ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸುವ, ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ದಿನವಾಗಿದೆ. ಆದರೆ, ಈ ದಿನ ಇಂದಿಗೂ ಜಗತ್ತಿನಾದ್ಯಂತ ಮಹಿಳೆಯರು ಎದುರಿಸುತ್ತಿರುವ ಅನ್ಯಾಯ ಮತ್ತು ಸವಾಲುಗಳನ್ನು ನೆನಪು ಮಾಡುವ ದಿನವಾಗಿಯೂ ಪ್ರಚಲಿತದಲ್ಲಿದೆ. ಕರ್ನಾಟಕದ ಸೌಜನ್ಯ ಎಂಬ ಬಾಲಕಿಯೊಬ್ಬಳನ್ನು 2012ರಲ್ಲಿ ಭೀಕರವಾಗಿ ಅತ್ಯಾಚಾರ ನಡೆಸಿ, ಹತ್ಯೆಗೈದ ಪ್ರಕರಣ ಮಹಿಳೆಯರನ್ನು ರಕ್ಷಿಸಿ, ಅವರಿಗೆ ನ್ಯಾಯ ಒದಗಿಸಬೇಕಾದ ವ್ಯವಸ್ಥೆಯಲ್ಲೇ ಇರುವ ಲೋಪದೋಷಗಳನ್ನು ಜಗಜ್ಜಾಹೀರು ಮಾಡಿದೆ.
ಆ ದುರಂತಮಯ ಘಟನೆ ನಡೆದು ಈಗಾಗಲೇ ಒಂದು ದಶಕಕ್ಕೂ ಹೆಚ್ಚು ಸಮಯವಾಗಿದ್ದರೂ, ಆಕೆಯ ಹತ್ಯೆ ನಡೆಸಿದ ನೈಜ ಅಪರಾಧಿಗಳು ಶಿಕ್ಷೆಗೊಳಗಾಗದೆ ಸ್ವತಂತ್ರವಾಗಿರುವುದು ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಂಗದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸೌಜನ್ಯಾಳ ಪ್ರಕರಣ ಕೇವಲ ಆಕೆ ಒಬ್ಬಳಿಗೆ ನ್ಯಾಯ ನಿರೀಕ್ಷಿಸುವ ಪ್ರಕರಣವಲ್ಲ. ಬದಲಿಗೆ, ಮಹಿಳೆಯರು ಸ್ವತಂತ್ರವಾಗಿ, ಭಯಮುಕ್ತವಾಗಿ ಜೀವಿಸುವ ಮತ್ತು ಮಹಿಳೆಯರಿಗೆ ಅಪಾಯ ಉಂಟುಮಾಡುವ ಅಪರಾಧಿಗಳಿಗೆ ಪರಿಣಾಮಕಾರಿ ಶಿಕ್ಷೆ ವಿಧಿಸುವಂತಹ ಸಮಾಜವನ್ನು ನಿರ್ಮಿಸುವ ಅಗತ್ಯವನ್ನು ತೋರುವ ಪ್ರಕರಣವಾಗಿದೆ.
ಒಂದು ರೀತಿಯಲ್ಲಿ, ಆಗಸ್ಟ್ 9, 2024ರಂದು ಇಡೀ ದೇಶದ ಜನರ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿದ್ದ ಕೋಲ್ಕತ್ತಾ ನಗರದ ಆರ್ ಜಿ ಕಾರ್ ವೈಧ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 31 ವರ್ಷ ವಯಸ್ಸಿನ ಯುವ ವೈದ್ಯ ವಿದ್ಯಾರ್ಥಿನಿಯ ಹತ್ಯೆಯೂ ಧರ್ಮಸ್ಥಳದ ಪ್ರಕರಣವನ್ನು ಹೋಲುತ್ತಿತ್ತು. ಕೋಲ್ಕತಾ ಪ್ರಕರಣದಲ್ಲಿ ಓರ್ವ ನಾಗರಿಕ ಪೊಲೀಸ್ ಸ್ವಯಂಸೇವಕನನ್ನು ಬಂಧಿಸಿದ್ದರೂ, ಅಪಾರ ಸಂಖ್ಯೆಯ ನಾಗರಿಕರು ಮಾತ್ರ ನಿಜವಾದ ಅಪರಾಧಿಗಳು ಮತ್ತು ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಸುರಕ್ಷಿತವಾಗಿದ್ದಾರೆ ಎಂದೇ ಭಾವಿಸಿದ್ದಾರೆ.
