)
ದಕ್ಷಿಣ ಕನ್ನಡ : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇದೀಗ ಮತ್ತೊಂದು ಪ್ರಮುಖ ನಿರ್ಧಾರಕ್ಕೆ ಕೈ ಹಾಕಿದೆ. ಧರ್ಮಸ್ಥಳದ ಬಂಗ್ಲೆಗುಡ್ಡ ರಹಸ್ಯ ಬಯಲು ಮಾಡಲು ಎಸ್ಐಟಿ ಅಧಿಕಾರಿಗಳು ಪಣತೊಟ್ಟಿದ್ದು, ಗೋಪ್ಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನಿನ್ನೆ ಸಂಜೆ ವೇಳೆ ಮತ್ತೆ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ರು. ಎಸ್ಐಟಿ ಅಧಿಕಾರಿ ಸೈಮನ್ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಸೌಜನ್ಯ ಮಾವ ವಿಠಲ ಗೌಡ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲು ಈ ಕ್ರಮ ಕೈಗೊಳ್ಳಲಾಗಿದೆ. ಇದೇ ಬೆನ್ನಲ್ಲೇ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ಮೃತ ಸೌಜನ್ಯ ಮಾವ ವಿಠಲ ಗೌಡ, ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಮೂರು ಮನುಷ್ಯರ ಅಸ್ಥಿಪಂಜರಗಳು ಸಿಕ್ಕಿವೆ.
ಹತ್ತಿರ ಹತ್ತಿರ ಹತ್ತು ಅಡಿಗಳ ಜಾಗದಲ್ಲಿ ಅವು ಸಿಕ್ಕಿವೆ. ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು. ಸಣ್ಣ ಮಗುವಿನ ಎಲುಬು ಇರುವುದು ಗೋಚರ ಆಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆ ಧರ್ಮಸ್ಥಳದಲ್ಲಿ ಸಂಭವಿಸಿದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಎಸ್ಐಟಿ ಪೊಲೀಸ್ ಠಾಣೆಗೆ ಮಹೇಶ್ ಶೆಟ್ಟಿ ತಿಮರೋಡಿ ಹೊಸದಾಗಿ ದೂರು ನೀಡಿದ್ದಾರೆ. ಅಸಹಜ ಸಾವನ್ನು ಕೊಲೆ ಪ್ರಕರಣಗಳಾಗಿ ಎಫ್ಐಆರ್ ದಾಖಲಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. 2006ರಿಂದ 2010 ರವರೆಗೆ ಧರ್ಮಸ್ಥಳದ ವಸತಿ ಗೃಹಗಳಲ್ಲಿ ಅನೇಕ ಸಂಶಯಾಸ್ಪದ ಸಾವುಗಳು ಸಂಭವಿಸಿವೆ.
ಧರ್ಮಸ್ಥಳದ ಗಾಯತ್ರಿ, ಶರಾವತಿ, ವೈಶಾಲಿ ವಸತಿಗೃಹದಲ್ಲಿ ಈ ಸಾವುಗಳು ಸಂಭವಿಸಿವೆ. ಆದರೆ, ಅಪರಿಚಿತ ಶವಗಳನ್ನು ಬೇಕೆಂದೇ ಅನಾಥ ಶವಗಳೆಂದು ಘೋಷಿಸಲಾಗಿದೆ. ತಕ್ಷಣವೇ ಗ್ರಾಮ ಪಂಚಾಯತ್ ಮುಖಾಂತರ ಸಮಾಧಿ ಮಾಡಲಾಗಿದೆ. ಇವುಗಳು ಎಲ್ಲಾ ದೃಷ್ಟಿಯಿಂದ ಸಂಭಾವ್ಯ ಕೊಲೆ ಪ್ರಕರಣಗಳೆಂದು ಶಂಕೆ ಮೂಡುತ್ತದೆ ಎಂದು ತಿಮರೋಡಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆದಕಿದಷ್ಟು ಹೊಸ ಹೊಸ ಆಯಮಾ ಸಿಕ್ತಿದೆ. ಹೀಗಾಗಿ ಎಸ್ ಐಟಿ ತನಿಖೆಯಲ್ಲಿ ಮತ್ತಷ್ಟು ತಿರುವು ಸಿಕ್ತಾ ಇರೋದು ರೋಚಕತೆ ಮೂಡಿಸಿದೆ.