ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿರುವವರೇ ಸಿಎಂ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

ʼಎಥೆನಾಲ್‌ ಹಂಚಿಕೆಯ ತಮ್ಮ ಮಾಹಿತಿಯೇ ಸುಳ್ಳುʼ ಎಂದಿರುವ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಲ್ಹಾದ ಜೋಶಿ, ʼಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವಲ್ಲಿ ಪರದಾಡುತ್ತಿರುವ ಸಿಎಂ ಹತಾಶೆಯಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಸತ್ಯಾಂಶ ಅರಿತೋ-ಅರಿಯದೆಯೋ ಬರೀ ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿರುವವರು ಅವರೇʼ ಎಂದು ಚಾಟಿ ಬೀಸಿದ್ದಾರೆ.

Written by - Bhavishya Shetty | Last Updated : Nov 7, 2025, 04:39 PM IST
    • ಸರಿಯಾದ ಮಾಹಿತಿ ಪಡೆದು ಮಾತನಾಡಬೇಕೆಂಬ ಪರಿಜ್ಞಾನ ಇಲ್ಲದಾಯಿತೇ?
    • ಎಥೆನಾಲ್‌ ಹಂಚಿಕೆಯ ನೈಜ ಮಾಹಿತಿ ಮರೆಮಾಚಿದ್ದಾರೆ ಸಿದ್ದರಾಮಯ್ಯ
    • ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು
ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿರುವವರೇ ಸಿಎಂ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

ನವದೆಹಲಿ: "ಮುಖ್ಯಮಂತ್ರಿ ಹುದ್ದೆ ಹೋಯ್ದಾಟದಲ್ಲಿ ಸಿದ್ದರಾಮಯ್ಯ ಏನೇನೋ ಬಡಬಡಿಸುತ್ತಿದ್ದಾರೆ. ಸರಿಯಾದ ದತ್ತಾಂಶ, ಅಧಿಕಾರಿಗಳಿಂದ ನೈಜ ಮಾಹಿತಿ ಪಡೆದು ಮಾತನಾಡಬೇಕೆಂಬ ಪರಿಜ್ಞಾನ ಸಿಎಂಗೆ ಇಲ್ಲದಿರುವುದು ರಾಜ್ಯದ ದುರಂತ" ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.

Add Zee News as a Preferred Source

ʼಎಥೆನಾಲ್‌ ಹಂಚಿಕೆಯ ತಮ್ಮ ಮಾಹಿತಿಯೇ ಸುಳ್ಳುʼ ಎಂದಿರುವ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಲ್ಹಾದ ಜೋಶಿ, ʼಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವಲ್ಲಿ ಪರದಾಡುತ್ತಿರುವ ಸಿಎಂ ಹತಾಶೆಯಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಸತ್ಯಾಂಶ ಅರಿತೋ-ಅರಿಯದೆಯೋ ಬರೀ ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿರುವವರು ಅವರೇʼ ಎಂದು ಚಾಟಿ ಬೀಸಿದ್ದಾರೆ.

ʼ2024-25ರಲ್ಲಿ ಕರ್ನಾಟಕದಿಂದ ತೈಲ ಮಾರುಕಟ್ಟೆ ಕಂಪನಿ(OMC)ಗಳಿಗೆ ಒಟ್ಟು 139.8 ಕೋಟಿ ಲೀಟರ್ ಎಥೆನಾಲ್ ಅನ್ನು ಪೂರೈಸಿದೆ. ಮುಖ್ಯಮಂತ್ರಿ ಆದವರು ಮೊದಲು ದತ್ತಾಂಶ ಅರಿತು, ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು ಅರ್ಥ ಮಾಡಿಕೊಂಡು ಮಾತನಾಡಬೇಕಿತ್ತು. ಆದರೆ ಸಿಎಂಗೆ ಈ ಕನಿಷ್ಠ ಪರಿಜ್ಞಾನವೂ ಇಲ್ಲದಾಗಿರುವುದು ದುರ್ದೈವʼ ಎಂದು ಟೀಕಿಸಿದ್ದಾರೆ ಜೋಶಿ.

ಸಿಎಂ ಪಲಾಯನವಾದ: ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ʼಬೆಲೆ ನಿಗದಿ ಮಾಡಿ, ಆವರ್ತ ನಿಧಿ ಸ್ಥಾಪನೆ ಮಾಡಿʼ ಎಂದೆಲ್ಲಾ ಸರ್ಕಾರಗಳಿಗೆ ಬಿಟ್ಟಿ ಸಲಹೆ ನೀಡುತ್ತಿದ್ದರು. ಇದೀಗ ತಾವೇ ಅಧಿಕಾರದಲ್ಲಿದ್ದರೂ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದತ್ತ ಬೆರಳು ತೋರುತ್ತ ಪಲಾಯನವಾದ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರು ಉಲ್ಲೇಖಿಸಿರುವ ಸಂಸತ್ತಿನ ಉತ್ತರದಲ್ಲಿ 30.06.25 ರವರೆಗಿನ ದತ್ತಾಂಶ ಮಾತ್ರ ಇದೆ. ಆದರೆ, ಎಥೆನಾಲ್ ಸರಬರಾಜು ವರ್ಷವು ನವೆಂಬರ್‌ನಿಂದ ಪ್ರಾರಂಭವಾಗಿ ಅಕ್ಟೋಬರ್‌ನಲ್ಲಿ ಕೊನೆಗೊಳ್ಳುತ್ತದೆ. ಇದನ್ನು ಮರೆಮಾಚಿ ತಾವೇ ಸುಳ್ಳಿನ ಕಂತೆ ಕಟ್ಟಿದ್ದಾರೆ ಎಂದು ಸಿಎಂ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