ಹಾದಿ ತಪ್ಪಿಸಿದ ತನಿಖಾ ವೈಫಲ್ಯ
ಅಕ್ಟೋಬರ್ 9, 2012ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ 17 ವರ್ಷದ ಸೌಜನ್ಯ ಕಾಲೇಜಿನಿಂದ ಮನೆಗೆ ತೆರಳುವಾಗ ನಾಪತ್ತೆಯಾದಳು. ಮರುದಿನ ನೇತ್ರಾವತಿ ನದಿಯ ಬಳಿ ಶವವಾಗಿ ಪತ್ತೆಯಾದ ಆಕೆಯ ದೇಹದಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಕುರುಹುಗಳಿದ್ದವು. ಈ ಅಪರಾಧದ ಕ್ರೌರ್ಯದ ಪ್ರಮಾಣ ಇಡೀ ಕರ್ನಾಟಕವನ್ನೇ ತಲ್ಲಣಗೊಳಿಸಿತ್ತು. ಸೌಜನ್ಯಾಳ ಸಾವಿಗೆ ನ್ಯಾಯವನ್ನು ಆಗ್ರಹಿಸುತ್ತಾ ಅಪಾರ ಪ್ರತಿಭಟನೆಗಳು ನಡೆದವು.
ಆದರೆ, ತನಿಖೆಯ ಆರಂಭದ ಹಂತದಿಂದಲೂ ಈ ಪ್ರಕರಣ ಹಲವಾರು ಅಸಂಗತತೆಗಳು, ಮುಚ್ಚಿಡುವ ಪ್ರಯತ್ನಗಳು, ಮತ್ತು ತನಿಖಾ ವೈಫಲ್ಯಗಳಿಗೆ ಸಾಕ್ಷಿಯಾಯಿತು. ಒಂದು ಸಮಗ್ರವಾದ, ಪಾರದರ್ಶಕವಾದ ತನಿಖೆ, ವಿಚಾರಣೆ ನಡೆಸುವ ಬದಲು, ಕರ್ನಾಟಕ ಪೊಲೀಸ್ ಇಲಾಖೆ ಬಹಳ ಕ್ಷಿಪ್ರವಾಗಿ ಸಂತೋಷ್ ರಾವ್ ಎಂಬ ಕಾರ್ಮಿಕನೊಬ್ಬನನ್ನು ಬಂಧಿಸಿ, ಆತನೇ ಮುಖ್ಯ ಶಂಕಿತ ಎಂದಿತು. ಮೃತ ಸೌಜನ್ಯಾಳ ಕುಟುಂಬಸ್ಥರೂ ಸೇರಿದಂತೆ, ಸಾಕಷ್ಟು ಜನರು ಸಂತೋಷ್ ರಾವ್ ಈ ಪ್ರಕರಣದಲ್ಲಿ ಒಬ್ಬ ಹರಕೆಯ ಕುರಿಯಾಗಿದ್ದು, ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಹೆಚ್ಚುತ್ತಿದ್ದ ಸಾರ್ವಜನಿಕ ಒತ್ತಡ ಮತ್ತು ಪ್ರತಿಭಟನೆಗಳ ಪರಿಣಾಮವಾಗಿ, ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಯಿತು. ಆದರೆ, ವಿಚಾರಣೆ ಮಾತ್ರ ಅಸಮರ್ಥವಾಗಿಯೇ ಸಾಗಿತ್ತು. ಬಳಿಕ, ನವೆಂಬರ್ 2013ರಲ್ಲಿ ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತು. ಆ ಬಳಿಕ, ನ್ಯಾಯಯುತವಾದ, ಪಕ್ಷಪಾತ ರಹಿತ ವಿಚಾರಣೆ ನಡೆಯುವ ಆಶಾ ಭಾವನೆ ಮೂಡಿತು. ಆದರೆ, ಕ್ರಮೇಣ ಅದೂ ನಿರಾಸೆಯನ್ನೇ ನೀಡಿತ್ತು.
ಸೌಜನ್ಯಾಳನ್ನು ಸೋಲಿಸಿದ ವ್ಯವಸ್ಥೆ
ಸಾಕಷ್ಟು ಉತ್ತಮ ವಿಚಾರಣಾ ಸಂಪನ್ಮೂಲಗಳನ್ನು ಹೊಂದಿದ್ದರೂ, ಸಿಬಿಐ ನ್ಯಾಯ ಒದಗಿಸಲು ಸಫಲವಾಗಲಿಲ್ಲ. ಸಿಬಿಐ ತನಿಖೆಯೂ ಯಾವುದೇ ಗಮನಾರ್ಹ ಪ್ರಗತಿ ಕಾಣದೆ, ಪ್ರಕರಣವನ್ನು ವರ್ಷಾನುಗಟ್ಟಲೆ ಎಳೆದಾಡುವಂತಾಯಿತು. ಜೂನ್ 2023ರಲ್ಲಿ, ಸಿಬಿಐ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಸಂತೋಷ್ ರಾವ್‌ನನ್ನು ಖುಲಾಸೆಗೊಳಿಸಿತು. ಈ ತೀರ್ಪು ನೈಜ ಅಪರಾಧಿಗಳನ್ನು ಉದ್ದೇಶಪೂರ್ವಕವಾಗಿ ರಕ್ಷಿಸಲಾಗುತ್ತಿದೆ ಮತ್ತು ತನಿಖೆಯನ್ನು ಬೇಕೆಂದೇ ಹಾದಿ ತಪ್ಪಿಸಲಾಗಿದೆ ಎಂಬ ಭಾವನೆ ಮೂಡುವಂತೆ ಮಾಡಿತು.
ಇಂತಹ ಸರಣಿ ವೈಫಲ್ಯಗಳು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳತ್ತ, ಅದರಲ್ಲೂ ಮಹಿಳೆಯರ ಕುರಿತ ಅಪರಾಧಗಳಲ್ಲಿ ಇರುವ ದೋಷಗಳತ್ತ ಬೆಳಕು ಚೆಲ್ಲಿದೆ. ಇದರಲ್ಲಿರುವ ಪ್ರಮುಖ ಅಂಶಗಳು:
ದೋಷಪೂರಿತ ತನಿಖೆಗಳು: ಸಾಕ್ಷ್ಯಾಧಾರಗಳನ್ನು ಸಾಮಾನ್ಯವಾಗಿ ತಪ್ಪಾಗಿ ನಿರ್ವಹಿಸಲಾಗಿದೆ, ಅಥವಾ ನಾಶಪಡಿಸಲಾಗಿದೆ. ಅಥವಾ ಬೇಕೆಂದೇ ಅವುಗಳನ್ನು ಹಾಳುಗೆಡವಿದ್ದು, ನೈಜ ಅಪರಾಧಿಗಳನ್ನು ಗುರುತಿಸುವುದು ಕಷ್ಟಕರವಾಗಿದೆ.
ನ್ಯಾಯದಾನದಲ್ಲಿ ವಿಳಂಬ: ಕಾನೂನು ಪ್ರಕ್ರಿಯೆಗಳು ಬಹಳಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಇದರ ಪರಿಣಾಮವಾಗಿ, ದೌರ್ಜನ್ಯಕ್ಕೊಳಗಾದವರ ಕುಟುಂಬಸ್ಥರು ಕೊನೆಯಿಲ್ಲದ ಆಘಾತವನ್ನು ಮತ್ತೆ ಮತ್ತೆ ಎದುರಿಸುತ್ತಾರೆ.
