)
Gavisiddheshwara Jatra: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು. 2026ರ ಮಹಾರಥೋತ್ಸವದ ಈ ಸಂಭ್ರಮಕ್ಕೆ ಈ ಬಾರಿ ವಿಶೇಷ ಮೆರುಗು ಬಂದಿತ್ತು. ಮೇಘಾಲಯ ರಾಜ್ಯದ ರಾಜ್ಯಪಾಲರಾಗಿರುವ ಗೌರವಾನ್ವಿತ ಹೆಚ್.ಸಿ. ವಿಜಯಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಮೈಸೂರುಪಾಕ್-ಪ್ರಸಾದದ ಘಮಲು ಹಾಗೂ ಅಜ್ಜನ ದರ್ಶನಕ್ಕಾಗಿ ಹರಿದು ಬಂದ ಜನಸಾಗರ.
ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ತಲೆ ಎತ್ತಿ ನಿಂತಿರುವ ಭಕ್ತರ ಸಮೂಹ.. ಇರುವೆ ಸಾಲಿನಂತೆ ಸಾಗುತ್ತಿರುವ ಜನರ ದಂಡು.. ಇದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಕಂಡುಬಂದ ದೃಶ್ಯ. ಹೌದು, ಜಾತ್ರೆ ಎಂದರೆ ಅದು ಗವಿಸಿದ್ದಪ್ಪನ ಜಾತ್ರೆ ಎಂಬ ಮಾತನ್ನು ಈ ಬಾರಿಯೂ ಭಕ್ತರು ಸಾಬೀತುಪಡಿಸಿದ್ದಾರೆ.2026ರ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಉತ್ತರ ಪ್ರದೇಶದ ಕುಂಭಮೇಳದಂತೆ ಜನಸಾಗರವೇ ಹರಿದು ಬಂದಿತ್ತು. ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲರಾದ ಹೆಚ್.ಸಿ. ವಿಜಯಶಂಕರ್ ಅವರು ಧ್ವಜಾರೋಹಣ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ವಿಶೇಷವೆಂದರೆ, ವಿಜಯಶಂಕರ್ ಅವರು ಕೊಪ್ಪಳದ ಮಣ್ಣಿನವರೇ ಆಗಿದ್ದು, ತವರು ನೆಲದ ಜಾತ್ರೆಯಲ್ಲಿ ರಾಜ್ಯಪಾಲರಾಗಿ ಪಾಲ್ಗೊಂಡಿದ್ದು ಭಕ್ತರಲ್ಲಿ ಮತ್ತಷ್ಟು ಉತ್ಸಾಹ ತುಂಬಿತ್ತು.
ಇನ್ನೂ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ 'ಗವಿಸಿದ್ದೇಶ್ವರ ಮಹಾರಾಜ್ ಕೀ ಜೈ' ಎಂಬ ಘೋಷಣೆ ಮುಗಿಲು ಮುಟ್ಟಿತು. ಸುಮಾರು 8 ರಿಂದ 10 ಲಕ್ಷ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಕೇವಲ ಭಕ್ತಿಯಷ್ಟೇ ಅಲ್ಲ, ಇಲ್ಲಿನ ದಾಸೋಹ ಕೂಡ ಜಗತ್ಪ್ರಸಿದ್ಧ. ಈ ಬಾರಿ ದಾಖಲೆ ಪ್ರಮಾಣದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸರಿಸುಮಾರು 25 ಲಕ್ಷ ಜೋಳದ ರೊಟ್ಟಿ, 20ಲಕ್ಷ ಮೈಸೂರುಪಾಕ್, 500 ಕ್ವಿಂಟಾಲ್ ಮಾದಲಿ ಹಾಗೂ ಹತ್ತಾರು ಬಗೆಯ ಪಲ್ಲೆ ವ್ಯವಸ್ಥೆಯನ್ನ ಭಕ್ತರೇ ಸ್ವಯಂಪ್ರೇರಿತರಾಗಿ ಮಾಡಿದ್ದರು. ರಾಜ್ಯಪಾಲ ವಿಜಯಶಂಕರ್ ಅವರು ತಮ್ಮ ಭಾಷಣದಲ್ಲಿ, "ನನ್ನ ತವರು ಜಿಲ್ಲೆಯ ಈ ಭಕ್ತಿ ಪರಕಾಷ್ಠೆ ಕಂಡು ಧನ್ಯನಾದೆ" ಎಂದು ಭಾವುಕರಾದರು.
ಸಮಾಜಮುಖಿ ಕಳಕಳಿಯ ಜಾತ್ರೆ
ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಕಳಕಳಿಯ ಸಂದೇಶ ಸಾರಿತು. ಪರಿಸರ ಸಂರಕ್ಷಣೆ ಮತ್ತು ಜಲಜಾಗೃತಿಯ ಘೋಷಣೆಗಳೊಂದಿಗೆ ಸಾಗಿದ ಈ ಜಾತ್ರೆ, ಆಧುನಿಕ ಕಾಲದಲ್ಲೂ ಸಂಪ್ರದಾಯ ಮತ್ತು ಸಮಾಜಸೇವೆಯ ಸಂಕೇತವಾಗಿ ನಿಂತಿದೆ. ಜಿಲ್ಲಾಡಳಿತ ಹಾಗೂ ಮಠದ ಸ್ವಯಂಸೇವಕರು ಶಿಸ್ತಿನ ವ್ಯವಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಅಜ್ಜನ ಪಾದಸ್ಪರ್ಶ ಮಾಡಿ, ಮಹಾಪ್ರಸಾದ ಸ್ವೀಕರಿಸಿದ ಭಕ್ತರು ಪುನೀತರಾದರು. ಒಟ್ಟಿನಲ್ಲಿ, ಗವಿಸಿದ್ದೇಶ್ವರ ಜಾತ್ರೆಯು ಜನಸಂಖ್ಯೆ, ಭಕ್ತಿ ಮತ್ತು ದಾಸೋಹದ ವಿಚಾರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಗವಿಶ್ರೀಗಳ ಆಶೀರ್ವಾದ ನಾಡಿನ ಜನತೆಯ ಮೇಲೆ ಸದಾ ಇರಲಿ ಎಂಬ ಹಾರೈಕೆಯೊಂದಿಗೆ ಈ ಬಾರಿಯ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ.