ಸೌಜನ್ಯ ಪ್ರಕರಣ: ದೊಡ್ಡ ಸಮುದಾಯದ 'ಜಾಣ ಮೌನ'

ಸಮುದಾಯವನ್ನು ರಕ್ಷಿಸುವಲ್ಲಿ, ಕಾಪಾಡಿಕೊಳ್ಳುವಲ್ಲಿ ತಾವು ಪ್ರಮುಖ ಪಾತ್ರ ವಹಿಸುತ್ತೇವೆ ಎನ್ನುವ, ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಿಗೆ ಮೊದಲಾಗಿ ಪ್ರತಿಭಟನೆ, ಹೋರಾಟ ನಾಯಕರು ಅಥವಾ ಸಂಘಟನೆಗಳು ತಮ್ಮದೇ ಸಮುದಾಯದ ಅಮಾಯಕ ಹುಡುಗಿಯೊಬ್ಬಳು ಅತ್ಯಾಚಾರ ಮತ್ತು ಹತ್ಯೆಗೊಳಗಾದಾಗ ಮೌನಕ್ಕೆ ಶರಣಾಗಿರುವುದು ವಿಪರ್ಯಾಸ.

Written by - Girish Linganna | Edited by - Manjunath Naragund | Last Updated : Mar 7, 2025, 03:13 PM IST
  • ಒಕ್ಕಲಿಗ ಸಮುದಾಯದ ಸ್ವಯಂಘೋಷಿತ ರಕ್ಷಕರಾದ ನಾಯಕರುಗಳು ಮತ್ತು ಸಂಘಟನೆಗಳು ಅಸಹಜ ಮೌನವನ್ನು ತಳೆದಿದ್ದಾರೆ.
  • ಈಗ ಸಮುದಾಯದ ಆಕ್ರೋಶ ಎಲ್ಲಿದೆ? ತಮ್ಮದೇ ಸಮುದಾಯದ ಹೆಣ್ಣು ಮಗುವಿನ ಸಾವಿಗೆ ನಡೆಸಬೇಕಾದ ಹೋರಾಟ ಎಲ್ಲಿದೆ?
  • ತಮ್ಮದೇ ಸಮುದಾಯದ ಅಮಾಯಕ ಹುಡುಗಿಯೊಬ್ಬಳು ಅತ್ಯಾಚಾರ ಮತ್ತು ಹತ್ಯೆಗೊಳಗಾದಾಗ ಮೌನಕ್ಕೆ ಶರಣಾಗಿರುವುದು ವಿಪರ್ಯಾಸ.
ಸೌಜನ್ಯ ಪ್ರಕರಣ:  ದೊಡ್ಡ ಸಮುದಾಯದ 'ಜಾಣ ಮೌನ'

ಫೆಬ್ರವರಿ 27, 2025ರಂದು ಕನ್ನಡ ಕಂಟೆಂಟ್ ಕ್ರಿಯೇಟರ್ ಆದ ಸಮೀರ್ ಎಂಡಿ ಎಂಬವರು ಇತ್ತೀಚೆಗೆ ಒಂದು ವೀಡಿಯೋ ನಿರ್ಮಿಸಿದ ಬಳಿಕ, ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಈ ವೀಡಿಯೋ 2012ರಲ್ಲಿ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ಭೀಕರ ಅಪರಾಧದ ಕುರಿತ ಜನಾಕ್ರೋಶಕ್ಕೆ ಮತ್ತೆ ಕಿಡಿ ಸೋಕಿಸಿದೆ. ಆ ದುರಂತಮಯ ಘಟನೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಎಂಬಾಕೆಯನ್ನು ಅತ್ಯಾಚಾರ ನಡೆಸಿ, ಕೊಲೆಗೈಯಲಾಗಿತ್ತು.

Add Zee News as a Preferred Source

ಆಕೆಯ ಮೃತ ದೇಹವನ್ನು ಆಕೆಯ ಶಾಲಿನಿಂದಲೇ ಕ್ರೂರವಾಗಿ ಮರಕ್ಕೆ ಬಿಗಿದ ರೀತಿಯಲ್ಲಿ ನೇತ್ರಾವತಿ ನದಿಯ ಬಳಿ ಪತ್ತೆಹಚ್ಚಲಾಯಿತು. ಆರಂಭದ ದಿನಗಳಿಂದಲೂ, ಈ ಪ್ರಕರಣ ನಿರಂತರವಾಗಿ ವಿಚಾರಣಾ ವೈಫಲ್ಯಗಳನ್ನು, ಸುಳ್ಳು ಸಾಕ್ಷಿಗಳನ್ನು, ಮತ್ತು ನೈಜ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನಗಳನ್ನು ಎದುರಿಸುತ್ತಲೇ ಬಂದಿದೆ. ಹಲವಾರು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ, ಬೆಂಗಳೂರು ಸೆಷನ್ಸ್ ನ್ಯಾಯಾಲಯ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್ ಎಂಬಾತನನ್ನು ಜೂನ್ 16, 2023ರಂದು ದೋಷಪೂರಿತ ತನಿಖೆಯ ಕಾರಣ ನೀಡಿ ಖುಲಾಸೆಗೊಳಿಸಿತು. ಈ ಪ್ರಕರಣದಲ್ಲಿ ಹೇಗೆ ಸಾಕ್ಷಿಗಳನ್ನು ಬೇಕಾದಂತೆ ಕೂರಿಸಲಾಯಿತು, ವೈದ್ಯಕೀಯ ವರದಿಗಳನ್ನು ಮಾರ್ಪಡಿಸಲಾಯಿತು ಮತ್ತು ಅತ್ಯಂತ ಮುಖ್ಯವಾದ ಸುಳಿವುಗಳನ್ನು ಹಿಂಬಾಲಿಸದೆ, ನೈಜ ಅಪರಾಧಿಗಳು ಸ್ವತಂತ್ರವಾಗಿ ಓಡಾಡುವಂತೆ ಮಾಡಲಾಯಿತು ಎಂದು ನ್ಯಾಯಾಲಯ ಸಮಾಜದ ಮುಂದೆ ತೆರೆದಿಟ್ಟಿತು.

ಮೃತ ಸೌಜನ್ಯಾ ಕುಟುಂಬ ಈ ಪ್ರಕರಣದಲ್ಲಿ ಸಂತೋಷ್ ರಾವ್ ನನ್ನು ಹರಕೆಯ ಕುರಿ ಮಾಡಲಾಗಿದೆ, ಸೌಜನ್ಯಾ ಹತ್ಯೆ ನಡೆಸಿದ ನೈಜ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ, ನಿರಂತರವಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ನಡೆಸಿದ್ದಾರೆ. ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್ (ಸಿಐಡಿ) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ನಂತಹ ತನಿಖಾ ಸಂಸ್ಥೆಗಳು ಪ್ರಕರಣದ ವಿಚಾರಣೆ ನಡೆಸಿದ ಹೊರತಾಗಿಯೂ, ಈ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಸೌಜನ್ಯಾ ತಂದೆ ಚಂದಪ್ಪ ಗೌಡರು ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಈ ಪ್ರಕರಣದ ಸಂಪೂರ್ಣ ಮರು ವಿಚಾರಣೆ ನಡೆಸಬೇಕೆಂದು ಆಗ್ರಹಿಸಿ ರಿಟ್ ಅರ್ಜಿ ಸಲ್ಲಿಸಿದರು. ಆದರೆ, ಎಪ್ರಿಲ್ 2024ರಂದು ನ್ಯಾಯಾಲಯ "ಈ ಪ್ರಕರಣದ ಮರು ವಿಚಾರಣೆ ನಡೆಸುವುದರಿಂದ ಯಾವುದೇ ಉದ್ದೇಶ ಸಾಧಿತವಾಗುವುದಿಲ್ಲ" ಎಂಬ ಕಾರಣ ನೀಡಿ, ಅರ್ಜಿಯನ್ನು ನಿರಾಕರಿಸಿತು. ಒಂದು ದಶಕಕ್ಕೂ ಹೆಚ್ಚು ಕಾಲ ಮಗಳಿಗೆ ನ್ಯಾಯ ದೊರಕಿಸುವಲ್ಲಿ ನಿರಂತರವಾಗಿ ಹೋರಾಟ ನಡೆಸಿದ ಚಂದಪ್ಪ ಗೌಡ, ಮಗಳ ಹತ್ಯೆಯ ನೈಜ ಅಪರಾಧಿಗಳು ಯಾರು ಎನ್ನುವುದನ್ನು ತಿಳಿಯುವ ಮುನ್ನವೇ, ಜನವರಿ 19, 2025ರಂದು ಮೃತರಾದರು.

ಒಕ್ಕಲಿಗ ಸಮುದಾಯದ ಅವಮಾನಕರ ಮೌನ: 

ಸೌಜನ್ಯಾ ಸಾವಿಗೆ ನ್ಯಾಯ ಒದಗಿಸಲು ವಿಫಲವಾಗಿರುವುದು ಸ್ಪಷ್ಟವಾಗಿ ಕಂಡುಬಂದಿದ್ದರೂ, ಒಕ್ಕಲಿಗ ಸಮುದಾಯದ ಸ್ವಯಂಘೋಷಿತ ರಕ್ಷಕರಾದ ನಾಯಕರುಗಳು ಮತ್ತು ಸಂಘಟನೆಗಳು ಅಸಹಜ ಮೌನವನ್ನು ತಳೆದಿದ್ದಾರೆ. ಈಗ ಸಮುದಾಯದ ಆಕ್ರೋಶ ಎಲ್ಲಿದೆ? ತಮ್ಮದೇ ಸಮುದಾಯದ ಹೆಣ್ಣು ಮಗುವಿನ ಸಾವಿಗೆ ನಡೆಸಬೇಕಾದ ಹೋರಾಟ ಎಲ್ಲಿದೆ? ಸಮುದಾಯವನ್ನು ರಕ್ಷಿಸುವಲ್ಲಿ, ಕಾಪಾಡಿಕೊಳ್ಳುವಲ್ಲಿ ತಾವು ಪ್ರಮುಖ ಪಾತ್ರ ವಹಿಸುತ್ತೇವೆ ಎನ್ನುವ, ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಿಗೆ ಮೊದಲಾಗಿ ಪ್ರತಿಭಟನೆ, ಹೋರಾಟ ನಾಯಕರು ಅಥವಾ ಸಂಘಟನೆಗಳು ತಮ್ಮದೇ ಸಮುದಾಯದ ಅಮಾಯಕ ಹುಡುಗಿಯೊಬ್ಬಳು ಅತ್ಯಾಚಾರ ಮತ್ತು ಹತ್ಯೆಗೊಳಗಾದಾಗ ಮೌನಕ್ಕೆ ಶರಣಾಗಿರುವುದು ವಿಪರ್ಯಾಸ.