2004-2014ರ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ಸಕಾಲಕ್ಕೆ ಹಣ ಪಾವತಿ ಆಗುತ್ತಿರಲಿಲ್ಲ. ಇದರಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಅತಿ ಕಡಿಮೆ FRP/MSP ಇತ್ತು. 2005ರಲ್ಲಿಯೇ ಎಥೆನಾಲ್ ಮಿಶ್ರಣದ ಪ್ರಸ್ತಾಪ ಮಾಡಿದ್ದರೂ ಆ ಬಗ್ಗೆ ಕಿಂಚಿತ್ತೂ ಯೋಚನೆ ಸಹ ಮಾಡಿರಲಿಲ್ಲ ಇವರು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2013-14ರಿಂದ 2024-25ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು OMCಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತ್ಯುತ್ತರ ಕೊಟ್ಟಿದ್ದಾರೆ.

"2013-14ರಲ್ಲಿ ಕಬ್ಬು ಬೆಳೆ ಖರೀದಿ ₹57,104 ಕೋಟಿಗಳಷ್ಟಿತ್ತು, ಆದರೆ 2024-25ರಲ್ಲಿ ₹1,02,687 ಕೋಟಿ ಮೌಲ್ಯ ದಾಟಿದೆ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಮೂಲಕ 2013-14ರಲ್ಲಿ ₹210 ಇತ್ತು. ಆದರೆ 2025-26ರ ಸಕ್ಕರೆ ಹಂಗಾಮಿನಲ್ಲಿ ಶೇ.10.25ರಷ್ಟು ಚೇತರಿಕೆಯೊಂದಿಗೆ ₹355/ಕ್ವಿಂಟಲ್‌ಗೆ ಏರಿಕೆಯಾಗಿದೆ. ಇದು ನಮ್ಮ‌ ಸರ್ಕಾರದ ಬದ್ಧತೆ ಸಿದ್ದರಾಮಯ್ಯನವರೇ" ಎಂದು ನಿಖರ ಅಂಕಿಅಂಶ ಸಹಿತ ತಿರುಗೇಟು ಕೊಟ್ಟಿದ್ದಾರೆ.

2013-14ರಿಂದ ಕಬ್ಬು ಆಧಾರಿತ ಡಿಸ್ಟಿಲರಿಗಳು ಮತ್ತು ಧಾನ್ಯ ಆಧಾರಿತ ಡಿಸ್ಟಿಲರಿಗಳು ₹2.18 ಲಕ್ಷ ಕೋಟಿಗಿಂತ ಹೆಚ್ಚು ಆದಾಯ ಗಳಿಸಿವೆ. ಇದರಲ್ಲಿ ಕಬ್ಬು ಆಧಾರಿತ ಡಿಸ್ಟಿಲರಿಗಳು (26.10.2025ರಂತೆ) OMCಗಳಿಗೆ ಎಥೆನಾಲ್ ಮಾರಾಟದಿಂದ ₹1.29 ಲಕ್ಷ ಕೋಟಿ ಗಳಿಸಿವೆ. ಇದರಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಕಾಲಿಕವಾಗಿ ಬಾಕಿ ಪಾವತಿಸಲು ನೆರವಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಸಕ್ಕರೆ ರಫ್ತನ್ನು ಸಕಾಲಿಕವಾಗಿ ಅನುಮತಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಎಥೆನಾಲ್‌ ಉತ್ಪಾದನೆ-ಪೂರೈಕೆ 26 ಪಟ್ಟು ಹೆಚ್ಚು: ಹೆಚ್ಚುವರಿ ಸಕ್ಕರೆಯನ್ನು ಸಮತೋಲನಗೊಳಿಸಲು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. 2013-14ರಿಂದ 2024-25ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು OMCಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಬೆಲೆ ಸಮತೋಲನ ನಮ್ಮ ಬದ್ಧತೆ: ಇಡೀ ದೇಶಕ್ಕೆ ಅನ್ವಯಿಸುವಂತೆ ‌ಒಂದು ನೀತಿ ಜಾರಿ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ಅಂತೆಯೇ ಸಕ್ಕರೆ ಬೆಲೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದೂ ನಮ್ಮ ಬದ್ಧತೆ. ಅದರಂತೆ ಕ್ರಮ ಕೈಗೊಳ್ಳುತ್ತದೆ. ಕಳೆದ 10 ವರ್ಷದ ಅವಧಿಯಲ್ಲಿ 10 LMT ಸಕ್ಕರೆ ರಫ್ತಿಗೆ ಅವಕಾಶ ನೀಡಲಾಗಿತ್ತು. ಈ ವರ್ಷ 15 LMTಗೆ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ ದುರಾಡಳಿತದ ಪರಮಾವಧಿ-ರೈತರು ಬೀದಿಗೆ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಕೇವಲ ಸುಳ್ಳು ಹೇಳಿಕೊಂಡು, ಸುಳ್ಳಿನ ಮನೆ ಕಟ್ಟಿ ಜನಸಾಮಾನ್ಯರನ್ನು, ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ʼಗ್ಯಾರಂಟಿಗಳಷ್ಟೇ ನಿಮ್ಮ ಸರ್ಕಾರದ ಆಡಳಿತವಾಗಿದೆಯೇ ಹೊರೆತು ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲ. ನಿಮ್ಮ ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಪರಮಾವಧಿಯಿಂದ ರೈತರು ಬೀದಿಗೆ ಬಂದಿದ್ದಾರೆʼ ಎಂದು ಸಚಿವ ಪ್ರಲ್ಹಾದ ಜೋಶಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ವರದಿ: ಪ್ರಶೋಬ್‌ ದೇವನಹಳ್ಳಿ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News