)
ಬೆಂಗಳೂರು: ರಾಜ್ಯದ ಸಾರಿಗೆ ನೌಕರರ ಮುಷ್ಕರ ವಿಚಾರ ಮತ್ತಷ್ಟು ತೀವ್ರ ರೂಪ ತಾಳಿದ್ದು, ನಾಳೆ (ಆಗಸ್ಟ್ 5) ಸರಕಾರಿ ಬಸ್ಗಳು ರಸ್ತೆಗಿಳಿಯದ ಸಾಧ್ಯತೆ ಜಾಸ್ತಿಯಾಗಿದೆ. ಹೈಕೋರ್ಟ್ ಒಮ್ಮೆ ಮುಷ್ಕರ ಮುಂದೂಡಲು ಸೂಚನೆ ನೀಡಿದರೂ, ನೌಕರರು ತಮ್ಮ ಹೋರಾಟ ಮುಂದುವರೆಸಲು ತೀರ್ಮಾನಿಸಿರುವುದು ನಿಶ್ಚಿತವಾಗಿದೆ. ರಾಜ್ಯಾದ್ಯಂತ ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ನಡೆಯಲಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವ ಸ್ಥಿತಿ ಎದುರಾಗಲಿದೆ.
ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದು, ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ನೌಕರರ ಒಕ್ಕೂಟಗಳೊಂದಿಗೆ ಸಭೆ ನಡೆಸಿದ್ರೂ ಯಾವುದೇ ಒಪ್ಪಂದಕ್ಕೆ ಬಾರದೆ ಸಭೆ ವಿಫಲಗೊಂಡಿದೆ. ವೇತನ ಹೆಚ್ಚಳ ಮತ್ತು 38 ತಿಂಗಳ ಹಿಂಬಾಕಿ ವೇತನ ನೀಡುವ ಬೇಡಿಕೆಗೆ ಸಿಎಂ ನಿರಾಕರಣೆ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ಹಣಕಾಸು ಪರಿಸ್ಥಿತಿ ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಮುಷ್ಕರವನ್ನು ತಡೆಗಟ್ಟಲು ನಡೆದ ಸಂಧಾನ ವಿಫಲವಾಗಿದೆ.
ಸಿಎಂ ಸೂಚನೆಯಂತೆ ನಾಳೆಯಿಂದಲೇ ಸಾರಿಗೆ ನೌಕರರಿಗೆ ಯಾವುದೇ ರಜೆ ಮಂಜೂರು ಆಗದು. ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಅಗತ್ಯವಿದ್ದರೆ ವೀಕ್ಲಿ ಆಫ್ಗಳನ್ನೂ ಕ್ಯಾನ್ಸಲ್ ಮಾಡಲು ಸೂಚಿಸಲಾಗಿದೆ. "ಮುಷ್ಕರದಲ್ಲಿ ಭಾಗಿಯಾದರೆ ಶಿಸ್ತು ಕ್ರಮ ಅನಿವಾರ್ಯವಾಗಲಿದೆ" ಎಂಬ ಎಚ್ಚರಿಕೆಯನ್ನು ಸರಕಾರ ನೀಡಿದ್ದು, "ಡ್ಯೂಟಿ ಮಾಡದ ನೌಕರರಿಗೆ ಸಂಬಳವನ್ನೂ ನೀಡುವುದಿಲ್ಲ" ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿರುವ ಅನಂತ್ ಸುಬ್ಬರಾವ್ ಹೇಳಿಕೆಯಂತೆ, “ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ನಾಳೆ ಯಾವ ನೌಕರರೂ ಬಸ್ಗಳನ್ನು ಓಡಿಸಲ್ಲ. ಎಲ್ಲಾ ಡಿಪೋಗಳಲ್ಲಿ ಬಸ್ಗಳನ್ನು ನಿಲ್ಲಿಸಲಾಗುವುದು” ಎಂದಿದ್ದಾರೆ.
ನಾಳೆಯ ಬಸ್ ಬಂದ್ ನಿಂದ ಶಾಲಾ ಮಕ್ಕಳಿಂದ ಹಿಡಿದು ದೈನಂದಿನ ಪ್ರಯಾಣಿಕರ ತನಕ ದೊಡ್ಡ ಮಟ್ಟದ ತೊಂದರೆ ಉಂಟಾಗುವ ನಿರೀಕ್ಷೆ ಇದೆ. ಸರ್ಕಾರ ಹಾಗೂ ನೌಕರರ ಸಂಘಟನೆಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.