ಇದು ಕೆಲವು ಸ್ವಘೋಷಿತ ನಾಯಕರುಗಳ ಬೂಟಾಟಿಕೆ ಮತ್ತು ಅವಕಾಶವಾದಿತನವನ್ನು ಸ್ಪಷ್ಟವಾಗಿ ತೆರೆದಿಟ್ಟಿದೆ. ಸೌಜನ್ಯಾ ಹತ್ಯೆಗೆ ಸಂಬಂಧಿಸಿದಂತೆ, ನಾಯಕರು ಮತ್ತು ಸಂಘಟನೆಗಳು ಯಾವುದೇ ಕ್ರಮ ಕೈಗೊಳ್ಳಲು ಅವರು ವಿಫಲವಾಗಿರುವುದು ಸಮುದಾಯಕ್ಕೆ ಸಂಬಂಧಿಸಿದಂತೆ ಅವರ ಕಾಳಜಿ ಕೇವಲ ರಾಜಕೀಯ ಕಾರಣವಾದುದಷ್ಟೇ ಹೊರತು, ಸಾಮಾಜಿಕ ಕಾಳಜಿಯದು ಮತ್ತು ಸಮುದಾಯದ ಹಿತದೃಷ್ಟಿಯದಲ್ಲ ಎಂಬುದು ಸ್ಪಷ್ಟವಾಗಿದೆ. ಅವರಿಗೆ ಅವಶ್ಯಕವಾಗಿರುವುದು ಕೇವಲ ಅಧಿಕಾರ, ಪ್ರಭಾವ, ಮತ್ತು ತಮ್ಮ ಹಿತಾಸಕ್ತಿಗಳೇ ಹೊರತು, ನಿಜವಾದ ನ್ಯಾಯವಲ್ಲ. ಒಂದು ವೇಳೆ ಈ ಮುಖಂಡರುಗಳು ತಮ್ಮ ಜನರನ್ನು ರಕ್ಷಿಸುವಲ್ಲಿ ನಿಜಕ್ಕೂ ಬದ್ಧರಾಗಿರುತ್ತಿದ್ದರೆ, ಅವರು ಒಗ್ಗಟ್ಟಾಗಿ ನಿಂತು, ನ್ಯಾಯಕ್ಕಾಗಿ ಧ್ವನಿ ಎತ್ತಿ, ಮೃತ ಸೌಜನ್ಯಾ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಡುತ್ತಿದ್ದರು.

ಇಂತಹ ಸಂಘಟನೆಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ನಿಜಕ್ಕೂ ಅವಮಾನಕರ ಬೆಳವಣಿಗೆ. ಇದು ತಮ್ಮದೇ ಜನರಿಗೆ ಸಂಘಟನೆಗಳು ಮಾಡಿರುವ ವಿದ್ರೋಹ. ನಾಯಕರುಗಳು ತಮ್ಮದೇ ಸಮುದಾಯದ ಯುವ ಮಗಳೊಬ್ಬಳ ಭೀಕರ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ, ನ್ಯಾಯಕ್ಕಾಗಿ ಆಗ್ರಹಿಸಿ, ಧ್ವನಿ ಎತ್ತುವುದಿಲ್ಲ ಎಂದಾದರೆ, ಅವರ ನೈಜ ಉದ್ದೇಶವೇನು? ತಮ್ಮದೇ ಜನರನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೇ ಹೋದರೆ, ಈ ಸಂಘಟನೆಗಳ ಅಗತ್ಯವಾದರೂ ಏನು?

ನ್ಯಾಯ ಗೆಲ್ಲಲೇಬೇಕು

ಸೌಜನ್ಯಾ ಎಂಬ ಹೆಣ್ಣುಮಗಳ ದುರಂತ ಪ್ರಕರಣ ಒಂದು ಕಟು ವಾಸ್ತವವನ್ನು ತೆರೆದಿಟ್ಟಿದೆ. ಅದೇನೆಂದರೆ, ಈ ದೇಶದಲ್ಲಿ ನ್ಯಾಯ ಬಹಳಷ್ಟು ಬಾರಿ ಅಧಿಕಾರ ಮತ್ತು ಸವಲತ್ತುಗಳಿಂದ ನಿರ್ಧರಿಸಲ್ಪಡುತ್ತದೆ. ಸಾಮಾನ್ಯ ನಾಗರಿಕರು ಮೌನವಾಗಿಯೇ ಅನ್ಯಾಯದ ಭಾರವನ್ನು ಸಹಿಸಬೇಕಾಗುತ್ತದೆ.

ಇಲ್ಲಿಗೆ ಈ ಮೌನ, ಅನ್ಯಾಯ ಸಾಕು! ನ್ಯಾಯದಾನ ವಿಳಂಬವಾದರೆ, ಅದು ಅನ್ಯಾಯವೇ ಸರಿ!

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

About the Author

Trending News