ರಾಜಕೀಯ ಮತ್ತು ಸಾಂಸ್ಥಿಕ ಮಧ್ಯಪ್ರವೇಶ: ಪ್ರಭಾವಿ ವ್ಯಕ್ತಿಗಳು ತನಿಖೆಯ ಮೇಲೆ ಪ್ರಭಾವ ಬೀರಿ, ವಾಸ್ತವ ಸತ್ಯ ಹೊರಬೀಳದಂತೆ ತಡೆಯಲು ಪ್ರಯತ್ನಿಸುತ್ತಾರೆ.
ಸೌಜನ್ಯ ಪ್ರಕರಣ ದೇಶದಲ್ಲಿ ನಡೆದಿರುವ ಇಂತಹ ಏಕೈಕ ಪ್ರಕರಣವಲ್ಲ. ಬದಲಿಗೆ, ಇದು ದುರ್ಬಲ ಕಾನೂನು ವ್ಯವಸ್ಥೆ, ಅಸಮರ್ಥ ಕಾನೂನು ಜಾರಿ, ಮತ್ತು ಮಹಿಳೆಯರ ಕುರಿತ ಅಪರಾಧಗಳತ್ತ ಸಮಾಜ ಮೌನವಾಗಿರುವ ಇಂತಹ ಸಾವಿರಾರು ಪ್ರಕರಣಗಳ ಪ್ರತಿನಿಧಿಯಾಗಿದೆ.
ಎಲ್ಲ ಮಹಿಳೆಯರಿಗೂ ಮುಖ್ಯವಾಗಿದೆ ಸೌಜನ್ಯ ಪ್ರಕರಣ
ಸೌಜನ್ಯಾಳ ಸಾವಿಗೆ ನ್ಯಾಯ ಒದಗಿಸಲು ವಿಫಲವಾಗಿರುವುದು ಒಂದು ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ. ಅದೇನೆಂದರೆ, ಇಂದಿಗೂ ಮಹಿಳೆಯರ ಮೇಲಿನ ಅಪರಾಧಗಳು ಬಹಳಷ್ಟು ಬಾರಿ ಶಿಕ್ಷೆಗೊಳಗಾಗದೆ ಇರಬಹುದು ಎಂದು ಇದು ಸೂಚಿಸುತ್ತದೆ. ಇದು ಮಹಿಳೆಯರು ಒಬ್ಬಂಟಿಯಾಗಿ ಮನೆಯಿಂದ ಹೊರ ಹೋಗುವಾಗ ಕಾಡುವ ಭೀತಿಯನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಈ ಕಾರಣದಿಂದಲೇ, ಸೌಜನ್ಯಾ ಪ್ರಕರಣ ಕೇವಲ ಒಬ್ಬ ಹುಡುಗಿಯ ಪ್ರಕರಣವಲ್ಲ. ಬದಲಿಗೆ, ಇಂತಹ ಪರಿಸ್ಥಿತಿ ಇನ್ನಾವ ಹೆಣ್ಣಮಗುವಿಗೂ ಬರಬಾರದು ಎಂದು ಖಾತ್ರಿಪಡಿಸಬೇಕಾದ ಪ್ರಕರಣ ಇದಾಗಿದೆ.
ಪ್ರತಿದಿನವೂ ಅಸಂಖ್ಯಾತ ಮಹಿಳೆಯರು ಮತ್ತು ಬಾಲಕಿಯರು ಶೋಷಣೆ, ದಾಳಿ, ಅಷ್ಟೇ ಯಾಕೆ, ಕೊಲೆಗೂ ತುತ್ತಾಗುತ್ತಾರೆ. ಇದರ ಕುರಿತ ಅಂಕಿಅಂಶಗಳು ಭೀತಿ ಮೂಡಿಸುವಂತಿವೆ:
* ಭಾರತದಲ್ಲಿ ಪ್ರತಿವರ್ಷವೂ 30,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ಆದರೆ, ಅವುಗಳಲ್ಲಿ ಅಪರಾಧಿಗೆ ಶಿಕ್ಷೆಯಾಗುವ ಪ್ರಕರಣಗಳು ಬಹಳಷ್ಟು ಕಡಿಮೆ.
