ,” ಎಂದರು.
ಈ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರು, ವಿವಿಧ ಜಿಲ್ಲೆಗಳ ಪಕ್ಷದ ಮುಖಂಡರು ಹಾಗೂ ಸಂಘಟನೆಗಳ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.