ಬೆಂಗಳೂರು: ಮಹಾ ಕ್ರೂರಿ ಕೊರೊನಾ ನಿಯಂತ್ರಣವಾಗದಿದ್ದರೂ ಖಾಸಗಿ ಶಾಲೆಗಳ ಒತ್ತಾಯಕ್ಕೆ ಮಣಿದು ಶಾಲೆಗಳನ್ನು ಆರಂಭಿಸಲು ಹೊರಟಿದ್ದ ರಾಜ್ಯ ಸರ್ಕಾರ ಈಗ ಡಿಸೆಂಬರ್ ವರೆಗೂ ಶಾಲೆಗಳನ್ನು ಆರಂಭಿಸದಿರುವ ಮಹತ್ವದ ನಿರ್ಧಾರಕ್ಕೆ ಬಂದಿದೆ.


COMMERCIAL BREAK
SCROLL TO CONTINUE READING

ಶಾಲೆಗಳನ್ನು ಆರಂಭಿಸುವ ಬಗ್ಗೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  (BS Yediyurappa)ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಗಳು ಭಾಗವಹಿಸಿದ್ದರು.


ಸಭೆಯಲ್ಲಿ ಬಹಳ ಪ್ರಮುಖವಾಗಿ ರಾಜ್ಯ ಸರ್ಕಾರಕ್ಕೆ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯು ನೀಡಿದ್ದ 'ಡಿಸೆಂಬರ್ ತಿಂಗಳಲ್ಲಿ ಶಾಲೆಗಳನ್ನು (Schools) ತೆರೆಯುವುದು ಕೂಡ ಸೂಕ್ತವಲ್ಲ" ಎಂಬ ಶಿಫಾರಸ್ಸಿನ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ರೂಪಿಸಿರುವ ಸಮಿತಿ. ಹಾಗಾಗಿ ಈಗಾಗಲೇ ಹೇಳಿದಂತೆ ಖಾಸಗಿ ಶಾಲೆಗಳ ಒತ್ತಾಯಕ್ಕೆ ಮಣಿದು ಶಾಲೆಗಳನ್ನು ಆರಂಭಿಸಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ತಾನೇ ನೇಮಿಸಿದ್ದ ಸಮಿತಿಯೊಂದು ನೀಡಿದ ಶಿಫಾರಸು ಅನ್ನು ಅಲ್ಲಗೆಳೆಯಲು ಸಾಧ್ಯವಾಗಿಲ್ಲ.


ಅಂತಿಮವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಭೆಯಲ್ಲಿ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯು ನೀಡಿದ ಶಿಫಾರಸಿನ ಮೇರೆಗೆ ಡಿಸೆಂಬರ್ ವರೆಗೆ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಆತಂಕಕ್ಕೊಳಗಾಗಿದ್ದ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. 


ಈ ರಾಜ್ಯದಲ್ಲಿ ಶಾಲೆ ತೆರೆದ ನಾಲ್ಕೇ ದಿನದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರಿಗೆ Corona Positive


ನವೆಂಬರ್ 22ರಂದು ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ಗಂಭೀರವಾದ ಚರ್ಚೆಯಾಗಿತ್ತು. ಹಲವು ಆಯಾಮಗಳಿಂದ ಸಮಾಲೋಚನೆ ನಡೆಸಿದ ಸಮಿತಿಯು ಅಂತಿಮವಾಗಿ ಡಿಸೆಂಬರ್ ತಿಂಗಳಲ್ಲಿ ಶಾಲೆ ತೆರೆಯುವುದು ಸರಿಯಾದ ಕ್ರಮವಲ್ಲ ಎಂದು ನಿರ್ಧರಿಸಿತ್ತು.‌ ತಜ್ಞರ ಜೊತೆಗೆ ಚರ್ಚಿಸಿ ತೆಗೆದುಕೊಂಡ ತೀರ್ಮಾನವನ್ನು ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯು ಸಭೆಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಶಾಲೆಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ಸಮಿತಿ ಶಿಫಾರಸು ಅನ್ನು ಗಂಭೀರವಾಗಿ ಪರಿಗಣಿಸಿ ಡಿಸೆಂಬರ್ ವರೆಗೂ ಶಾಲೆಗಳನ್ನು ಆರಂಭಿಸದಿರಲು ನಿರ್ಧರಿಸಲಾಗಿದೆ.


ಸದ್ಯಕ್ಕೆ ಶಾಲೆ ತೆರೆಯಬೇಡಿ: ರಾಜ್ಯ ಸರ್ಕಾರಕ್ಕೆ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು


ಸದ್ಯ ದಿನನಿತ್ಯ ಸರಿ ಸುಮಾರು 1,700 ಕೋವಿಡ್-19 (Covid 19) ಪ್ರಕರಣಗಳು ಪತ್ತೆಯಾಗುತ್ತಿವೆ. ಚಳಿಗಾಲ ಇರುವುದರಿಂದ ಕೋವಿಡ್ ಸೋಂಕು ಹರಡುವಿಕೆ ತೀವ್ರಗೊಳ್ಳಬಹುದು. ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಉಲ್ಬಣವಾಗಬಹುದು. ಆದುದರಿಂದಲೂ ಡಿಸೆಂಬರ್ ತಿಂಗಳಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ. ಚಳಿ ಕಡಿಮೆ ಆಗಲು ಆರಂಭಿಸಿದ ನಂತರ ಮತ್ತು COVID-19 ಹರಡುವಿಕೆ ನಿಯಂತ್ರಣಕ್ಕೆ ಬಂದ ನಂತರ  ಪರಿಸ್ಥಿತಿ ನೋಡಿಕೊಂಡು ಶಾಲೆಗಳನ್ನು ತೆರೆಯುವುದು ಸೂಕ್ತ ಎಂಬುದಾಗಿ  ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿತ್ತು.