ಇಂದು ರಾಜ್ಯ ಸಚಿವ ಸಂಪುಟ ಸಭೆ; ಸಾಂಸ್ಥಿಕ ಕ್ವಾರಂಟೈನ್, ಗ್ರಾಪಂ ಚುನಾವಣೆ ಬಗ್ಗೆ ನಿರ್ಧಾರ

ಪ್ರಯಾಣಿಕರ ಒತ್ತಡ ಮತ್ತು ಸಾಂಸ್ಥಿಕ ಕ್ವಾರಂಟೈನ್ ತೊಡಕಿನಿಂದ ತಪ್ಪಿಸಿಕೊಳ್ಳಲು ಸಾಂಸ್ಥಿಕ ಕ್ವಾರಂಟೈನ್ ಬದಲಾಗಿ ಹೋಮ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

Updated: May 28, 2020 , 10:45 AM IST
ಇಂದು ರಾಜ್ಯ ಸಚಿವ ಸಂಪುಟ ಸಭೆ; ಸಾಂಸ್ಥಿಕ ಕ್ವಾರಂಟೈನ್, ಗ್ರಾಪಂ ಚುನಾವಣೆ ಬಗ್ಗೆ ನಿರ್ಧಾರ

ಬೆಂಗಳೂರು: ಇಂದು ಸಂಜೆ 4 ಗಂಟೆಗೆ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣಿಕರಿಗೆ ಜಾರಿಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ (Institutional Quarantine) ಅನ್ನು ಕೈಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣಿಕರಿಗೆ ಜಾರಿಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ (Quarantine) ಬಗ್ಗೆ ಬಹಳಷ್ಟು ಗೊಂದಲ ಇದೆ. ಪ್ರಯಾಣಿಕರು 14 ದಿನಗಳ ಕ್ವಾರಂಟೈನ್ ಗೆ ಹಣ ನೀಡಲೇಬೇಕೆಂಬ, ಅದಾದ ಬಳಿಕ 7 ದಿನ‌ ಆದ ಮೇಲೆ ಮನೆಗೆ ಹೋದರೆ ಉಳಿದ 7 ದಿನದ ಹಣವನ್ನು ಪ್ರಯಾಣಿಕರಿಗೆ ವಾಪಸ್ ನೀಡುವ ಬಗ್ಗೆ ಗೊಂದಲಗಳಿವೆ. ಆದುದರಿಂದ ಇಂದು ರಾಜ್ಯ ಸಚಿವ ಸಂಪುಟ ಕೈಗೊಳ್ಳುವ ನಿರ್ಧಾರ ಬಹಳ ಮುಖ್ಯವಾದುದಾಗಿದೆ.

ಪ್ರಯಾಣಿಕರ ಒತ್ತಡ ಮತ್ತು ಸಾಂಸ್ಥಿಕ ಕ್ವಾರಂಟೈನ್ ತೊಡಕಿನಿಂದ ತಪ್ಪಿಸಿಕೊಳ್ಳಲು ಸಾಂಸ್ಥಿಕ ಕ್ವಾರಂಟೈನ್ ಬದಲಾಗಿ ಹೋಮ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

ಇನ್ನುಳಿದಂತೆ ಲಾಕ್ ಡೌನ್ ಸಂತ್ರಸ್ಥ ಫಲಾನುಭವಿಗಳಿಗೆ ಘೋಷಿತ ಆರ್ಥಿಕ ಪ್ಯಾಕೇಜ್ ತ್ವರಿತ ವಿತರಣೆಗೆ ಮಾರ್ಗಸೂಚಿ ರೂಪಿಸುವ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ‌ಚರ್ಚೆಯಾಗಲಿದೆ. ಹಣ ಹೊಂದಿಸಿಕೊಳ್ಳುವುದಕ್ಕಾಗಿ ಬಂಡವಾಳ ಆಕರ್ಷಿಸಲು ರೆವಿನ್ಯೂ ಆಕ್ಟ್  ತಿದ್ದುಪಡಿಗೆ ತಿರ್ಮಾನ ಸಾಧ್ಯತೆ ಇದೆ.

ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾಗಿದ್ದು ಚುನಾವಣೆ ನಡೆಸಬೇಕೋ, ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಕ ಮಾಡಬೇಕೋ ಎಂಬ ಬಗ್ಗೆ ಕೂಡ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಲಾಗುತ್ತದೆ.

ವಿಧಾನ ಪರಿಷತ್ತಿಗೆ ಐದು ಜನ ನಾಮನಿರ್ದೇಶನ ಮಾಡುವ ಅವಕಾಶ ಇದ್ದು, ನಾಮ ನಿರ್ದೇಶನ ಮಾಡುವ ಅದಿಕಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರಿಗೆ ನೀಡಲು ಒಪ್ಪಿಗೆ ಸೂಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಮೇ 31ಕ್ಕೆ ನಾಲ್ಕನೇ ಹಂತದ ಲಾಕ್ ಡೌನ್ ಮುಕ್ತಾಯ ಆಗುತ್ತಿದ್ದು ಜೂನ್ 15ರವರೆಗೆ ಐದನೇ ಹಂತದ  ಲಾಕ್​ಡೌನ್ (Lockdown) ವಿಸ್ತರಣೆ ಆಗುವ ಸಾಧ್ಯತೆ ಇದೆ. ಈ‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ಸರ್ಕಾರಿ ನೌಕರರ ಸಾಮೂಹಿಕ ವರ್ಗಾವಣಾ ಅವಧಿ ನಿಗದಿಪಡಿಸುವ ಬಗ್ಗೆಯೂ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.