ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಎಂಬ ಸುದ್ದಿ ಸುಳ್ಳು - ಪರಮೇಶ್ವರ್

ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ 5 ವರ್ಷ ಸುಭದ್ರವಾಗಿರಲಿದೆ - ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್  

Last Updated : Sep 11, 2018, 01:02 PM IST
ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಎಂಬ ಸುದ್ದಿ ಸುಳ್ಳು - ಪರಮೇಶ್ವರ್ title=

ಬೆಂಗಳೂರು: ಕಾಂಗ್ರೆಸ್‌ನ ಯಾವ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿಲ್ಲ.‌ ಬಿಜೆಪಿ ಅವರು ಕೇವಲ ಊಹಾಪೋಹ ಸೃಷ್ಟಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ತಮ್ಮ ನಿವಾಸದ ಬಳಿ ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು‌ ನೇರವಾಗಿ ಸತೀಶ್ ಜಾರಕಿಹೋಳಿ ಅವರೊಂದಿಗೆ ಮಾತನಾಡಿದ್ದೇನೆ, ಅವರು ಕೂಡ ಬಿಜೆಪಿ ಸೇರ್ಪಡೆಗೊಳ್ಳುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಅವರು ಸಮ್ಮಿಶ್ರ ಸರಕಾರ ಕೆಡವಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿಯೇ ಅವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಈ ವಿಚಾರಕ್ಕೆ ಯಾರೂ ಹೆಚ್ಚು ಮನ್ನಣೆ ನೀಡಬೇಡಿ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ 5 ವರ್ಷ ಸುಭದ್ರವಾಗಿರಲಿದೆ ಎಂದು ಹೇಳಿದರು. 

ಸೋಮವಾರ ಮುಖ್ಯಮಂತ್ರಿ ಅವರೊಂದಿಗಿನ ನಿಯೋಗ ದೆಹಲಿಗೆ ತೆರಳಿ ಪ್ರಧಾನಿ ಅವರನ್ನು ಭೇಟಿ ಮಾಡಿ ಕೊಡಗು ಹಾಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಮುಂದಿಟ್ಟಿದ್ದೆವು. ಕೊಡಗಿನ ನೆರೆ ಪರಿಸ್ಥಿತಿ ಅವಲೋಕಿಸಲು ಕೇಂದ್ರದಿಂದ ತಂಡ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲೂ ಅನಾವೃಷ್ಟಿ ಉಂಟಾಗಿದ್ದು 8 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ. ಈ ಭಾಗದಲ್ಲೂ ಅಧ್ಯಯನ ನಡೆಸಲು ತಂಡ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.

Trending News