* 90%ಕ್ಕೂ ಹೆಚ್ಚು ಅತ್ಯಾಚಾರಿಗಳು ಅತ್ಯಾಚಾರಕ್ಕೊಳಗಾದವರಿಗೆ ಪರಿಚಿತರೇ ಆಗಿರುತ್ತಾರೆ. ಆದರೂ ಕಾನೂನು ಪ್ರಕ್ರಿಯೆಗಳು ನ್ಯಾಯ ಒದಗಿಸುವುದು ಬಹಳ ಅಪರೂಪವಾಗಿದೆ.
* ಶೋಷಿತರನ್ನೇ ದೂಷಿಸುವ ಮತ್ತು ಸಾಮಾಜಿಕ ಕಳಂಕದ ಭೀತಿ ಬಹಳಷ್ಟು ಶೋಷಣೆಗೊಳಗಾದ ಮಹಿಳೆಯರು ನ್ಯಾಯಕ್ಕಾಗಿ ಆಗ್ರಹಿಸಿ ಮುಂದೆ ಬರದಂತೆ ಮಾಡುತ್ತವೆ.
ಇಂತಹ ಅಂಕಿಅಂಶಗಳು ಮಹಿಳಾ ಶೋಷಣೆಯ ವಿರುದ್ಧ ಎಷ್ಟು ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುವುದನ್ನು ಸಾರಿ ಹೇಳುತ್ತಿವೆ.
ಅಗತ್ಯವಿದೆ ಸಮಗ್ರ ಸುಧಾರಣೆಯ ಕ್ರಮಗಳು
ಒಂದು ವೇಳೆ ನಾವು ನಿಜಕ್ಕೂ ಸೌಜನ್ಯಾಳನ್ನು ಗೌರವಿಸಬೇಕಾದರೆ, ಮಹಿಳಾ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ನಡೆಸುವ ಹೋರಾಟದಲ್ಲಿ ಈ ಪ್ರಕರಣ ಹೊಸ ತಿರುವು ನೀಡುವಂತೆ ಮಾಡಬೇಕು. ಇದಕ್ಕಾಗಿ ಹಲವಾರು ಹಂತಗಳಲ್ಲಿ ಕ್ರಮ ಕೈಗೊಳ್ಳಬೇಕು.
ಕಾನೂನು ಸುಧಾರಣೆಗಳು: ಅತ್ಯಾಚಾರಿಗಳು ಮತ್ತು ಕೊಲೆಗಾರರಿಗೆ ಕ್ಷಿಪ್ರ ವಿಚಾರಣೆ ಮತ್ತು ಶಿಕ್ಷೆ ವಿಧಿಸುವ ಸಲುವಾಗಿ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು.
ಬಲವಾದ ಕಾನೂನು ಜಾರಿ ಇಲಾಖೆ: ತನಿಖೆಯ ಅಸಮರ್ಪಕತೆಗೆ ಪೊಲೀಸರನ್ನೇ ಜವಾಬ್ದಾರರನ್ನಾಗಿಸಬೇಕು. ಮಹಿಳೆಯರ ಕುರಿತ ಅಪರಾಧಗಳನ್ನು ನಿರ್ವಹಿಸುವ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು.
ಜಾಗೃತಿ ಮತ್ತು ಸಾಮಾಜಿಕ ಬದಲಾವಣೆ: ಸಮಾಜ ಮೊದಲನೆಯದಾಗಿ ಶೋಷಿತರನ್ನೇ ದೂಷಿಸುವ ಗುಣವನ್ನು ತ್ಯಜಿಸಬೇಕು. ಶೋಷಣೆಗೆ ಒಳಗಾದ ಮಹಿಳೆಯರು ಅಪರಾಧದ ಕುರಿತು ದೂರು ನೀಡಲು ಧೈರ್ಯ ತಾಳುವಂತಹ ವಾತಾವರಣವನ್ನು ಸಮಾಜದಲ್ಲಿ ನಿರ್ಮಿಸಬೇಕು.
ಸಾರ್ವಜನಿಕ ಒತ್ತಡ: ಸೌಜನ್ಯ ಹತ್ಯೆಯಂತಹ ಪ್ರಕರಣಗಳು ಖಂಡಿತವಾಗಿಯೂ ಜನಮಾನಸದಿಂದ ಮರೆತು ಹೋಗಬಾರದು. ಸಾರ್ವಜನಿಕರು ನ್ಯಾಯಕ್ಕಾಗಿ ಆಗ್ರಹಿಸುವುದನ್ನು ಮುಂದುವರಿಸಿ, ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಬೇಕು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಸೌಜನ್ಯಾ ಪ್ರಕರಣ ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಯಾಕೆ ಮೌನವಾಗಿ ಉಳಿಯಬಾರದು ಎಂಬುದನ್ನು ಎಲ್ಲರಿಗೂ ನೆನಪಿಸಲಿ.
ದುರಂತವನ್ನು ಭರವಸೆಯಾಗಿಸುವ ಪ್ರಯತ್ನ
ಇಷ್ಟೊಂದು ನೋವಿನ ನಡುವೆಯೂ, ಸೌಜನ್ಯಾ ಪ್ರಕರಣ ಒಂದು ಭರವಸೆ ನೀಡುವ ಬೆಳಕಾಗಿ ಹೊರಹೊಮ್ಮಿದೆ. ಸೌಜನ್ಯಾ ಪ್ರಕರಣ ಇನ್ನು ಮುಂದೆ ಯಾವುದೇ ಮಹಿಳೆ ಇಂತಹ ಪರಿಸ್ಥಿತಿಗೆ ತುತ್ತಾಗಬಾರದು ಎಂದು ಖಾತ್ರಿಪಡಿಸುವ ಸಲುವಾಗಿ ನೈಜ ಬದಲಾವಣೆಗಳನ್ನು ಆಗ್ರಹಿಸಲು ನಮಗೆ ಸ್ಫೂರ್ತಿ ನೀಡಬಹುದು. ನ್ಯಾಯ ನೀಡುವಲ್ಲಿ ವಿಳಂಬವಾದರೆ ನ್ಯಾಯವೇ ಲಭಿಸಲಿಲ್ಲ ಎಂದರ್ಥ ಎಂಬ ಮಾತೊಂದಿದೆ. ಹಾಗೆಂದ ಮಾತ್ರಕ್ಕೆ ನಾವು ಹೋರಾಟವನ್ನು ನಿಲ್ಲಿಸಬೇಕು ಎಂದು ಖಂಡಿತಾ ಅಲ್ಲ. ಜೊತೆಯಾಗಿ ನಿಂತು, ನಮ್ಮ ಧ್ವನಿ ಎತ್ತುವುದರಿಂದ, ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು ಆಗ್ರಹಿಸುವುದರಿಂದ, ನಾವು ಪ್ರಪಂಚವನ್ನು ಮಹಿಳೆಯರಿಗೆ ಸುರಕ್ಷಿತವಾಗಿಸಬಹುದು. ಆಗ ಮಹಿಳೆಯರು ಕೇವಲ ಶೋಷಣೆಯಲ್ಲಿ ಉಳಿದವರಾಗಿರದೆ, ಸಬಲೀಕರಣಗೊಂಡು, ಭಯಮುಕ್ತವಾಗಿ ಜೀವಿಸಲು ಸಾಧ್ಯವಾಗುತ್ತದೆ.
ಇಂದಿನ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ, ನಾವು ಸೌಜನ್ಯ ಮತ್ತು ಎಲ್ಲ ಮಹಿಳೆಯರಿಗೆ ನ್ಯಾಯ, ಸುರಕ್ಷತೆ ಮತ್ತು ಸಮಾನತೆ ಒದಗಿಸಲು ಹೋರಾಡುವ ಪಣ ತೊಡೋಣ. ಸೌಜನ್ಯಾ ಪ್ರಕರಣ ಎಂದಿಗೂ ಮರೆತುಹೋಗಬಾರದು. ಇದು ಅಂತಿಮವಾಗಿ ಕ್ರಮ ಕೈಗೊಳ್ಳುವ ತನಕವೂ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿ ಮೊಳಗುತ್ತಲೇ ಇರಲಿ.
-ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)









